ಕಲಬುರಗಿ: ವ್ಯಾಪಕ ಮಳೆಯಿಂದ ಕಲ್ಯಾಣ ಕರ್ನಾಟಕ ಭಾಗದ ಹಲವೆಡೆ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ 603 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು, ಈ ಪೈಕಿ ಮುಂಗಾರು ಮಳೆಗೆ 31.20 ಹೆಕ್ಟೇರ್ ಬೆಳೆ ಹಾನಿಯಾಗಿದೆ.
‘ಐದು ಎಕರೆ ಜಮೀನಿನಲ್ಲಿ ಎರಡು ತಿಂಗಳ ಹಿಂದೆ ಹನಿ ನೀರಾವರಿ ಬಳಸಿಕೊಂಡು ಈರುಳ್ಳಿ ಬಿತ್ತಿದ್ದೆ. ಆಗಸ್ಟ್‌ನಲ್ಲಿ ಸುರಿದ ನಿರಂತರ ಮಳೆಯಿಂದ ಈರುಳ್ಳಿ ಬೆಳೆ ಸಂಪೂರ್ಣ ಕೊಳೆತಿದೆ. ವೆಚ್ಚ ಮಾಡಿದ್ದ ₹1 ಲಕ್ಷ ಮಣ್ಣು ಪಾಲಾಗಿದೆ’ ಎಂದು ಅಫಜಲಪುರ ತಾಲ್ಲೂಕಿನ ಹಸರಗಂಡಗಿ ಗ್ರಾಮದ ಈರುಳ್ಳಿ ಬೆಳೆಗಾರ ಮರೆಪ್ಪ ವಾಲಿಕಾರ ಅಳಲು ತೋಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಮಳೆಯಿಂದ 11 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಹಾನಿಯಾಗಿದೆ. ಬೀದರ್ ಜಿಲ್ಲೆಯಲ್ಲಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು.
ಬೆಳೆ ಹಾನಿ ಬಗೆಗೆ ಇನ್ನೂ ಸಮೀಕ್ಷೆ ನಡೆಯುತ್ತಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಅಂದಾಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.