ADVERTISEMENT

ಪ್ರಜಾತಂತ್ರದಲ್ಲಿ ಎಲ್ಲರೂ ಸಮಾನರು: ಮುಫ್ತಿ ಮಾಸೂಮ್‌

‘ನಮ್ಮ ಸಂವಿಧಾನ ಮತ್ತು ಮದರಸಾಗಳ ಸಂರಕ್ಷಣೆ’ ಜನಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:48 IST
Last Updated 13 ಅಕ್ಟೋಬರ್ 2025, 5:48 IST
ಕಲಬುರಗಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ‘ನಮ್ಮ ಸಂವಿಧಾನ ಹಾಗೂ ಮದರಸಾಗಳ ಸಂರಕ್ಷಣೆ’ ಕುರಿತ ಕಾರ್ಯಕ್ರಮ ಮೌಲಾನಾ ಅಸಜದ್ ಮದನಿ ಮಾತನಾಡಿದರು
ಕಲಬುರಗಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ‘ನಮ್ಮ ಸಂವಿಧಾನ ಹಾಗೂ ಮದರಸಾಗಳ ಸಂರಕ್ಷಣೆ’ ಕುರಿತ ಕಾರ್ಯಕ್ರಮ ಮೌಲಾನಾ ಅಸಜದ್ ಮದನಿ ಮಾತನಾಡಿದರು   

ಕಲಬುರಗಿ: ‌‘ಕುಟುಂಬ, ಭಾಷೆ, ಜಾತಿ–ಮತ–ಪಂಥಗಳನ್ನು ಮೀರಿದ ಉನ್ನತ ಸ್ಥಿತಿಯೇ ಜಾತ್ಯತೀತತೆ. ನಾವೆಲ್ಲ ಜಾತ್ಯತೀತ ಹಾಗೂ ಪ್ರಜಾತಾಂತ್ರಿಕ ದೇಶದಲ್ಲಿದ್ದೇವೆ’ ಎಂದು ಜಮಿಯತ್‌ ಉಲಮಾ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಮಾಸೂಮ್‌ ಸಾಕಿಬ್‌ ಸಾಹೇಬ್‌ ಹೇಳಿದರು.

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಜಮಿಯತ್‌ ಉಲಮಾ–ಇ–ಹಿಂದ್‌ ಸಂಘಟನೆಯು ಭಾನುವಾರ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ಹಾಗೂ ಮದರಸಾಗಳ ಸಂರಕ್ಷಣೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜಾತಂತ್ರದಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ತಮ್ಮ ಧರ್ಮಗಳನ್ನು ಅನುಸರಿಸುವ ಹಕ್ಕಿದೆ. ಹಕ್ಕುಗಳಿದ್ದರೂ ಅವುಗಳನ್ನು ಪಡೆಯಲು ಕಾನೂನು ಬದ್ಧ ಹೋರಾಟ ಅಗತ್ಯವಾಗುತ್ತದೆ’ ಎಂದರು.

ADVERTISEMENT

‘‍ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂಸತ್ತಿಗೆ ಅತ್ಯುನ್ನತ ಅಧಿಕಾರವಿದ್ದರೂ, ಅದಕ್ಕೂ ಕಾನೂನಿನ ಮಿತಿಯಿದೆ. ಬಹುಮತ ಇರುವ ಸರ್ಕಾರ ಸುಮ್ಮನೆ ಮಸೀದಿಗಳ ಮಿನಾರ್‌ ಒಡೆದುಹಾಕುವುದು, ಆಜಾನ್‌ ಬಂದ್‌ ಮಾಡಿಸುವುದು ಸಾಧ್ಯವಿಲ್ಲ. ಮುಸ್ಲಿಮರನ್ನು ಮುಗಿಸಿ ಹಾಕುವುದು ಎಂದಿಗೂ ಆಗದ ಕೆಲಸ. ಸೊಳ್ಳೆಗಳೇ ನಿರ್ಮೂಲನೆಯೇ ಸಾಧ್ಯವಿಲ್ಲದಿರುವಾಗ ಒಂದು ಸಮುದಾಯವನ್ನು ಹೇಗೆ ಮುಗಿಸಲು ಸಾಧ್ಯ? ಮುಸ್ಲಿಮರು ನಿರ್ಭಯದಿಂದ ಬದುಕಬೇಕಿದೆ’ ಎಂದರು.

‘ಸರ್ಕಾರಗಳು ನ್ಯಾಯ ಹಾಗೂ ಪ್ರಾಮಾಣಿಕತೆಯಿಂದ ಮಾತ್ರವೇ ಆಡಳಿತ ನಡೆಸಬಹುದು, ಭಯದಿಂದ ನಡೆಸಲಾಗದು. ದ್ವೇಷದಿಂದ ಸರ್ಕಾರ ನಡೆಸಲು ಮುಂದಾದರೆ, ಸೋಲಿನಲ್ಲಿ ಕೊನೆಗೊಳ್ಳುತ್ತದೆ’ ಎಂದರು.

ಜಮಿಯತ್‌ ಉಲಮಾ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಮೌಲಾನಾ ಅಸಜದ್ ಮದನಿ ಮಾತನಾಡಿ, ‘ದೇಶದ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಹತ್ತಾರು ಹಕ್ಕುಗಳನ್ನು ನೀಡಿದೆ. ಸಂವಿಧಾನ ಇಲ್ಲದಿದ್ದರೆ ಮೂವರು ಮುಸ್ಲಿಮರು ರಾಷ್ಟ್ರಪತಿಗಳಾಗಲು ಸಾಧ್ಯವಿತ್ತೇ? ಸಂವಿಧಾನ ಇಲ್ಲದಿದ್ದರೆ ಧಾರ್ಮಿಕ ಸ್ವಾತಂತ್ರ್ಯವಾಗಲಿ, ಮದರಸಾಗಳ ರಕ್ಷಣೆಯಾಗಲಿ ಸಾಧ್ಯವಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಸಂಘಟನೆ ಸದಸ್ಯ ಮೌಲಾನಾ ಅಬ್ದುಲ್‌ ರಜಾಕ್‌ ಖಾಸ್ಮಿ, ಮೌಲಾನಾ ಏಜಾಜ್‌ ಅಹ್ಮದ್‌ ಖಾಸ್ಮಿ, ಸೈಯದ್‌ ಶಹಬಾಜ್‌ ಹುಸೇನ್‌ ಇನಾಮದಾರ, ಮಹ್ಮದ್‌ ಸಿರಾಜುದ್ದೀನ್‌ ಜಿಯಾಯಿ, ಮೇರಾಜ್‌ ಸೇರಿದಂತೆ ಹಲವರು ಮುಖಂಡರು ವೇದಿಕೆಯಲ್ಲಿದ್ದರು. ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Highlights - ಸಂವಿಧಾನ–ಮದರಸಾಗಳ ಸಂರಕ್ಷಣೆ ಕಾರ್ಯಕ್ರಮ ನೂರಾರು ಸಾರ್ವಜನಿಕರು ಭಾಗಿ ಜಮಿಯತ್ ಉಲಮಾ ಸಂಘಟನೆಗಳ ಪ್ರಮುಖರಿಂದ ಭಾಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.