ಕಲಬುರಗಿ: ‘ನಮ್ಮನ್ನು ಪಾಶ್ಚಿಮಾತ್ಯರು ವ್ಯಾಖ್ಯಾನಿಸಿದ್ದರಿಂದ ನಮ್ಮ ‘ಸ್ವಯಂ’ ದೃಢೀಕರಣದಲ್ಲಿ ಸಮಸ್ಯೆ ಇದೆ. ಪಾಶ್ಚಿಮಾತ್ಯರು ತಮ್ಮ ತಿಳಿವಳಿಕೆಯಂತೆ ಪೂರ್ವಾತ್ಯವನ್ನು (ಭಾರತ) ಸೃಷ್ಟಿಸಿದ್ದಾರೆ. ಇದೀಗ ನಾವು ನಮ್ಮ ಸ್ಥಳೀಯ ಸಂಪ್ರದಾಯ ಅರ್ಥೈಸಿಕೊಳ್ಳುವ ಸಮಯ ಬಂದಿದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಾರಾಮ್ ತೋಳ್ಪಾಡಿ ಹೇಳಿದರು.
ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿವಿಯ ಸಾರ್ವಜನಿಕ ಆಡಳಿತ ವಿಭಾಗವು ನವದೆಹಲಿಯ ಐಸಿಎಸ್‌ಎಸ್‌ಆರ್ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿದರು.
‘ನಮ್ಮ ಸಮಾಜ ವಿಜ್ಞಾನ ಮತ್ತು ರಾಜಕೀಯ ವಿಜ್ಞಾನ ಸಿದ್ಧಾಂತಗಳು ಯುರೋಕೇಂದ್ರಿತ ವಸಾಹತುಶಾಹಿ ಗತಕಾಲದಿಂದ ಹುಟ್ಟಿಕೊಂಡಿವೆ. ಶೈಕ್ಷಣಿಕ ಚೌಕಟ್ಟು ಪಾಶ್ಚಿಮಾತ್ಯ ಉದಾರವಾದಿ ಸಿದ್ಧಾಂತಗಳ ಅನುಭವ ಹೊಂದಿದೆ. ಆದ್ದರಿಂದ ನಮ್ಮ ಸಿದ್ಧಾಂತಗಳು ಮತ್ತು ಅನುಭವಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ, ಅದನ್ನು ಅಳವಡಿಸಿಕೊಳ್ಳುವ ಮುನ್ನ ನಾವು ಸ್ವಯಂ ಪ್ರಜ್ಞೆ ಮೆರೆಯಬೇಕಿದೆ’ ಎಂದರು.
‘ನಮ್ಮ ರಾಜಕೀಯ ವ್ಯವಸ್ಥೆ ಪುನರ್ ನಿರ್ಮಿಸುವ ವಿಷಯದಲ್ಲಿ ನಮ್ಮ ಇತಿಹಾಸ, ಸಂಸ್ಕೃತಿ, ಸ್ಥಳೀಯ ಸಂಪ್ರದಾಯಗಳನ್ನು ಅಧ್ಯಯನ ಮಾಡಬೇಕು. ನಮ್ಮ ರಾಷ್ಟ್ರದ ಸ್ಥಳೀಯ ಆಡಳಿತದ ಪಾತ್ರ ಅರ್ಥೈಸಿಕೊಳ್ಳುವ ಮೂಲಕ ನಾವು ಪಾಶ್ಚಿಮಾತ್ಯ ಶಿಕ್ಷಣ ವ್ಯವಸ್ಥೆಯ ಗುಲಾಮಗಿರಿಯಿಂದ ಹೊರಬರಬಹುದು. ಅಧಿಕಾರದ ವಿಕೇಂದ್ರೀಕರಣದ ಗಾಂಧೀಜಿ–ಲೋಹಿಯಾ ಮಾದರಿ ಮರು ವಿಮರ್ಶಿಸುವ ಮೂಲಕ ಇದು ಸಾಧ್ಯ’ ಎಂದರು.
ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ ಮೀರಾ ಆಲೂರ್ ಮಾತನಾಡಿ, ‘ಆಡಳಿತದಲ್ಲಿ ಆರ್ಥಿಕತೆ ಮತ್ತು ದಕ್ಷತೆಯನ್ನು ಉತ್ತೇಜಿಸಲು ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯ ಪಾತ್ರ ಮುಖ್ಯವಾಗಿದೆ. ಆರ್‌ಟಿಐ ಕಾಯ್ದೆ, ನ್ಯಾಯಾಂಗ ವ್ಯವಸ್ಥೆ, ಆಡಳಿತದಲ್ಲಿ ಡಿಜಿಟಲೀಕರಣ ಇತ್ಯಾದಿಗಳು ನಮ್ಮನ್ನು ಎಚ್ಚರವಾಗಿರಿಸುತ್ತದೆ. ‘ಸಕಾಲ’ ನಮ್ಮ ಆಡಳಿತ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆಯಾಗಿದೆ. ಇದು ಪ್ರತಿಯೊಬ್ಬ ಸಾಮಾನ್ಯ ನಾಗರಿಕರಿಗೆ ಸಹಾಯ ಮಾಡುತ್ತದೆ. ಭಾರತೀಯ ಕುಟುಂಬ ವ್ಯವಸ್ಥೆಯು ಸ್ಥಳೀಯ ಆಡಳಿತಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅಲ್ಲಿ ತಾಯಿ ಮತ್ತು ತಂದೆ ಮಾನವಶಕ್ತಿಗೆ ಪರಿಣಾಮಕಾರಿಯಾಗಿ ಹಣಕಾಸು ಒದಗಿಸುವ ಬಗ್ಗೆ ಕಾಳಜಿ ವಹಿಸುತ್ತಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ‘ಸಾಮಾಜಿಕ ಆಯ್ಕೆಯ ಸಿದ್ಧಾಂತವು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಅರ್ಥಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ನಮಗೆ ಸಹಾಯ ಮಾಡುತ್ತದೆ. ಮತದಾನದ ಶಕ್ತಿಯು ನಮ್ಮ ಸ್ವಂತ ಆಡಳಿತಾತ್ಮಕ ಅಗತ್ಯಗಳನ್ನು ಪೂರೈಸುವ ಆಯ್ಕೆಯಾಗಿದೆ’ ಎಂದರು.
ಡೀನ್ ಪ್ರೊ.ಪವಿತ್ರಾ ಆಲೂರ್ ಮಾತನಾಡಿದರು. ಸಮ್ಮೇಳನದ ಸಂಚಾಲಕ ಕಿರಣ್ ಗಾಜನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಹೂಗಾರ ಸ್ವಾಗತಿಸಿದರು. ಹಫೀಜ್ ಮತ್ತು ಅಭೇರಿ ನಿರೂಪಿಸಿದರು. ಹರ್ಷಿತಾ ಮತ್ತು ಅನಿಶಾ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು.
ಪ್ರೊ.ಚೆನ್ನವೀರ ಆರ್.ಎಂ, ಪ್ರೊ.ರೊಮಾಟೆ ಜಾನ್, ಸಂದೀಪ ಇನಾಮಪುಡಿ, ಅಲೋಕ ಗೌರವ, ರವಿ ಕಾಂಗೈ, ಡೀನರು, ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.