
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಮಹಾವಿದ್ಯಾಲಯಗಳ ಮೂರು ದಿನಗಳ ಯುವಜನೋತ್ಸವಕ್ಕೆ ಇಲ್ಲಿನ ಗುಲಬರ್ಗಾ ವಿ.ವಿ. ಕ್ಯಾಂಪಸ್‌ನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ವಿದ್ಯುಕ್ತ ಚಾಲನೆ ದೊರೆಯಿತು.
ಬಹುಭಾಷಾ ಚಿತ್ರನಟ ಪ್ರಕಾಶ್ ರಾಜ್ ಅವರು ಡೊಳ್ಳು ಬಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಬೆಳಿಗ್ಗೆ 11ಕ್ಕೆ ಯುವಜನೋತ್ಸವದ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ, ಉದ್ಘಾಟನೆ ನೆರವೇರಿಸಬೇಕಿದ್ದ ಪ್ರಕಾಶ್ ರಾಜ್ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಬರುವುದು ತಡವಾಗಿದ್ದರಿಂದ ಸುಮಾರು ಎರಡು ಗಂಟೆ ತಡವಾಗಿ ಕಾರ್ಯಕ್ರಮ ಶುರುವಾಯಿತಾದರೂ ವಿದ್ಯಾರ್ಥಿಗಳ ಉತ್ಸಾಹಕ್ಕೇನು ಭಂಗ ಬಂದಿರಲಿಲ್ಲ. ತರಹೇವಾರಿ ಉಡುಪು ಧರಿಸಿದ್ದ ವಿದ್ಯಾರ್ಥಿಗಳು ವಿ.ವಿ. ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ ಶುರು ಮಾಡಿದ್ದರು. ವಿವಿಧ ಕಲಾ ತಂಡಗಳು ಉತ್ಸಾಹದಿಂದ ಮೆರವಣಿಗೆ ಮೂಲಕ ಡಾ.ಅಂಬೇಡ್ಕರ್ ಸಭಾಂಗಣ ತಲುಪಿದವು.
ಪ್ರಕಾಶ್ ರಾಜ್ ಅವರು ಬರುತ್ತಿದ್ದಂತೆಯೇ ಉದ್ಘಾಟನಾ ಕಾರ್ಯಕ್ರಮ ಶುರುವಾಯಿತು.
ಸಭಾಂಗಣದಲ್ಲಿ ಸೇರಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, ‘ನಮ್ಮ ಕಾಲ ಇನ್ನೇನು 10–15 ವರ್ಷಗಳಲ್ಲಿ ಮುಗಿಯುತ್ತದೆ. ಈ ದೇಶದ ಭವಿಷ್ಯವನ್ನು ನೀವೇ ರೂಪಿಸಬೇಕು. ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡಬೇಕು. ಕ್ರಿಕೆಟ್, ಫುಟ್‌ಬಾಲ್ ಆಟಗಳನ್ನು ಟಿವಿಯಲ್ಲೇ ಹೆಚ್ಚಾಗಿ ನೋಡುತ್ತಿದ್ದೀರಿ. ಅದನ್ನು ನೀವು ಆಡುವುದು ಯಾವಾಗ? ದೈಹಿಕ ಶ್ರಮವೇ ಇಲ್ಲವೆಂದ ಮೇಲೆ ನಿಮ್ಮ ಆರೋಗ್ಯದ ಗತಿ ಏನಾಗಬೇಡ’ ಎಂದು ಪ್ರಶ್ನಿಸಿದರು.
‘ನಮ್ಮ ಹಿರಿಯರು ತಮ್ಮ 50, 60 ವರ್ಷಗಳ ಅನುಭವವನ್ನು ಸೇರಿಸಿ ಪುಸ್ತಕಗಳನ್ನು ಬರೆದಿದ್ದಾರೆ. ಅದನ್ನೆಲ್ಲ ನೀವು ಓದಬೇಕು. ಓದಿ ಮನನ ಮಾಡಬೇಕು. ಏನೇ ಸಂಶೋಧನೆಗಳು ನಡೆದರೂ ಮನುಷ್ಯನ ಒಳಿತಿಗಾಗಿ ಇರಬೇಕಿತ್ತು. ಆದರೆ, ಅಣುವಿಜ್ಞಾನವನ್ನು ಸಂಶೋಧಿಸಿದ ವಿಜ್ಞಾನಿಗಳು ಅಣು ಬಾಂಬ್‌ಗಳನ್ನು ತಯಾರಿಸಿ ಯುದ್ಧಗಳಿಗೆ ಕಾರಣರಾದರು. ಅತಿ ಕಡಿಮೆ ಸಮಯದಲ್ಲಿ ತಲುಪಲು ವಿಮಾನವನ್ನು ಆಶ್ರಯಿಸಿದ್ದೆವು. ಅದನ್ನು ಭಯೋತ್ಪಾದಕರು ಹೈಜಾಕ್ ಮಾಡಿಕೊಳ್ಳುವುದು ಶುರು ಮಾಡಿದ ಬಳಿಕ ನಿಯಮಗಳು ಬಿಗಿಯಾಗಿ ವಿಮಾನ ನಿಲ್ದಾಣದಲ್ಲಿ ಹೋಗಿ ಬರುವುದೆಂದರೆ ಜೈಲಿಗೆ ಹೋಗಿ ಬಂದಂತಾಗುತ್ತದೆ’ ಎಂದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ‘ಕಲೆಯನ್ನು ತನ್ನ ಅಗತ್ಯಕ್ಕೆ ಬೇಕಾದಂತೆ ಒಗ್ಗಿಸಿಕೊಳ್ಳುವ ಶಕ್ತಿ ಯುವಜನರಿಗೆ ಇದೆ. ಮೂರು ದಿನಗಳ ಕಾಲ ನಡೆಯುವ ಯುವಜನೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ತೀರ್ಪುಗಾರರು ನಿಷ್ಪಕ್ಷಪಾತದಿಂದ ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ಉದ್ಘಾಟಕರಾಗಿ ಭಾಗವಹಿಸಿದ್ದ ನಟ ಪ್ರಕಾಶ್ ರಾಜ್ ಅವರು ಮೂಲತಃ ರಂಗಭೂಮಿಯ ಪ್ರತಿಭೆಯಾಗಿದ್ದು, ಗುಡ್ಡದ ಭೂತ ನಾಟಕದಲ್ಲಿ ಉತ್ತಮ ಅಭಿನಯ ನೀಡಿ ಇದೀಗ ಬಹುಭಾಷಾ ನಟರಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಹಲವು ಜನಪರ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ’ ಎಂದರು.
ಗುಲಬರ್ಗಾ ವಿ.ವಿ. ಕುಲಸಚಿವ ಪ್ರೊ. ರಮೇಶ ಲಂಡನಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ನಮ್ಮಲ್ಲೇ ಬಗೆಹರಿಸಿಕೊಂಡು ಮುನ್ನಡೆಯೋಣ. ಬಸವಣ್ಣ ಗಾಂಧೀಜಿ ಅಂಬೇಡ್ಕರ್ ಹಾಗೂ ಸಂವಿಧಾನವೇ ನಮಗೆ ದಾರಿ ದೀಪಪ್ರಕಾಶ್ ರಾಜ್ ಬಹುಭಾಷಾ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.