ADVERTISEMENT

ಅಲ್ಪ ಪ್ರಿಮಿಯಂ ಭರಿಸಿ ದೊಡ್ಡ ಪರಿಹಾರ ಪಡೆಯಿರಿ: ಜಿ.ಪಂ ಸಿಇಒ ಭಂವರಸಿಂಗ್ ಮೀನಾ

ಪ್ರಧಾನಮಂತ್ರಿ ಜೀವನ ಜ್ಯೋತಿ, ಸುರಕ್ಷಾ ವಿಮೆ ನೋಂದಣಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:49 IST
Last Updated 7 ಫೆಬ್ರುವರಿ 2026, 2:49 IST
ಚಿಂಚೋಳಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪಿಎಂಜೆಜೆಬಿವೈ ಹಾಗೂ ಪಿಎಂ ಎಸ್‌ಬಿವೈ ಯೋಜನೆ ವಿಮಾ ನೋಂದಣಿ ಅಭಿಯಾನವನ್ನು ಜಿಪಂ ಸಿಇಒ ಭಂವರಸಿAಗ್ ಮೀನಾ ಶುಕ್ರವಾರ ಉದ್ಘಾಟಿಸಿದರು
ಚಿಂಚೋಳಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪಿಎಂಜೆಜೆಬಿವೈ ಹಾಗೂ ಪಿಎಂ ಎಸ್‌ಬಿವೈ ಯೋಜನೆ ವಿಮಾ ನೋಂದಣಿ ಅಭಿಯಾನವನ್ನು ಜಿಪಂ ಸಿಇಒ ಭಂವರಸಿAಗ್ ಮೀನಾ ಶುಕ್ರವಾರ ಉದ್ಘಾಟಿಸಿದರು   

ಚಿಂಚೋಳಿ: ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯ ಅಡಿಯಲ್ಲಿ ಅಲ್ಪಪ್ರಮಾಣದ ವಿಮಾ ಪ್ರಿಮಿಯಂ ಭರಿಸಿ ದೊಡ್ಡ ಮೊತ್ತದ ಪರಿಹಾರ ಪಡೆಯಲು ಸಾಧ್ಯವಿದೆ. ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿ.ಪಂ ಸಿಇಒ ಭಂವರಸಿಂಗ್ ಮೀನಾ ಮನವಿ ಮಾಡಿದರು.

ಇಲ್ಲಿನ ತಾ.ಪಂ ಆವರಣದಲ್ಲಿ ನಡೆದ ವಿಮಾ ನೋಂದಣಿ ಅಭಿಯಾನವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಜೀವನ ಜ್ಯೋತಿ ವಿಮಾ ಯೋಜನೆ ಅಡಿಯಲ್ಲಿ ವಾರ್ಷಿಕ ₹ 436 ಪಾವತಿಸಿ, 18 ರಿಂದ 50 ವರ್ಷದವರು ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಸಹಜ ಸಾವು ಸಂಭವಿಸಿದರೂ ಕೂಡ ₹ 2 ಲಕ್ಷ ಪರಿಹಾರ ಲಭಿಸುತ್ತದೆ. ಸುರಕ್ಷಾ ವಿಮಾ ಯೋಜನೆಯ ಅಡಿ ವಾರ್ಷಿಕ ₹ 20 ಪಾವತಿಸಿ, ವಿಮಾ ನೋಂದಣಿ ಮಾಡಿಸಿದರೆ ನೀವು ಅಪಘಾತದಲ್ಲಿ ಮರಣಹೊಂದಿದರೆ ಗರಿಷ್ಠ ₹ 2 ಲಕ್ಷ ಪರಿಹಾರ, ಶಾಸ್ವತ ಅಂಗವಿಕಲರಾದರೆ ₹1 ಲಕ್ಷ ಪರಿಹಾರ ಲಭಿಸಲಿದೆ. ಹೀಗಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ವಿಮಾ ನೋಂದಣಿಗೆ ಸಂಕಲ್ಪ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಜಿ.ಪಂ ಮುಖ್ಯ ಹಣಕಾಸು ಅಧಿಕಾರಿ ವಿಕ್ರಮ ಸಜ್ಜನ ಮಾತನಾಡಿ, ‘ಇ–ಆಡಳಿತದಲ್ಲಿ ಕಲಬುರಗಿ ಜಿ.ಪಂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಈಗ ವಿಮಾ ನೋಂದಣಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಸಂಕಲ್ಪ ಮಾಡಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅರೆಕಾಲಿಕ ಮತ್ತು ಗೌರವ ಧನದಲ್ಲಿ ಕೆಲಸ ಮಾಡುವ ನೌಕರರು, ಕ್ಷೇಮಾಭಿವೃದ್ಧಿ ನೌಕರರು, ಸಂಘ ಸಂಸ್ಥೆಗಳ ಮುಖಂಡರು, ಉದ್ಯೋಗ ಖಾತ್ರಿ ಕಾರ್ಮಿಕರು, ಬದಿ ಬದಿ ವ್ಯಾಪಾರಿಗಳು, ಸರ್ಕಾರಿ ನೌಕರರು, ಅಧಿಕಾರಿಗಳು, ಜನ ಸಾಮಾನ್ಯರು 18 ವರ್ಷ ತುಂಬಿದ ಪ್ರತಿಯೊಬ್ಬರೂ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಿಂಚೋಳಿ ತಾ.ಪಂ ಇಒ ಸಂತೋಷಕುಮಾರ ಚವ್ಹಾಣ ಮಾತನಾಡಿ, ‘ವಿಮಾ ನೋಂದಣಿ ಅಭಿಯಾನದಲ್ಲಿ ಒಂದೇ ದಿನ 1,103 ಮಂದಿ ವಿಮಾ ನೋಂದಾಯಿಸಿಕೊಂಡಿದ್ದು, ಎಸ್‌ಬಿಐ, ಕೆನರಾ, ಕೆಜಿಬಿ, ಎಕ್ಸಿಸ್ ಬ್ಯಾಂಕ್ ಶಾಖೆಗಳ ಗ್ರಾಹಕರು ವಿಮೆಗೆ ನೋಂದಾಯಿಸಿ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಕಲಬುರಗಿಯ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಪ್ರಭಾರ ವ್ಯವಸ್ಥಾಪಕ ನಾಗೇಂದ್ರ ಬಾಪುಗೌಡ ಮಾತನಾಡಿ, ‘ನಿಗದಿತ ವಯೋಮಿತಿಯವರು ಎರಡು ಯೋಜನೆಗೂ ವಿಮಾ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ನಿಧನರಾದರೆ ಎರಡು ವಿಮೆಯಿಂದಲೂ ತಲ ₹ 2 ಲಕ್ಷ ಪರಿಹಾರ ಲಭಿಸಲಿದೆ ಎಂದು ಹೇಳಿದರು.

ವಿಮಾ ಪಾಲಿಸಿದಾರರು ನಿಧನರಾದ ಪ್ರಯುಕ್ತ ಮೂವರು ಫಲಾನುಭವಿಗಳಿಗೆ(ವಾರಸುದಾರರಿಗೆ) ₹ 2 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಲಾಯಿತು.

ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಪವನಕುಮಾರ ಹಾಜರಿದ್ದರು. ಪಿಡಿಒ ರಾಮಕೃಷ್ಣ ಕೊರಡಂಪಳ್ಳಿ ಸ್ವಾಗತಿಸಿದರು. ನಾಗೇಂದ್ರ ಬೆಡಕಪಳ್ಳಿ ವಂದಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಹೊರ ಗುತ್ತಿಗೆ ನೌಕರರು, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು. 

ಚಿಂಚೋಳಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪಿಎಂಜೆಜೆಬಿವೈ ಹಾಗೂ ಪಿಎಂ ಎಸ್‌ಬಿವೈ ಯೋಜನೆ ವಿಮಾ ನೋಂದಣಿ ಅಭಿಯಾನವನ್ನು ಜಿಪಂ ಸಿಇಒ ಭಂವರಸಿAಗ್ ಮೀನಾ ಸಸಿಗೆ ನೀರುಣಿಸಿ ಶುಕ್ರವಾರ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.