ADVERTISEMENT

ಜಗತ್ತಿನ ಜಾನಪದ ಕಥೆಗಳಿಗೆ ಭಾರತವೇ ಮೂಲ: ಲೇಖಕ ಹರ್ಷ ರಘುರಾಮ

ಉಪನ್ಯಾಸ ಕಾರ್ಯಕ್ರಮದಲ್ಲಿ ಲೇಖಕ ಹರ್ಷ ರಘುರಾಮ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:36 IST
Last Updated 16 ಡಿಸೆಂಬರ್ 2025, 6:36 IST
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕಲ್ಯಾಣ ಕರ್ನಾಟಕ ಲೇಖಕರ ಹಾಗೂ ಭಾವಚಿತ್ರ ಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಲೇಖಕ ಹರ್ಷ ರಘುರಾಮ ವಿಶೇಷ ಉಪನ್ಯಾಸ ನೀಡಿದರು. ಕಲಾ ನಿಕಾಯದ ಡೀನ್ ಪ್ರೊ. ಎಚ್. ಟಿ. ಪೋತೆ, ಶ್ರೀಶೈಲ ನಾಗರಾಳ ಹಾಗೂ ಮಹಾಂತೇಶ ನವಲಕಲ್ ಭಾಗವಹಿಸಿದ್ದರು
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕಲ್ಯಾಣ ಕರ್ನಾಟಕ ಲೇಖಕರ ಹಾಗೂ ಭಾವಚಿತ್ರ ಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಲೇಖಕ ಹರ್ಷ ರಘುರಾಮ ವಿಶೇಷ ಉಪನ್ಯಾಸ ನೀಡಿದರು. ಕಲಾ ನಿಕಾಯದ ಡೀನ್ ಪ್ರೊ. ಎಚ್. ಟಿ. ಪೋತೆ, ಶ್ರೀಶೈಲ ನಾಗರಾಳ ಹಾಗೂ ಮಹಾಂತೇಶ ನವಲಕಲ್ ಭಾಗವಹಿಸಿದ್ದರು   

ಕಲಬುರಗಿ: ‘ಜಗತ್ತಿನ ವಿವಿಧ ದೇಶಗಳ ಜಾನಪದಕ್ಕೆ ಭಾರತೀಯ ಜಾನಪದವು ಮೂಲವಾಗಿದೆ ಎಂಬುದು ಹಲವು ವಿದ್ವಾಂಸರ ಅಂಬೋಣ. ಇದನ್ನು ಚಾರಿತ್ರಿಕ ಬೌಗೋಳಿಕ ಸಿದ್ಧಾಂತವು ಸಾಬೀತುಪಡಿಸಿದೆ. ಅದೇ ರೀತಿ ಜಗತ್ತಿನ ಜಾನಪದ ಕಥೆಗಳಿಗೆ ಭಾರತವೇ ಮೂಲವೆಂದು ಒಪ್ಪಿತವಾಗಿದೆ’ ಎಂದು ಲೇಖಕ ಹರ್ಷ ರಘುರಾಮ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಕಲ್ಯಾಣ ಕರ್ನಾಟಕ ಲೇಖಕರ ಗ್ರಂಥಾಲಯ ಮತ್ತು ಭಾವಚಿತ್ರ ಭವನದಲ್ಲಿ ಆಯೋಜಿಸಿದ್ದ ‘ಜರ್ಮನ್ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಸಂಬಂಧಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಂತ್ರಜ್ಞಾನ ಬೆಳೆದಂತೆ ಹೊಸ ತಲೆಮಾರಿನ ಲೇಖಕರಿಗೆ ವಿದೇಶಿ ಭಾಷೆಗಳ ಜ್ಞಾನ ಮತ್ತು ಸಾಹಿತ್ಯ ಅರಿವಾಗುತ್ತಿದೆ. ಸಾಹಿತ್ಯ ಕೃತಿ, ಕಾದಂಬರಿ ಮತ್ತು ಕಥೆಗಳು ಕನ್ನಡ ಭಾಷೆಗೆ ಅನುವಾದಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಭಾಷೆಯಲ್ಲಿ ಸೃಜನಶೀಲ ಸಾಹಿತ್ಯದ ಬೆಳವಣಿಗೆ ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಡಿಜಿಟಲ್ ಮಾಧ್ಯಮಗಳ ವಿಸ್ತರಣೆ ಮತ್ತು ಅವಕಾಶಗಳಿಂದ ದೇಶ ವಿದೇಶಗಳ ಸಂಸ್ಕೃತಿ, ಸಾಹಿತ್ಯ ವಿನಿಮಯವಾಗುತ್ತಿದೆ. ಜಗತ್ತಿನ ಶ್ರೇಷ್ಠ ಲೇಖಕರ ಗ್ರಂಥಗಳ ಓದಿನಿಂದ ಪರಸ್ಪರ ಸಾಹಿತ್ಯಿಕ-ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ ಆಗುತ್ತಿದೆ. ಆದರಿಂದ ಯುವ ಲೇಖಕರು ಮತ್ತು ಬರಹಗಾರರು ಬೇರೆ ಬೇರೆ ಭಾಷೆಗಳನ್ನು ಕಲಿಯುವ ಆಸಕ್ತಿ, ಬರವಣಿಗೆ ಮತ್ತು ಅನುವಾದಕ್ಕೆ ಮುನ್ನುಡಿ ಬರೆಯಬೇಕು. ಹೊಸ ತಲೆಮಾರಿನ ಸಾಹಿತ್ಯಾಸಕ್ತರು ಕನ್ನಡ ಬಳಸುವ ಜೊತೆಗೆ ಜರ್ಮನ್ ಸೇರಿದಂತೆ ಇತರೆ ಬಾಷೆಗಳನ್ನು ಕಲಿಯುವ, ಓದುವ ಕುತೂಹಲದೊಂದಿಗೆ ಸಮಕಾಲೀನ ವೈಚಾರಿಕ ಸಾಹಿತ್ಯ ಹಂಚಿಕೆ ಮತ್ತು ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ’ ಎಂದರು.

ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಶ್ರೀಶೈಲ ನಾಗರಾಳ ಮಾತನಾಡಿ, ‘ಕನ್ನಡಿಗರಾದ ಹರ್ಷ ರಘುರಾಮ ಅವರು ಜರ್ಮನಿಯಲ್ಲಿ ನೆಲೆಸಿ ಜರ್ಮನ್ ಭಾಷೆ ಕಲಿತು ಕನ್ನಡಕ್ಕೆ ಕಥೆ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ಜರ್ಮನಿ ಕಥೆಯ ಸಂವೇದನೆಯನ್ನು ಕನ್ನಡ ಸಾಹಿತ್ಯಕ್ಕೆ ತಂದಿರುವ ರಘುರಾಮ ಸೃಜನಶೀಲ ಅನುವಾದಕ ಮತ್ತು ವಿಭಿನ್ನ ಶೈಲಿಯ ಬರಹಗಾರ’ ಎಂದು ಹೇಳಿದರು.

ಕಥೆಗಾರ ಮಹಾಂತೇಶ್ ನವಲಕಲ್ ಮಾತನಾಡಿ, ‘ಜರ್ಮನಿ, ಆಸ್ಟ್ರಿಯಾ ಮತ್ತು ಪೋಲೆಂಡ್ ದೇಶಗಳಲ್ಲಿ ಒಂದೇ ರೀತಿಯ ಸಂಸ್ಕೃತಿಯಿದೆ. ಆದರೂ ಆಂಗ್ಲ ಭಾಷೆಗೆ ಮಾರು ಹೋಗದೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಭಾಷೆಯನ್ನು ಬೆಳೆಸಿಕೊಂಡಿರುವುದು ವಿಶೇಷ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿ, ‘ಜಗತ್ತು ಬೆಳೆದಂತೆ ಮನುಷ್ಯರು ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯದತ್ತ ತೆರೆದುಕೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಬಹುಭಾಷೆ ಬಲ್ಲವರಿದ್ದಾರೆ. ಕನ್ನಡ, ಉರ್ದು, ಮರಾಠಿ, ತೆಲುಗು ಮತ್ತು ಇಂಗ್ಲಿಷ್ ಭಾಷೆ ಗೊತ್ತಿದೆ. ಆದರೆ, ಸಾಹಿತ್ಯ ರಚನೆ, ಸಾಹಿತ್ಯಾನುವಾದ ಕೆಲಸಗಳಿಗೆ ಆಸಕ್ತಿ ವಹಿಸದಿರುವುದು ವಿಪರ್ಯಾಸ. ಹೊಸ ಬರಹಗಾರರು ಸೀಮಿತ ಸಂಸ್ಕೃತಿ ಮತ್ತು ಭಾಷೆಗೆ ಸೀಮಿತರಾಗದೆ ಬೇರೆ ಭಾಷೆಗಳ ಸಾಹಿತ್ಯವನ್ನು ಅನುವಾದ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಜರ್ಮನ್ ಮತ್ತು ಕನ್ನಡ ಸಾಹಿತ್ಯ ಕುರಿತು ಸಂವಾದ ನಡೆಸಲಾಯಿತು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರು, ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಂಶೋಧನಾ ಸಂಘ ಹಾಗೂ ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು. ಎಂ.ಬಿ. ಕಟ್ಟಿ ಸ್ವಾಗತಿಸಿದರು.

ಯುವ ಪೀಳಿಗೆ ಸ್ವಯಂ ಆಸಕ್ತಿಯಿಂದ ಸಂಶೋಧನೆ ಮತ್ತು ಅನುವಾದ ಸಾಹಿತ್ಯವನ್ನು ಮೈಗೂಡಿಸಿಕೊಳ್ಳಬೇಕು. ಅನುವಾದ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು

-ಪ್ರೊ. ಎಚ್. ಟಿ. ಪೋತೆ ಕಲಾ ನಿಕಾಯದ ಡೀನ್ ಗುವಿವಿ