ADVERTISEMENT

ಆನ್‌ಲೈನ್‌ ಪರೀಕ್ಷಾ ಪದ್ಧತಿ ಕೈಬಿಡಲು ಐಟಿಐ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 10:44 IST
Last Updated 1 ಜನವರಿ 2020, 10:44 IST
ಎಐಡಿವೈಒ ಯುವಜನ ಸಂಘಟನೆ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಎಐಡಿವೈಒ ಯುವಜನ ಸಂಘಟನೆ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ:ಐ.ಟಿ.ಐ ತರಬೇತುದಾರರಿಗೆ ಜಾರಿಗೊಳಿಸಿರುವ ಆನ್‍ಲೈನ್ ಪರೀಕ್ಷಾ ಪದ್ಧತಿಯನ್ನು ಕೈಬಿಡಬೇಕು ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಹಿಂಪಡೆಯಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ) ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಡಿಜಿಇಟಿ ಜಾರಿಗೆ ತರಲು ಉದ್ದೇಶಿಸಿರುವ ಆನ್‍ಲೈನ್ ಪರೀಕ್ಷಾ ಪದ್ಧತಿಯು ಲಕ್ಷಾಂತರ ಐಟಿಐ ತರಬೇತಿ ಪಡೆಯುತ್ತಿರುವವರು ಮತ್ತು ತರಬೇತಿದಾರರನ್ನು ಗೊಂದಲಕ್ಕೆ ತಳ್ಳಿದೆ. ಪರೀಕ್ಷಾ ಫಲಿತಾಂಶವು ಇನ್ನೂ ಹೊರಬಿದ್ದಿಲ್ಲ. ಸಪ್ಲಿಮೆಂಟರಿ ಪರೀಕ್ಷೆಗೆ ಕೊನೆಯ ದಿನಾಂಕವೂ ಮುಗಿದುಹೋಗಿದೆ. ಆದರೆ, ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರ ಜೊತೆಯಲ್ಲಿ ಇದೇ ಮೊದಲ ಬಾರಿಗೆ ಐಟಿಐ ಪರೀಕ್ಷಾ ಶುಲ್ಕಕ್ಕೆ ಜಿಎಸ್‍ಟಿ ಹಾಕುವ ಪದ್ಧತಿ ಜಾರಿಗೆ ಬಂದಿದೆ. ಇವು ಅತ್ಯಂತ ಖಂಡನೀಯ ಕ್ರಮಗಳಾಗಿವೆ ಎಂದು ಟೀಕಿಸಿದರು.

ಐಟಿಐ ಸಂಸ್ಥೆಗಳು ಆನ್‍ಲೈನ್ ಪರೀಕ್ಷೆಗಳನ್ನು ನಡೆಸಲು ತಯಾರಿಯನ್ನೇ ಮಾಡಿಕೊಂಡಿಲ್ಲ. ಅದರಲ್ಲೂ ಸರ್ಕಾರಿ ಸಂಸ್ಥೆಗಳೇ ಸೂಕ್ತ ತಯಾರಿ ಮಾಡಿಕೊಂಡಿಲ್ಲ ಎಂದರೆ, ಇನ್ನು ಖಾಸಗಿ ಸಂಸ್ಥೆಗಳ ಪರಿಸ್ಥಿತಿಯನ್ನು ವಿವರಿಸುವುದೇ ಬೇಡ. ಇಂತಹ ಸಂದರ್ಭದಲ್ಲಿ, ಆನ್‍ಲೈನ್ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಣ್ಣ ಜಂಬಗಿ, ಕಾರ್ಯದರ್ಶಿ ಜಗನ್ನಾಥ ಎಸ್.ಎಚ್. ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ADVERTISEMENT

ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೆಗಾಂವ, ಮುಖಂಡರಾದ ಈಶ್ವರ ಇ.ಕೆ, ಶರಣು ವಚ್ಚಾ, ರಾಜಶೇಖರ ಮಾತೋಳಿ, ಅವಿನಾಶ, ಫಿರೋಜ್, ಸಮೀರ, ಪ್ರೇಮಕುಮಾರ, ಸಾಗರ, ಸುನಿಲಕುಮಾರ, ಸಚಿನ, ಶ್ರೀನಿವಾಸ, ವಿಶಾಲ ಪೇಠಶಿರೂರ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.