
ಕಲಬುರಗಿ: ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮರಳು ಅಕ್ರಮ ಗಣಿಗಾರಿಕೆ ನಡೆಯಲು ಪ್ರೋತ್ಸಾಹಿಸುತ್ತಿದ್ದು, ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅಕ್ರಮ ತಡೆಯಲು ವಿಫಲವಾದ ಜಿಲ್ಲಾಮಟ್ಟದ ಮರಳು ಜಾಗೃತಿ ಸಮಿತಿಯನ್ನು ಕೂಡ ಅಮಾನತು ಮಾಡಬೇಕು’ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮತ್ತು ಪಕ್ಷದ ಮುಖಂಡ ಅಂಬಾರಾಯ ಅಷ್ಠಗಿ ಆಗ್ರಹಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ತಾಪುರ ಮತಕ್ಷೇತ್ರದ ಭಾಗೋಡಿ, ಮಾಡಬೂಳ, ಕಾಟಮದೇವರಹಳ್ಳಿಯಲ್ಲಿ ನೂರಾರು ಟಿಪ್ಪರ್ ಮತ್ತು ಟ್ರ್ಯಾಕ್ಟರ್‌ಗಳಿಂದ ಹಗಲು ರಾತ್ರಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅದರಂತೆ ಶಹಾಬಾದ್ ವ್ಯಾಪ್ತಿಯಲ್ಲಿ ಬರುವ ಭಂಕೂರ, ಮುದ್ದರಕಾ, ಕದ್ದರಕಿ ಹಳ್ಳಿಗಳ ಪಕ್ಕದ ಕಾಗಿಣಾ ನದಿಯಲ್ಲಿ ಪ್ರತಿದಿನ 41 ಟಿಪ್ಪರ್ ಮತ್ತು 200 ಟ್ರ್ಯಾಕ್ಟರ್‌ಗಳಿಂದ ಪೊಲೀಸ್, ಕಂದಾಯ, ಸಾರಿಗೆ ಮತ್ತು ಗಣಿ ಇಲಾಖೆಯವರಿಗೆ ಲಂಚ ಕೊಟ್ಟು ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ’ ಎಂದು ದೂರಿದರು.
‘ಮರಳು ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತಿದ್ದು, ಅಕ್ರಮ ಹಣದಿಂದ ಕೊಲೆ ಸೇರಿ ಅಪರಾಧ ಕೃತ್ಯಗಳು ನಡೆಯುತ್ತಿವೆ. ಇದರಿಂದ ಸಮಾಜದಲ್ಲಿ ಅಶಾಂತಿ ಮೂಡಿ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿಲ್ಲ. ಇವರನ್ನು ಸಹ ಸರ್ಕಾರ ಅಮಾನತುಗೊಳಿಸಿ ಎತ್ತಂಗಡಿ ಮಾಡಬೇಕು’ ಎಂದು ಆಗ್ರಹಿಸಿದರು.
‘ಈ ಹಿಂದೆ ಚಿತ್ತಾಪುರ ಮತಕ್ಷೇತ್ರದಲ್ಲಿ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಹೋರಾಟ ಮಾಡಿದರೂ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಗಣಿ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ 237 ಪ್ರಕರಣಗಳು ದಾಖಲಾಗಿ ₹93.93 ಲಕ್ಷ ದಂಡ ವಿಧಿಸಿದ್ದೇವೆ. 81 ಎಫ್‌ಐಆರ್ ಆಗಿವೆ ಎಂದು ತಿಳಿಸಿರುತ್ತಾರೆ. ಇಷ್ಟೆಲ್ಲ ಪ್ರಕರಣಗಳು ಆಗುವವರೆಗೆ ಪೊಲೀಸ್, ಕಂದಾಯ, ಸಾರಿಗೆ ಮತ್ತು ಗಣಿ ಇಲಾಖೆಯವರು ಏನು ಮಾಡುತ್ತಿದ್ದರು?’ ಎಂದು ಪ್ರಶ್ನಿಸಿದರು.
ಮುಖಂಡರಾದ ಬಸವರಾಜ ಸಪ್ಪನಗೋಳ, ಬಸವರಾಜ ಬೆಣ್ಣೂರ, ತಮ್ಮಣ್ಣ ಡಿಗ್ಗಿ, ಸುರೇಶ ಬೆನಕನಹಳ್ಳಿ, ಗಿರೀಶ ಭಜಂತ್ರಿ, ಬಸವರಾಜ ಗುಂಡಲಗೇರಿ, ರವಿಚಂದ್ರ ಕ್ರಾಂತಿಕರ್, ಗಣೇಶ ವಳಕೇರಿ ಇದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಡಾ.ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನ ನಿಮಿತ್ತ ಅವರ ಮೂರ್ತಿಗೆ ಗೌರವ ಸಲ್ಲಿಸಲು ತಡವಾಗಿ ಅಂದರೆ ಬೆಳಿಗ್ಗೆ 10ಕ್ಕೆ ಬಂದಿದ್ದಾರೆ. ಇದು ಅಂಬೇಡ್ಕರ್‌ಗೆ ಮಾಡಿದ ಅವಮಾನ. ಇದನ್ನು ಬಿಜೆಪಿ ಖಂಡಿಸುತ್ತದೆಅಂಬಾರಾಯ ಅಷ್ಠಗಿ ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.