ADVERTISEMENT

ಹೆಚ್ಚಿದ ಅಂತರ್ಜಲ; ಬಾವಿ, ಬೋರ್‌ವೆಲ್‌ಗಳಲ್ಲಿ ಜೀವಜಲ

‘ಶಿರಪುರ ಮಾದರಿ ಜಲಸಂಗ್ರಹ’ ಪ್ರಾಯೋಗಿಕ ಯೋಜನೆ ಯಶಸ್ಸು

ಸಂತೋಷ ಈ.ಚಿನಗುಡಿ
Published 9 ಜುಲೈ 2019, 20:03 IST
Last Updated 9 ಜುಲೈ 2019, 20:03 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಚೆಕ್‌ಡ್ಯಾಂನಲ್ಲಿ ಸಂಗ್ರಹಗೊಂಡ ನೀರನ್ನು ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಂಗಳವಾರ ವೀಕ್ಷಿಸಿದರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಚೆಕ್‌ಡ್ಯಾಂನಲ್ಲಿ ಸಂಗ್ರಹಗೊಂಡ ನೀರನ್ನು ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಂಗಳವಾರ ವೀಕ್ಷಿಸಿದರು   

ಕಲಬುರ್ಗಿ: ಅಂತರ್ಜಲ ಹೆಚ್ಚಳಕ್ಕೆ ಆಳಂದ ತಾಲ್ಲೂಕಿನ ವಿವಿಧೆಡೆ ಕೈಗೆತ್ತಿಕೊಂಡಿರುವ ‘ಶಿರಪುರ ಮಾದರಿ ಜಲಸಂಗ್ರಹ’ ಯೋಜನೆಯ ಪ್ರಾಯೋಗಿಕ ಕಾಮಗಾರಿಗೆ ಯಶಸ್ಸು ಸಿಕ್ಕಿದೆ. ಈಚೆಗೆ ಸುರಿದ ಒಂದು ಮಳೆಯಿಂದ ಕೆರೆ, ಕಟ್ಟೆ, ಬಾವಿಗಳಲ್ಲಿ ನೀರು ತುಂಬಿದ್ದು, ಜೀವಕಳೆ ಮರಳಿದೆ.

ನೈಸರ್ಗಿಕ ಕಾಲುವೆ, ತೊರೆ, ಜರಿ, ಕಟ್ಟೆಗಳನ್ನೇ ತುಸು ಅಭಿವೃದ್ಧಿ ಪಡಿಸಿ, ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗಿದೆ.ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಶಿರಪುರ ಎಂಬಲ್ಲಿ ಮೊದಲು ಈ ಪ್ರಯೋಗ ಮಾಡಲಾಯಿತು. ಆ ಹಳ್ಳಿಯ ಸುತ್ತಲೂ ಅಂತರ್ಜಲ ಭರಪೂರ ಆಯಿತು. ಇದರಿಂದ ಉತ್ತೇಜನಗೊಂಡ ಅಲ್ಲಿನ ಸರ್ಕಾರ ₹ 1,700 ಕೋಟಿ ಅನುದಾನ ನೀಡಿ, ರಾಜ್ಯದಾದ್ಯಂತ ಯೋಜನೆ ಜಾರಿ ಮಾಡಿದೆ.

ಕಳೆದ ಅವಧಿಯಲ್ಲಿ ಆಳಂದ ಶಾಸಕರಾಗಿದ್ದ ಬಿ.ಆರ್‌.ಪಾಟೀಲ ಇದನ್ನು ರಾಜ್ಯಕ್ಕೆ ಪರಿಚಯಿಸಿದರು. ತಾಲ್ಲೂಕಿನ ಮಾದನ ಹಿಪ್ಪರಗಾ, ಸರಸಂಬಾ, ಕಿಣ್ಣಿ ಸುಲ್ತಾನ್‌ಪುರ, ರುದ್ರವಾಡಿ, ಜಂಬಗಾ, ಬಸವನ ಸಂಗೊಳಗಿ, ಧುತ್ತರಗಾಂವ, ಪಡಸಾವಳಗಿ, ಸಕ್ಕರಗಿ, ಬಸವನ ಸಂಗೊಳ್ಳಿಯಲ್ಲಿ ಕಾಮಗಾರಿ ಮುಗಿದಿದೆ. ಈ ಗ್ರಾಮಗಳ ಬಹುಪಾಲು ರೈತರು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ.

ADVERTISEMENT

ಮೂರು ವರ್ಷಗಳಿಂದ ಆಳಂದ ತಾಲ್ಲೂಕು ಕೂಡ ಭೀಕರ ಬರದಿಂದ ನಲುಗಿದೆ. ಬಾವಿ, ಕೊಳವೆಬಾವಿ ಬತ್ತಿದ್ದರಿಂದ, ರೈತರು ಬೆಳೆಗಳಿಗೂ ಟ್ಯಾಂಕರ್‌ ಮೂಲಕ ನೀರು ಹಾಕಿದ್ದಾರೆ. ಆದರೆ, ಜುಲೈ ಮೊದಲ ವಾರದಲ್ಲಿ ಬಿದ್ದ 80 ಮಿ.ಮೀ. ಮಳೆಗೆ ಈ ಚೆಕ್‌ಡ್ಯಾಂಗಳು ಮೈದುಂಬಿಕೊಂಡಿವೆ. ಬಾವಿಗಳಲ್ಲಿ 12 ಅಡಿಗೂ ಹೆಚ್ಚು ಆಳ ನೀರು ಸಂಗ್ರಹಗೊಂಡಿದೆ. ಚೆಕ್‌ಡ್ಯಾಂನಲ್ಲಿ ನಿಂತ ನೀರನ್ನು ಕೃಷಿ ಹೊಂಡಗಳಿಗೂ ತುಂಬಿಸಿಕೊಂಡಿದ್ದಾರೆ. ಜನ, ಜಾನುವಾರುಗಳ ಕುಡಿಯುವ ಉದ್ದೇಶಕ್ಕೂ ಇದನ್ನು ಬಳಸಿಕೊಳ್ಳುತ್ತಿದ್ದಾರೆ.

ಯೋಜನೆಯ ವಿವರ: ಆರು ಕಡೆಗಳಲ್ಲಿ ಒಟ್ಟು 56 ಕಿ.ಮೀ. ಉದ್ದದ ನಾಲೆ ನಿರ್ಮಿಸಲಾಗಿದ್ದು, ಇದರಲ್ಲಿ 50 ಚೆಕ್‌ಡ್ಯಾಂ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಮೂಲಕ ಅನುಷ್ಠಾನ ಗೊಳಿಸಲಾಗುತ್ತಿದ್ದು, ಇದಕ್ಕೆ ₹ 22.59 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಮಾದನ ಹಿಪ್ಪರಗಾ ರೈತ ರಾಜಶೇಖರ ಗಡ್ಡದ ಅವರು ಒಂದು ಕೋಟಿ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ₹ 6 ಲಕ್ಷ ವೆಚ್ಚಮಾಡಿದ್ದಾರೆ. ಚೆಕ್‌ಡ್ಯಾಂನ ನೀರು ಬಾವಿಗೆ ಸೇರುತ್ತದೆ. ಅಲ್ಲಿಂದ ಶುದ್ಧ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿದ್ದಾರೆ.

‘ಮಹಾರಾಷ್ಟ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ‘ಜಲಯುಕ್ತ ಶೀವಾರ (ಜಲಯುಕ್ತ ಪ್ರದೇಶ)’ ಎಂದು ಹೆಸರಿಟ್ಟಿದ್ದು, ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ. ಅಷ್ಟರಮಟ್ಟಿಗೆ ಅಲ್ಲಿನ ರೈತರು ಈ ಯೋಜನೆಯಿಂದ ಪ್ರೇರೇಪಿತರಾಗಿದ್ದಾರೆ. ಇಂಥದ್ದೇ ಪ್ರಯೋಗವನ್ನು ನಮ್ಮ ರಾಜ್ಯದಲ್ಲಿಯೂ ಎಲ್ಲೆಡೆ ಮಾಡಬೇಕು’ ಎಂಬುದು ಬಿ.ಆರ್‌.ಪಾಟೀಲ ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.