ADVERTISEMENT

ಕಲಬುರಗಿ: ಏಮ್ಸ್, ಐಐಟಿ ಕೈಬಿಟ್ಟು ಹೋಗಿದ್ದೇಕೆ?

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿಗೆ ಉದ್ಯಮಿಗಳ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 4:02 IST
Last Updated 27 ಜನವರಿ 2022, 4:02 IST
ಕಲಬುರಗಿಯಲ್ಲಿ ಎಚ್‌ಕೆಸಿಸಿಐ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ವ್ಯಾಪಾರಸ್ಥರು
ಕಲಬುರಗಿಯಲ್ಲಿ ಎಚ್‌ಕೆಸಿಸಿಐ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ವ್ಯಾಪಾರಸ್ಥರು   

ಕಲಬುರಗಿ: ಜಿಲ್ಲೆಗೆ ಬರಬೇಕಿದ್ದ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯ (ನಿಮ್ಜ್), ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಂತಹ ಪ್ರಮುಖ ಯೋಜನೆಗಳು ಹಾಗೂ ಸಂಸ್ಥೆಗಳು ಕೈಬಿಟ್ಟು ಹೋಗಿದ್ದು ಏಕೆ? ಪ್ರತಿ ಬಾರಿ ಕೈಗಾರಿಕೆಗಳನ್ನು ಮಂಜೂರಾತಿಗಾಗಿ ಪ್ರಸ್ತಾವ ಸಲ್ಲಿಸುವಾಗ ಕಲಬುರಗಿ ಜಿಲ್ಲೆಯೊಂದಿಗೆ ಬೇರೆ ಜಿಲ್ಲೆಯ ಆಯ್ಕೆ ಕೊಡುವುದೇಕೆ ಎಂದು ಉದ್ಯಮಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರನ್ನು ಪ್ರಶ್ನಿಸಿದರು.

ಇಲ್ಲಿನ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಎಚ್‌ಕೆಸಿಸಿಐ)ಯ ವತಿಯಿಂದ ಆಯೋಜಿಸಿದ್ದ ಉದ್ಯಮಿಗಳೊಂದಿಗೆ ಸಚಿವರ ಸಂವಾದ ಕಾರ್ಯಕ್ರಮದಲ್ಲಿ ಸಚಿವರತ್ತ ಪ್ರಶ್ನೆಗಳು ತೂರಿಬಂದವು.

‌‘ಕಲಬುರಗಿ ಭಾಗಕ್ಕೆ ಯಾವ ಪ್ರಮುಖ ಕೈಗಾರಿಕೆಗಳೂ ಬರುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಕೈಗಾರಿಕಾ ನೀತಿಯನ್ನು ರೂಪಿಸಬೇಕು. ಆದರೆ, ಆ ಕೆಲಸ ಆಗಿಲ್ಲ. ಬರೀ ಬೆಂಗಳೂರು ಸುತ್ತಮುತ್ತ ಕೈಗಾರಿಕೆಗಳು ಬೆಳೆದರೆ ಹೇಗೆ’ ಎಂದು ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಪ್ರಶ್ನಿಸಿದರು.

ADVERTISEMENT

‘ನಿರಂತರವಾಗಿ ಕಲಬುರಗಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಇಲ್ಲಿ ಕೈಗಾರಿಕೆಗಳು ಬರಲು ಪೂರಕ ನೀತಿಗಳನ್ನು ರೂಪಿಸಬೇಕು. ಅಲ್ಲದೇ, ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವಾಗ ಮೂರು ಹೆಸರುಗಳ ಬದಲು ಕಲಬುರಗಿ ಹೆಸರೊಂದನ್ನೇ ಅನುಮೋದನೆಗೆ ಕಳಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ ನಿರಾಣಿ, ‘ಬೆಂಗಳೂರು ಹೊರತುಪಡಿಸಿ ಟಯರ್ 2, ಟಯರ್ 3 ನಗರಗಳಲ್ಲಿ ಕೈಗಾರಿಕೆಗಳು ಬರಲಿ ಎಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಭೂಮಿ ಕೊಡುತ್ತಿದ್ದೇವೆ. ಬೆಂಗಳೂರಿನಲ್ಲಿ ಕೈಗಾರಿಕೆ ಆರಂಭಿಸುವವರಿಗೆ ಯಾವುದೇ ವಿನಾಯಿತಿ ನೀಡಿಲ್ಲ. ಆದರೂ, ಅವರು ಈ ಕಡೆ ಬರದಿದ್ದರೆ ನಾವು ಏನು ಮಾಡಲಾಗುತ್ತದೆ’ ಎಂದು ಪ್ರಶ್ನಿಸಿದರು.

ಗಂಜ್‌ನ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಮಂತ ಉದನೂರ ಮಾತನಾಡಿ, ‘ಎಪಿಎಂಸಿಗೆ ತೆರಿಗೆ ರೂಪದ ವರಮಾನ ಬರುವುದು ಕಡಿಮೆಯಾಗಿದ್ದರಿಂದ ಅವರು ನಿರ್ವಹಣೆ ಮಾಡಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಭದ್ರತೆ, ಸ್ವಚ್ಛತೆ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದರು.

ಫೆಬ್ರುವರಿ 14, 15ರಂದು ಜಿಲ್ಲೆಗೆ ಮತ್ತೆ ಬರಲಿದ್ದು, ಆಗ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ, ವಿಕ್ರಂ ಪಾಟೀಲ, ಮನೀಷ್ ಜಾಜು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.