ಜೇವರ್ಗಿ: ಪಟ್ಟಣದ ಜನತೆಯ ಬಹು ದಿನಗಳ ಕನಸಾಗಿದ್ದ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಕಡಿಮೆ ದರದಲ್ಲಿ ಜನರು ಹೊಟ್ಟೆ ತುಂಬಿಸಿಕೊಳ್ಳಲು ಸಹಕಾರಿಯಾಗಲಿದೆ.
ಪಟ್ಟಣದ ಮಿನಿ ವಿಧಾನಸೌದ ಹಾಗೂ ಎಪಿಎಂಸಿ ಮದ್ಯ ಭಾಗದಲ್ಲಿ ಬರುವ ಶಾಪಿಂಗ್ ಕಾಂಪ್ಲೆಕ್ಸ್ ಎದುರು ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುತ್ತಿದ್ದು, ಜಾಗ ಮತ್ತು ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಇಷ್ಟು ದಿನ ಕ್ಯಾಂಟೀನ್ ಕಾಮಗಾರಿ ವಿಳಂಬವಾಗಿತ್ತು. ಈ ಮೊದಲು ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕ್ಯಾಂಟೀನ್‌ಗೆ ಜಾಗ ಗುರುತಿಸಲಾಗಿತ್ತು.
ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಮೇಲೆ ನಿರ್ಮಾಣಗೊಂಡಿರುವ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಟ್ಟಡಕ್ಕೆ ಬೇಕಾದ ಸಾಮಗ್ರಿಗಳು ಎಲ್ಲವೂ ಸಿದ್ಧವಾಗಿದ್ದು, ಅದನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಿಕಾಸ್ಟ್ ಕನ್‍ಸ್ಟ್ರಕ್ಷನ್ ತಂತ್ರಜ್ಞಾನ ಬಳಸಿ ನಡೆಸಲಾಗಿದೆ. ಈಗಾಗಲೇ ಹೆಚ್ಚಿನ ಕಡೆಗಳಲ್ಲಿ ಕಟ್ಟಡಗಳನ್ನು ಇದೇ ಸಾಮಗ್ರಿ ಬಳಸಿ ನಿರ್ಮಿಸಲಾಗಿದ್ದು, ಇವು ಸುಮಾರು 60 ವರ್ಷ ಬಾಳಿಕೆ ಬರಲಿವೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ಕೊನೆ ವಾರ ಅಥವಾ ಜುಲೈ ತಿಂಗಳಲ್ಲಿ ಜೇವರ್ಗಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ.
ಕಟ್ಟಡದ ಒಳಾಂಗಣ ಮತ್ತು ಹೊರಾಂಗಣದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಕಾಮಗಾರಿ ನಡೆಯಬೇಕಾಗಿದೆ.
ಬೆಳಿಗ್ಗಿನ ಉಪಾಹಾರದಲ್ಲಿ ಇಡ್ಲಿ ಸಾಂಬಾರ್, ರೈಸ್ ಬಾತ್, ಅವಲಕ್ಕಿ ಉಪ್ಪಿಟ್ಟು, ಖಾರಾ ಉಪ್ಪಿಟ್ಟು, ಚಿತ್ರಾನ್ನ, ಖಾರಾ ಪೊಂಗಲ್ ಮೊದಲಾದವು ಐದು ರೂಪಾಯಿಗೆ, ಅನ್ನ, ಸಾರು, ಉಪ್ಪಿನಕಾಯಿ, ಹಪ್ಪಳವಿರುವ ಮಧ್ಯಾಹ್ನದ ಊಟ, ಅನ್ನ ಸಾಂಬಾರು, ಉಪ್ಪಿನ ಕಾಯಿ, ಹಪ್ಪಳದ ರಾತ್ರಿಯ ಊಟ ₹ 10ಕ್ಕೆ ದೊರೆಯುವುದರಿಂದ ಇಲ್ಲಿನ ಜನಕ್ಕೆ ಅನುಕೂಲವಾಗುವುದು ಖಚಿತ.
ಇಲ್ಲಿನ ಎಪಿಎಂಸಿಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರು, ಸರ್ಕಾರಿ ಕಚೇರಿಗಳಿಗೆ ಬರುವವರಿಗೆ ಅನುಕೂಲವಾಗಲಿದೆ. ಅಲ್ಲದೇ ಸರ್ಕಾರಿ ಪದವಿ ಕಾಲೇಜು ಹಾಗೂ ಖಾಸಗಿ ಮಹಿಳಾ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.