ADVERTISEMENT

ಭಾರತೀಯರ ಬದುಕಿಗೆ ಸಂವಿಧಾನವೇ ಬೆಳಕು: ಶಶಿಕಾಂತ ಉಡಿಕೇರಿ

‘ಸಂವಿಧಾನ’ ವಿಚಾರ ಸಂಕಿರಣ, ವಾಕಥಾನ್‌ನಲ್ಲಿ ಕುಲಪತಿ ಶಶಿಕಾಂತ ಉಡಿಕೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:48 IST
Last Updated 29 ಜನವರಿ 2026, 5:48 IST
ಗುಲಬರ್ಗಾ ವಿವಿಯಲ್ಲಿ ಹಮ್ಮಿಕೊಂಡಿದ್ದ ವಾಕಥಾನ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮರಿಲಿಂಗಪ್ಪ ಪ್ರಮಾಣ ಪತ್ರ ವಿತರಿಸಿದರು
ಗುಲಬರ್ಗಾ ವಿವಿಯಲ್ಲಿ ಹಮ್ಮಿಕೊಂಡಿದ್ದ ವಾಕಥಾನ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮರಿಲಿಂಗಪ್ಪ ಪ್ರಮಾಣ ಪತ್ರ ವಿತರಿಸಿದರು   

ಕಲಬುರಗಿ: ‘ಭಾರತೀಯರ ಬದುಕಿಗೆ ಸಂವಿಧಾನವೇ ಬೆಳಕು; ಅದನ್ನು ಬಿಟ್ಟರೆ ಪ್ರಗತಿಯೇ ಸಾಧ್ಯವಿಲ್ಲ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ‘ಸಂವಿಧಾನವೇ ಬೆಳಕು’ ಅಭಿಯಾನದಡಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ವಿಚಾರ ಸಂಕಿರಣ ಹಾಗೂ ವಾಕಥಾನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘1947ರಲ್ಲಿ ಬ್ರಿಟಿಷರು ಹಾಗೂ ಅಲ್ಲಲ್ಲಿ ಆಳುತ್ತಿದ್ದ ರಾಜ ಮನೆತನಗಳ ಕಪಿಮುಷ್ಟಿಯಿಂದ ಭಾರತ ಸ್ವತಂತ್ರಗೊಂಡಿತು. ಆಗ ಈ ದೇಶದಲ್ಲಿ ಅಸಂಖ್ಯ ಭಿನ್ನತೆಗಳು, ಹಲವು ಧರ್ಮಗಳು, ಹಲವು ಜಾತಿಗಳು, ಹಲವು ತಾರತಮ್ಯಗಳಿದ್ದವು. ಜೊತೆಗೆ ಬಡತನ, ಅನಕ್ಷರತೆ ದೇಶವನ್ನು ಕಾಡುತ್ತಿದ್ದವು. ಇಂಥ ದೇಶವನ್ನು ಸುಗಮವಾಗಿ ಮುನ್ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಲು ಮಾರ್ಗದರ್ಶಿ ಗ್ರಂಥಬೇಕಿತ್ತು. ಡಾ.ಬಿ.ಆರ್‌.ಅಂಬೇಡ್ಕರ್ ರಚಿಸಿದ ‘ಸಂವಿಧಾನ’ದಿಂದ ಅದು ಸಾಕಾರವಾಯಿತು’ ಎಂದರು.

ADVERTISEMENT

‘ಅಂದಿನಿಂದ ಇಂದಿನ ತನಕ ಸಂವಿಧಾನದ ಫಲವಾಗಿ ದೇಶ ಅಭಿವೃದ್ಧಿ ಕಂಡಿದೆ. ಮಗು ಅಳದೇ ತಾಯಿಯೂ ಎದೆಹಾಲು ಕುಡಿಸಲ್ಲ. ನಾವೆಲ್ಲ ಆಗಾಗ ಹೋರಾಟದ ಧ್ವನಿ ಎತ್ತಿ ಭಾರತ ಮಾತೆಯ ಎದೆಹಾಲು ಕುಡಿದು ಇಂದು ಬೆಳೆದು ನಿಲ್ಲಲು ಶಕ್ತಿ ಕೊಟ್ಟಿದ್ದೇ ಸಂವಿಧಾನ. ಸಂವಿಧಾನ ಬಿಟ್ಟು ಯೋಚಿಸುವ ವಿಚಾರಗಳು, ಚಿಂತನೆಗಳು ಭವ್ಯ ಭಾರತಕ್ಕೆ ರಚನಾತ್ಮಕ, ಸಾಮಾಜಿಕ ಹಾಗೂ ಭೌಗೋಳಿಕವಾಗಿಯೂ ಅಪಾಯಕಾರಿ’ ಎಂದರು.

ಕುಲಸಚಿವ ಪ್ರೊ.ರಮೇಶ ಲಂಡನಕರ ಮಾತನಾಡಿ, ‘ಭಾರತವು ವಿಶ್ವಗುರು ಎನಿಸಿಕೊಳ್ಳಲು ಹೊರಟಿರುವುದಕ್ಕೆ ಪ್ರೇರಣೆಯೇ ಸಂವಿಧಾನ. ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಊಹಿಸಲು ಅಸಾಧ್ಯವಾದ ರೋಗಗ್ರಸ್ತ ಸಮಾಜವಿತ್ತು. ಅದಕ್ಕೆ ಸಂವಿಧಾನ ಮದ್ದಾಗಿ ಬಂತು. ಸಮಾಜದಲ್ಲಿನ ಶೋಷಣೆ, ಗುಲಾಮಗಿರಿಗೆ ಅಂತ್ಯ ಹಾಡಲು ಸಂವಿಧಾನ ಅಸ್ತ್ರವಾಯಿತು. ಒಂದೆಡೆ ಬುದ್ಧನ ಶಾಂತಿಯ ವಿಚಾರ, ಬಸವಣ್ಣವರ ಸಮಾನತೆಯ ವಿಚಾರದ ಆದಿಯಾಗಿ ಎಲ್ಲ ಉತ್ತಮ ಆಶಯ–ಅಂಶಗಳನ್ನು ಒಗ್ಗೂಡಿಸಿ ಸಂವಿಧಾನದ ಮೂಲಕ ದೇಶದಲ್ಲಿ ಸರ್ವರಿಗೂ ಸಮಪಾಲು–ಸಮಬಾಳು ಸಾಧ್ಯವಾಗಿಸಿದ ಕೀರ್ತಿ ಡಾ.ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಮಾತನಾಡಿದರು. ‘ಪ್ರಜಾವಾಣಿ’ ಕಲಬುರಗಿ ಬ್ಯುರೊ ಮುಖ್ಯಸ್ಥ ವಿನಾಯಕ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮರಿಲಿಂಗಪ್ಪ ಇದ್ದರು. ವಿಚಾರ ಸಂಕಿರಣ ಹಾಗೂ ವಾಕಥಾನ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

‘ಸಂವಿಧಾನ’ ಕುರಿತ ವಿಚಾರ ಸಂಕಿರಣದಲ್ಲಿ ಸೇರಿದ್ದ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರಗಳು
ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್‌ ಪ್ರಜಾಸತ್ತಾತ್ಮಕ ಪತ್ರಿಕೆಗಳು. ಸಂವಿಧಾನ ಕುರಿತು ಅರಿವು ಮೂಡಿಸುವ ಮೂಲಕ ಸ್ತುತ್ಯಾರ್ಹ ಕಾರ್ಯ ಮಾಡುತ್ತಿವೆ
ಪ್ರೊ.ಶಶಿಕಾಂತ ಉಡಿಕೇರಿ ಗುಲಬರ್ಗಾ ವಿವಿ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.