ADVERTISEMENT

ಚಿಂಚೋಳಿ: ಚೆಟ್ಟಿನಾಡ್ ಸಿಮೆಂಟ್ ಕಂಪನಿ ಮೇಲೆ ಐಟಿ ದಾಳಿ

ಸರ್ವರ್ ಬ್ಲಾಕ್ ಮಾಡಿ ದಾಖಲೆಗಳ ಶೋಧ ಕಾರ್ಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 15:35 IST
Last Updated 9 ಡಿಸೆಂಬರ್ 2020, 15:35 IST
ಚಿಂಚೋಳಿ ತಾಲ್ಲೂಕಿನ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಮುಖ್ಯದ್ವಾರ ಜನರು ಹಾಗೂ ವಾಹನಗಳ ಸಂಚಾರವಿಲ್ಲದೇ ಬಿಕೊ ಎನ್ನುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಮುಖ್ಯದ್ವಾರ ಜನರು ಹಾಗೂ ವಾಹನಗಳ ಸಂಚಾರವಿಲ್ಲದೇ ಬಿಕೊ ಎನ್ನುತ್ತಿರುವುದು   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಬಳಿಯ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮೇಲೆ ಬುಧವಾರ ಬೆಳಿಗ್ಗೆ ಐಟಿ ದಾಳಿ ನಡೆಸಿದೆ.

ಐಆರ್‌ಎಸ್ ಅಧಿಕಾರಿ ಲಕ್ಕಪ್ಪ ಹನುಮಣ್ಣವರ್ ಸೇರಿದಂತೆ ಒಟ್ಟು 8 ಜನ ಅಧಿಕಾರಿಗಳ ತಂಡ ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಬಳಿಯ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಕಂಪನಿಯ ಮೂಲಗಳು ಖಚಿತ ಪಡಿಸಿದ್ದು, ಅಧಿಕಾರಿಗಳು ಸರ್ವರ್ ಬಂದ್ ಮಾಡಿ ಶೋಧ ನಡೆಸಿದ್ದಾರೆ. ಕಂಪನಿಯ ಆಡಳಿತ ಶಾಖೆ ಮತ್ತು ಉತ್ಪಾದಿತ ಸಿಮೆಂಟ್ ಹೊರ ಹೋಗದಂತೆ ಬ್ಲಾಕ್ ಮಾಡಲಾಗಿದೆ.

ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಕಂಪನಿಯ ಸಿಮೆಂಟ್ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅಧಿಕಾರಿಗಳಿಗೆ ಅಚ್ಚರಿ: ಬೆಳಿಗ್ಗೆ 5.30ಕ್ಕೆ ಕಂಪನಿ ಆವರಣ ಪ್ರವೇಶಿಸಿದ ಐಟಿ ಅಧಿಕಾರಿಗಳು ಕಂಪನಿ ಅಧಿಕಾರಿಗಳ ಮನೆಗಳಿಗೆ ತೆರಳಿ ತಮ್ಮ ವಾಹನದಲ್ಲಿ ಅಧಿಕಾರಿಗಳನ್ನು ಕೂರಿಸಿಕೊಂಡು ಕಂಪನಿಯ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ಆಡಳಿತ ಶಾಖೆ (ಅಡ್ಮಿನ್), ಮಾನವ ಸಂಪನ್ಮೂಲ (ಎಚ್.ಆರ್) ವಿಭಾಗ ಹಾಗೂ ಲೆಕ್ಕಪತ್ರ ಶಾಖೆಯಲ್ಲಿ ದಾಖಲೆಗಳ ಶೋಧ ನಡೆದಿದೆ. ಜತೆಗೆ ಇಲ್ಲಿಂದ ಸಿಮೆಂಟ್ ಹೊರಗಡೆ ಪೂರೈಸುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಎಲ್ಲಾ ಘಟಕಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಬೇರೆ ಕಡೆಗಳಲ್ಲಿ ಇದು ಎರಡನೇ ಐಟಿ ದಾಳಿಯಾದರೆ, ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮೇಲೆ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಬುಧವಾರ ಬೆಳಿಗ್ಗೆಯಿಂದ ದಾಳಿ ನಡೆದಿದ್ದು ಗುರುವಾರವೂ ದಾಖಲೆಗಳ ಪರಿಶೀಲನೆ ಮುಮದುವರಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.