ADVERTISEMENT

‘ಸಂವಿಧಾನ ಮರೆತರೆ ಭಾರತಕ್ಕಿಲ್ಲ ಭವಿಷ್ಯ’

ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:24 IST
Last Updated 27 ನವೆಂಬರ್ 2025, 5:24 IST
ಕಲಬುರಗಿಯ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಕಲಬುರಗಿಯ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು   

ಕಲಬುರಗಿ: ‘ಡಾ. ಬಿ.ಆರ್‌.ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಮರೆತರೆ, ಭಾರತಕ್ಕೆ ಭವಿಷ್ಯವಿಲ್ಲ’ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆಯು ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನ ಎಲ್ಲವನ್ನೂ ನೀಡಿದೆ. ದೇಶದ ಪ್ರತಿಯೊಬ್ಬರೂ ಸಂವಿಧಾನದ ಋಣದಲ್ಲಿ ಬದುಕುತ್ತಿದ್ದೇವೆ. ಸಂವಿಧಾನ ಕೆಲವೇ ಜಾತಿಗಳಿಗೆ ಸಂಬಂಧಿಸಿದ್ದಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಸಂವಿಧಾನ ಪೂರ್ವ ಭಾರತದಲ್ಲಿ ಬಹುಸಂಖ್ಯಾತರಿಗೆ ಅಕ್ಷರ ಕಲಿಯುವ ಅವಕಾಶ ಇರಲಿಲ್ಲ. ಮಹಾಭಾರತದ ಏಕಲವ್ಯ, ರಾಮಾಯಣದ ಶಂಬೂಕ, ಗುಣಾಡ್ಯನನ್ನು ನಾಶ ಮಾಡಿದ್ದೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ವ್ಯವಸ್ಥೆ ಬದಲಾಯಿಸಲು ಬುದ್ಧ, ಬಸವಣ್ಣ ಸೇರಿ ಹಲವರು ಶ್ರಮ ಪಟ್ಟಿದ್ದಾರೆ. ಬಾಬಾ ಸಾಹೇಬರು ಜಾತೀಯತೆ ಹಾಗೂ ಅಸ್ಪೃಶ್ಯತೆಯನ್ನೇ ಉಸಿರಿದ ಮನುಸ್ಮೃತಿಯನ್ನು ಸುಟ್ಟು, ಅದಕ್ಕೆ ಪರ್ಯಾಯವಾಗಿ ಸಂವಿಧಾನ ಎನ್ನುವ ಬಹುದೊಡ್ಡ ಗ್ರಂಥ ಕೊಟ್ಟರು’ ಎಂದರು.

‘ಅಂಬೇಡ್ಕರ್ ಅವರು ಮಡಿದ ನಂತರವೂ ಅಸಮಾನತೆಗೆ ಒಳಗಾಗುತ್ತಲೇ ಇದ್ದಾರೆ. ಸಂವಿಧಾನದಿಂದ ಎಲ್ಲ ಸಿಕ್ಕಿದ್ದರೂ ಕೆಲವರಿಗೆ ಅಂಬೇಡ್ಕರ್ ಹಾಗೂ ಅವರು ರಚಿಸಿದ ಸಂವಿಧಾನದ ಮೇಲೆ ಇನ್ನೂ ಅನುಮಾನಗಳಿವೆ. ಬಾಬಾ ಸಾಹೇಬರು ಸಂವಿಧಾನ ಬರೆದಿಲ್ಲ ಎನ್ನುತ್ತಾರೆ. ಅಂಬೇಡ್ಕರ್ ಅವರು ಅಕ್ಷರ ವಂಚಿತ ಸಮುದಾಯದಿಂದ ಬಂದು ಇಷ್ಟು ದೊಡ್ಡ ಸಾಧನೆ ಮಾಡಿದ್ದೆ ಇದಕ್ಕೆ ಕಾರಣ’ ಎಂದು ಹೇಳಿದರು.

‘ಸಂವಿಧಾನ ಜಾರಿಯ ಸಂದರ್ಭದಲ್ಲಿ ಬಾಬಾ ಸಾಹೇಬರು ಭವಿಷ್ಯ ಭಾರತಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದರು. ನಾವು ಹೊಸ ಭಾರತವನ್ನು ಪ್ರವೇಶಿಸಿದ್ದೇವೆ. ರಾಜಕೀಯ ಸಮಾನತೆ ಸಾಧಿಸಿದ್ದೇವೆ. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಇನ್ನೂ ಜೀವಂತವಾಗಿದೆ. ಇದನ್ನು ನಿರ್ಮೂಲನೆ ಮಾಡದಿದ್ದರೆ ಕೆಲವರು ಪ್ರಜಾಪ್ರಭುತ್ವ ವ್ಯವಸ್ಥೆ ನಾಶಪಡಿಸಲಿದ್ದಾರೆ ಎಂದಿದ್ದರು. ಅದನ್ನು ಭಾರತ ಗಂಭೀರವಾಗಿ ಕೇಳಿಸಿಕೊಂಡಿಲ್ಲ. ಇದು ಮಾತು ಕೇಳಿಸಿಕೊಳ್ಳದ ಭಾರತ. ಬುದ್ಧರ ಮಾತನ್ನು ಕೇಳಿಸಿಕೊಳ್ಳದೇ ಹೊರ ಹಾಕಿದೆವು. ವಚನಕಾರರ ಮಾತಿಗೂ ಕಿವಿಯಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಈ ದೇಶದ ಜನ ಒಗ್ಗಟ್ಟಾಗಿ ಬದುಕಲು ಸಂವಿಧಾನ ಕೊಟ್ಟ ಪುಣ್ಯಾತ್ಮ ಅಂಬೇಡ್ಕರ್. ಇವತ್ತು ವಿಶೇಷ ದಿನ. ದೇಶಕ್ಕೆ ಹಬ್ಬದ ದಿನ. ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಪರಿಸ್ಥಿತಿ ಇತ್ತು. ಸಂವಿಧಾನ ಅದನ್ನು ಬದಲಾಯಿಸಿತು’ ಎಂದರು.

‘ಸಂವಿಧಾನ ಜಾರಿಗೆ ಬಂದ ನಂತರ ವಿಶ್ವಕ್ಕೆ ಎಲ್ಲವನ್ನೂ ಕೊಡುತ್ತಿದ್ದೇವೆ. ಪ್ರಜಾಪ್ರಭುತ್ವದ ಕಾರಣಕ್ಕೆ ನಮ್ಮ ದೇಶ ವಿಶ್ವದಲ್ಲೆಡೆ ಹೆಸರು ಮಾಡಿದೆ. ಸಂವಿಧಾನ ಬಂದ ಮೇಲೆ ಸಮಾನತೆ ಸಾಧ್ಯವಾಗಿದೆ’ ಎಂದು ಹೇಳಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ್, ಸಹಾಯಕ ನಿರ್ದೇಶಕ ವಿಜಯಕುಮಾರ ಫುಲಾರೆ, ಕರ್ನಾಟಕ ರಾಜ್ಯ ಎಸ್.ಸಿ, ಎಸ್.ಟಿ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬ್ಳಿ ಸೇರಿ ಹಲವರು ಹಾಜರಿದ್ದರು. 

ಸಂವಿಧಾನ ದಿನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು

ಸಂವಿಧಾನ ಜಾಗೃತಿ ಜಾಥಾ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಎಸ್‌ವಿಪಿ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥಾ ಜಗತ್ ವೃತ್ತದ ಮಾರ್ಗವಾಗಿ ಎಸ್‌.ಎಂ.ಪಂಡಿತ್ ರಂಗಮಂದಿರ ತಲುಪಿತು. ಸಾರೋಟದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರ ಹಾಗೂ ಸಂವಿಧಾನದ ಪೀಠಿಕೆ ಇಡಲಾಗಿತ್ತು. ಬುದ್ಧ ಬಸವಣ್ಣ ಹಾಗೂ ಬಾಬಾ ಸಾಹೇಬರ ವೇಷ ಧರಿಸಿದ್ದ ವಸತಿ ಶಾಲೆಯ ಮಕ್ಕಳು ಗಮನಸೆಳೆದರು. ವಿದ್ಯಾರ್ಥಿನಿಯರು ಲಂಬಾಣಿ ನೃತ್ಯ ಪ್ರದರ್ಶಿಸಿದರು. ಮಕ್ಕಳ ವಾದ್ಯಗೋಷ್ಠಿ ಮೆರವಣಿಗೆಗೆ ಮೆರುಗು ನೀಡಿತು. ವಿವಿಧ ವಸತಿ ಶಾಲೆಗಳ ಮಕ್ಕಳು ಶಿಕ್ಷಕರು ಹಾಗೂ ವಾರ್ಡನ್‌ಗಳು ಭಾಗವಹಿಸಿದ್ದರು.  ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ್ ಜಾನೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣವರ ಸೇರಿ ಹಲವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.