ADVERTISEMENT

ಇಕ್ಕಳಕಿ: ತುಂಬಿದ ಚರಂಡಿ, ರಸ್ತೆಗಳಲ್ಲಿ ದುರ್ವಾಸನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:19 IST
Last Updated 13 ಜುಲೈ 2025, 3:19 IST
ಆಳಂದ ತಾಲ್ಲೂಕಿನ ಇಕ್ಕಳಕಿ ಗ್ರಾಮದಲ್ಲಿನ ಅಂಬೇಡ್ಕರ್ ಬಡಾವಣೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು
ಆಳಂದ ತಾಲ್ಲೂಕಿನ ಇಕ್ಕಳಕಿ ಗ್ರಾಮದಲ್ಲಿನ ಅಂಬೇಡ್ಕರ್ ಬಡಾವಣೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು   

ಆಳಂದ: ತಾಲ್ಲೂಕಿನ ಮೋಘಾ (ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇಕ್ಕಳಕಿ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಇಲ್ಲಿನ ಚರಂಡಿಯಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತುಂಬಿಕೊಂಡಿದ್ದರಿಂದ ಚರಂಡಿ ನೀರು ಹರಿದು ಹೋಗದೆ ನಿಂತಲ್ಲೇ ನಿಂತು ಗಬ್ಬು ದುರ್ವಾಸನೆ ಹುಟ್ಟಿಕೊಂಡು ಸೊಳ್ಳೆಗಳ ಕಾಟ ವಿಪರೀತವಾಗಿದೆ.

ಜನರು ಅನೈರ್ಮಲ್ಯದಿಂದ ಬೇಸತ್ತು ಹೋಗಿದ್ದು ನಿತ್ಯ ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ದಾಳಿ ಹೆಚ್ಚಾಗುವುದರ ಜೊತೆಗೆ ಚರಂಡಿಯ ಗಬ್ಬು ದುರ್ವಾಸನೆಯಿಂದ ಮೂಗು ಮುಚ್ಚಿ ಅಲೆದಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಸಣ್ಣ ಮಕ್ಕಳು, ವೃದ್ಧರಿಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇಲ್ಲಿನ ಜನರು ನಿತ್ಯ ಅಸ್ಪ್ರತೆಗೆ ಓಡಾಡುವ ಪರಿಸ್ಥಿತಿ ಉಂಟುವಾಗಿದೆ.

ರಸ್ತೆ ಮೇಲೆ ಚರಂಡಿ ನೀರು ಚೆಲ್ಲಾಪಿಲ್ಲಿಯಾಗಿ ಹರಿದಾಡುತ್ತಿರುವುದರಿಂದ ದೊಡ್ದ ದೊಡ್ಡ ತಗ್ಗು ಗುಂಡಿಗಳು ಬಿದ್ದಿದ್ದು, ನಿತ್ಯ ರಸ್ತೆಯ ಮೇಲೆ ಓಡಾಡುವ ಜನರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. 

ADVERTISEMENT

ವಾರ್ಡ್‌ನ ಸ್ವಚ್ಛತೆ ಮಾಡುವಂತೆ ಸಂಬಂಧಪಟ್ಟ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಆಡಳಿತಾಧಿಕಾರಿಗಳಿಗೆ ಹೇಳಿಕೊಂಡರೂ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಂಬೇಡ್ಕರ್ ಬಡಾವಣೆಯ ನಿವಾಸಿ ಅಮರ ನಡಗೇರಿ, ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ಸರಿಯಾದ ಸಿ.ಸಿ ರಸ್ತೆಗಳಿಲ್ಲ. ಬಚ್ಚಲದ ಕೊಳಚೆ ನೀರು ರಸ್ತೆಯಲ್ಲೇ ಹರಿದಾಡುತ್ತಿದ್ದು, ರಸ್ತೆ ಯಾವುದೋ, ಚರಂಡಿ ಯಾವುದೋ ಎನ್ನುವುದು ಗೊತ್ತಾಗುತ್ತಿಲ್ಲ. ಈ ದುಃಸ್ಥಿತಿಯನ್ನು ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದ್ದರೂ ಈವರೆಗೆ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.