
ಕಲಬುರಗಿ: ‘ಎಲ್ಲ ಧರ್ಮಗುರುಗಳು ತಮ್ಮ ಜನರಿಗೆ ಶಾಂತಿಯ ಬಗ್ಗೆ ತಿಳಿಸಬೇಕು. ಒಟ್ಟಾಗಿ ಜೀವಿಸುವುದನ್ನು ಕಲಿಸಬೇಕು. ಇದೊಂದು ಜವಾಬ್ದಾರಿಯೂ ಆಗಿದೆ’ ಎಂದು ಕ್ರೈಸ್ತ ಧರ್ಮದ ಭಾರತ ಮತ್ತು ನೇಪಾಳ ಪ್ರತಿನಿಧಿ ಆರ್ಚ್‌ಬಿಷಪ್ ಲೀಯೊಪೋಲ್ದೊ ಗೆರೆಲಿ ಹೇಳಿದರು.
ನಗರದ ದೈವಾನುಗ್ರಹ ಮಾತೆ ಪ್ರಧಾನಾಲಯದ (ಮದರ್ ಆಫ್ ಡಿವೈನ್ ಗ್ರೇಸ್ ಕೆಥೆಡ್ರಲ್) ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
‘ಶಾಂತಿ ನಿಮ್ಮಲ್ಲಿ ಇರಲಿ’ ಎಂದು ಕನ್ನಡದಲ್ಲಿ ಒಂದು ನುಡಿ ಹೇಳಿದ ವ್ಯಾಟಿಕನ್ ಸಿಟಿ ಪೋಪ್ ರಾಯಭಾರಿಯೂ ಆದ ಗೆರೆಲಿ ಅವರು, ‘ನಮ್ಮದು ಶಾಂತಿಯ ಸಂದೇಶ. ಅದು ಒಂದು ದಿನದ ಕಥೆಯಲ್ಲ. ನಿರಂತರ ಪ್ರಯಾಣ ಮತ್ತು ಪ್ರಕ್ರಿಯೆಯಾಗಿದೆ’ ಎಂದರು. ಈ ಸಂದರ್ಭದಲ್ಲಿ ಮದರ್ ತೆರೆಸಾ ಅವರ ತ್ಯಾಗವನ್ನು ಸ್ಮರಿಸಿದರು.
‘ನಾವು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ. ಸ್ನೇಹ ಬೆಳೆಸಬೇಕು. ಸ್ನೇಹ ಬೆಳೆಸಿದರೆ ಪ್ರೀತಿ– ಸಹಬಾಳ್ವೆಯಿಂದ ಎಲ್ಲರನ್ನೂ ಅರ್ಥೈಸಿಕೊಳ್ಳಲು ಸಾಧ್ಯ. ಯಾವುದೇ ಕೆಲಸ ಮಾಡಲು ಒಬ್ಬರಿಗೊಬ್ಬರು ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.
‘ನಿಮ್ಮೆಲ್ಲರಿಗೂ ಶರಣಾರ್ಥಿಗಳು’ ಎಂದು ಮಾತು ಆರಂಭಿಸಿದ ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ‘ವಿಷಮಯ ವಾತಾವರಣದ ಇಂದಿನ ದಿನಗಳಲ್ಲಿ ಸರ್ವಧರ್ಮ ಸಮ್ಮೇಳನ ಬಹಳ ಅವಶ್ಯವಿದೆ. ಇಂಥ ಸಮ್ಮೇಳನ ಎಲ್ಲ ಧರ್ಮಗಳಲ್ಲಿ ನಡೆಯಬೇಕು. ಹರಿದಾಡುವ ರಕ್ತ, ಉಸಿರಾಡುವ ಗಾಳಿ, ತೊಡುವ ಬಟ್ಟೆ, ಊಟ ಮಾಡುವ ಅನ್ನ, ತಿರುಗಾಡುವ ಭೂಮಿ ಒಂದೇ. ನಾವೆಲ್ಲರೂ ಒಂದೇ ನಮಗೊಬ್ಬನೇ ತಂದೆ. ಅವನೇ ಈಶ್ವರ, ಅವನೇ ಯೇಸು’ ಎಂದಾಗ ಕರತಾಡನ ಮೊಳಗಿತು.
‘ನಾವೆಲ್ಲರೂ ಒಂದೇ ಎಂದು ಎಲ್ಲರೂ ಹೇಳುತ್ತೇವೆ. ಅದನ್ನು ಜೀವನದಲ್ಲಿಯೂ ಕಾರ್ಯರೂಪಕ್ಕೆ ತರುವಂತಾಗಬೇಕು’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಗಿರಿಜಾ ಅವರು ಪ್ರತಿಪಾದಿಸಿದರು.
ಮುಸ್ಲಿಂ ಧರ್ಮದ ಪ್ರತಿನಿಧಿ ಖಾಜಿ ರಿಜ್ವಾನ್ ಸಿದ್ದಿಕಿ ಮಾತನಾಡಿ, ‘ಕಲಬುರಗಿಯು ಸೌಹಾರ್ದದ ನೆಲವಾಗಿದೆ. ಇಲ್ಲಿ ಎಲ್ಲರೂ ಒಂದಾಗಿ ಬಾಳುತ್ತೇವೆ. ಕಷ್ಟ–ಸುಖಃ ಹಂಚಿಕೊಳ್ಳುತ್ತೇವೆ. ಜಾತ್ರೆ, ಉತ್ಸವ ಆಚರಿಸುತ್ತೇವೆ’ ಎಂದು ಬಣ್ಣಿಸಿದರು.
ಸಿಖ್ ಸಮುದಾಯದ ಪ್ರತಿನಿಧಿ ಗುರ್ಮಿತ್‌ಸಿಂಗ್ ಸಲ್ಲೂಜಾ ಮಾತನಾಡಿ, ‘ಅನೇಕತೆಯಲ್ಲಿ ಏಕತೆ ಹೊಂದಿರುವ ಜಗತ್ತಿನ ಏಕೈಕ ದೇಶ ಭಾರತವಾಗಿದೆ. ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ನಾವೆಲ್ಲರೂ ಒಂದೇ’ ಎಂದು ನುಡಿದರು.
ಬುದ್ಧನ ಸಂದೇಶದೊಂದಿಗೆ ಮಾತನಾಡಿದ ಬೌದ್ಧ ಧರ್ಮದ ಪ್ರತಿನಿಧಿ ಲಕ್ಷ್ಮಿಕಾಂತ ಹುಬ್ಬಳ್ಳಿ, ‘ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ, ಸೌಹಾರ್ದ ಸದಾ ಚಿರವಾಗಲಿ’ ಎಂದು ಹಾರೈಸಿದರು.
ಪ್ರೊ.ಸಂಜಯ್ ಮಾಕಲ್ ಮಾತನಾಡಿ, ಜಗತ್ತಿನ ಮೊದಲ ಸಂಸತ್ತು ಸ್ಥಾಪಿಸಿದ ಬಸವಣ್ಣ ಮತ್ತು ಭಾವೈಕ್ಯದ ಶರಣಬಸವೇಶ್ವರರ ನಾಡಿನ ಬಗ್ಗೆ ಪರಿಚಯಿಸಿದರು.
ಕಲಬುರಗಿ ಧರ್ಮಕ್ಷೇತ್ರದ ಬಿಷಪ್ ರಾಬರ್ಟ್ ಮೈಕಲ್ ಮಿರಾಂದಾ ಪ್ರಾಸ್ತಾವಿಕವಾಗಿ ಮಾತನಾಡಿ, ‘1965ರಲ್ಲಿ ವ್ಯಾಟಿಕನ್ ಸಿಟಿಯಲ್ಲಿ ಜರುಗಿದ ಮಹಾಸಮ್ಮೇಳನದಲ್ಲಿ ಪೋಪ್ ಅವರು ಸರ್ವಧರ್ಮದವರೊಂದಿಗೆ ಸೌಹಾರ್ದದಿಂದ ಇರಬೇಕು ಎಂದು ಸಂದೇಶ ನೀಡಿದ್ದರು. ಆ ಸಂದೇಶಕ್ಕೀಗ 60 ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸರ್ವಧರ್ಮ ಸಭೆ, ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಕಲಬುರಗಿ ಧರ್ಮಕ್ಷೇತ್ರದ ಶ್ರೇಷ್ಠಗುರು ಸಂತೋಷ ಬಾಪು, ದೈವಾನುಗ್ರಹ ಮಾತೆ ಪ್ರಧಾನಾಲಯದ ಪ್ರಧಾನಗುರು ಫಾದರ್ ಜೋಸೆಫ್ ಪ್ರವೀಣ್, ಫಾದರ್ ಸ್ಟ್ಯಾನಿ ಲೋಬೊ, ಫಾದರ್ ಜರಾಲ್ಡ್ ಸಾಗರ್, ಫಾದರ್ ವಿನ್ಸೆಂಟ್ ಫೆರೆರಾ, ಫಾದರ್ ಆ್ಯರನ್ ವಾಸ್, ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕಿರಣ ಜಾರ್ಜ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವ್ಯಾಟಿಕನ್ ಸಿಟಿ ಪೋಪ್ ರಾಯಭಾರಿಗೆ ಅದ್ದೂರಿ ಸ್ವಾಗತ ಸಭೆಯಲ್ಲಿ ಬೈಬಲ್, ಕುರ್–ಆನ್, ವಚನಗಳ ಸಂದೇಶ ಪರಸ್ಪರರಲ್ಲಿ ಸ್ನೇಹ, ಸಹಕಾರ ಮನೋಭಾವ ಇರಲಿ
ಕ್ರೈಸ್ಥರು ಬರೀ ಧಾರ್ಮಿಕ ಸೇವೆ ಮಾಡುತ್ತಿಲ್ಲ. ಶೈಕ್ಷಣಿಕ ವೈದ್ಯಕೀಯ ಸಮಾಜ ಸೇವೆ ಮಾಡುತ್ತಿದ್ದೇವೆ. ಯೇಸುಕ್ರಿಸ್ತ ಹೇಳಿದಂತೆ ಪೋಪ್ ಅವರ ಸಂದೇಶದಂತೆ ಸರ್ವರನ್ನೂ ಪ್ರೀತಿಸುತ್ತೇವೆಬಿಷಪ್ ರಾಬರ್ಟ್ ಮೈಕಲ್ ಮಿರಾಂದಾ ಕಲಬುರಗಿ ಧರ್ಮಕ್ಷೇತ್ರ