ADVERTISEMENT

ಅಫಜಲಪುರ: ಅಕ್ರಮ ಶೆಡ್‌ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 14:49 IST
Last Updated 12 ಆಗಸ್ಟ್ 2023, 14:49 IST
ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪುರಸಭೆ ವತಿಯಿಂದ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಲಾಯಿತು
ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪುರಸಭೆ ವತಿಯಿಂದ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಲಾಯಿತು   

ಅಫಜಲಪುರ: ಪುರಸಭೆ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಹಲವು ವರ್ಷಗಳಿಂದ ಹಾಕಲಾಗಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆ ಶನಿವಾರ ನಡೆಸಲಾಯಿತು.

ಬಸವೇಶ್ವರ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗಿನ ಎರಡು ಬದಿಯ ಗೂಡಂಗಡಿಗಳನ್ನು ತೆರವು ಮಾಡಲಾಯಿತು.ತೆರವು ಕಾರ್ಯಾಚರಣೆಯಿಂದ ಸುಮಾರು ಇಪ್ಪತ್ತು ವರ್ಷಗಳಿಂದ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸುಮಾರು 100 ಕುಟುಂಬಗಳು ಬೀದಿ ಪಾಲಾಗಿವೆ.

‘ನಾವು ಹಲವು ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೆವು. ವ್ಯಾಪಾರಕ್ಕಾಗಿ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದೇವೆ. ಅದನ್ನು ತೀರಿಸುವುದು ಒಂದು ಕಡೆಯಾದರೆ, ಜೀವನ ನಿರ್ವಹಣೆಯು ಒಂದು ಪ್ರಶ್ನೆಯಾಗಿದೆ. ಪುರಸಭೆಯವರು ವ್ಯಾಪಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಶೆಡ್ ಕಳೆದುಕೊಂಡ ಸುನೀಲ ಬಳೂರಗಿ, ರೇವಪ್ಪ ಕಡಕೋಳ, ಮೈಬೂಬ ಮುಜಾವರ ನೋವು ತೋಡಿಕೊಂಡರು.

ADVERTISEMENT

ರಸ್ತೆ ವಿಸ್ತರಣೆ ತೆರವು ಕಾರ್ಯಾಚರಣೆ ಮುಗಿದಿದೆ. ಇನ್ನೂ ರಸ್ತೆಗೆ ಹೊಂದಿಕೊಂಡಿರುವ ಕೆಲ ಕಟ್ಟಡ ತೆರವುಗೊಳಿಸಲು ಸಂಬಂಧಪಟ್ಟ ಮಾಲೀಕರಿಗೆ ತಿಳಿಸಲಾಗಿದ್ದು,ರಸ್ತೆಯ ಎರಡು ಬದಿಯಲ್ಲಿ 50 ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ. ರಸ್ತೆ ವಿಸ್ತರಣೆ ಕಾರ್ಯಕ್ಕೆ ವ್ಯಾಪಾರಿಗಳು ಸಹಕರಿಸಿದ್ದು, ಘತ್ತರಗಾ ರಸ್ತೆ ಬದಿಯಲ್ಲಿರುವ ಪುರಸಭೆಯ 6 ವ್ಯಾಪಾರ ಮಳೆಗೆಗಳಿದ್ದು ಅವುಗಳ ಟೆಂಡರ್ ಕರೆದು ವ್ಯಾಪಾರಸ್ಥರಿಗೆ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ತಿಳಿಸಿದರು.

ಕಾರ್ಯಾಚರಣೆಯಲ್ಲಿ ತಹಶೀಲ್ದಾರ ಸಂಜೀವಕುಮಾರ ದಾಸರ, ಸಿಪಿಐ ಪಂಡಿತ್ ಸಗರ, ಪಿಎಸ್ಐ ಮಡಿವಾಳಪ್ಪ ಬಾಗೋಡಿ ಪಾಲ್ಗೊಂಡಿದ್ದರು.

ನಗರೋತ್ಥಾನ ಹಂತ 4 ರ ಯೋಜನೆಯಡಿ ಸುಮಾರು ₹ 435.30 ಲಕ್ಷ ಅನುದಾನದಲ್ಲಿ ರಸ್ತೆ ವಿಸ್ತರಣೆ, ಚರಂಡಿ ಹಾಗೂ ಬೀದಿ ದ್ವೀಪ ಅಳವಡಿಕೆ ಕಾಮಗಾರಿಗೆ  ಕೆಲವು ದಿನಗಳ ಹಿಂದೆ ಶಾಸಕ ಎಂ.ವೈ.ಪಾಟೀಲ್ ಅಡಿಗಲ್ಲು ನೆರವೇರಿಸಿದ್ದರು.

‘ರಸ್ತೆ ವಿಸ್ತರಣೆ ಕಾಮಗಾರಿಯಿಂದ ಶೆಡ್ ಕಳೆದುಕೊಂಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಶೀಘ್ರವೇ ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹಳೆಯ ಪುರಸಭೆ ಕಟ್ಟಡದ ವರೆಗೆ ರಸ್ತೆ ಮೇಲಿರುವ ಅನಧಿಕೃತ ಶೆಡ್, ಅಫಜಲಪುರ–ಸೋಲಾಪೂರ ರಸ್ತೆ ಬದಿಯ ಶೆಡ್‌ಗಳನ್ನು ತೆರವುಗೊಳಿಸಲಾಗುವುದು’ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು. 

ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪುರಸಭೆಯಿಂದ ಅಕ್ರಮ ಶೆಡ್ ಗಳನ್ನು ತೆರವುಗೊಳಿಸಿ ಶೆಡ್ ಟ್ರಾಕ್ಟರ್ ಮೂಲಕ ಸಾಗಿಸುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.