ADVERTISEMENT

12ನೇ ಶತಮಾನದಲ್ಲಿ ಕಲ್ಯಾಣವೇ ಕೈಲಾಸ: ಸಿದ್ರಾಮ ಯಳವಂತಗಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:08 IST
Last Updated 25 ಡಿಸೆಂಬರ್ 2024, 16:08 IST
ಕಲಬುರಗಿಯಲ್ಲಿ ಬುಧವಾರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ, ಒಕ್ಕಲಿಗ ಮುದ್ದಣ್ಣ, ಭಾಲ್ಕಿಯ ಡಾ.ಚನ್ನಬಸವ ಪಟ್ಟದೇವರು ಮತ್ತು ಗುಡ್ಡಾಪುರ ದಾನಮ್ಮ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಗಣ್ಯರು
ಕಲಬುರಗಿಯಲ್ಲಿ ಬುಧವಾರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ, ಒಕ್ಕಲಿಗ ಮುದ್ದಣ್ಣ, ಭಾಲ್ಕಿಯ ಡಾ.ಚನ್ನಬಸವ ಪಟ್ಟದೇವರು ಮತ್ತು ಗುಡ್ಡಾಪುರ ದಾನಮ್ಮ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದ ಗಣ್ಯರು   

ಕಲಬುರಗಿ: ‘12ನೇ ಶತಮಾನದಲ್ಲಿ ಅಧ್ಯಾತ್ಮ ಹಸಿವಿದ್ದವರಿಗೆ ಕಲ್ಯಾಣವೇ ಕೈಲಾಸವಾಗಿತ್ತು’ ಎಂದು ಅನುಭವಿ ಸಿದ್ರಾಮ ಯಳವಂತಗಿ ಹೇಳಿದರು.

ನಗರದ ಬಸವನ ಮಂಟಪದಲ್ಲಿ ಬುಧವಾರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಮಾದಾರ ಚನ್ನಯ್ಯ ಹಾಗೂ ಗುಡ್ಡಾಪುರ ದಾನಮ್ಮ’ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಹರಿಯುವ ನದಿಗಳಲ್ಲೆವೂ ಸಮುದ್ರ ಸೇರುವಂತೆ, 12ನೇ ಶತಮಾನದಲ್ಲಿ ಎಲ್ಲ ಮಾರ್ಗಗಳು ಕಲ್ಯಾಣಕ್ಕೆ ಬಂದು ಸೇರುತ್ತಿದ್ದವು. ಕಲ್ಯಾಣಕ್ಕೆ ಬಂದು ಶರಣರ ತತ್ವಗಳನ್ನು ತಿಳಿದುಕೊಳ್ಳಲು ಹಲವರು ಹವಣಿಸುತ್ತಿದ್ದರು. ಯಾವುದಾದರೂ ಮಾರ್ಗದ ಮೂಲಕ ಕಲ್ಯಾಣವನ್ನು ತಲುಪುತ್ತಿದ್ದರು’ ಎಂದರು.

ADVERTISEMENT

‘ಸಿದ್ಧರಾಮರ ಸಮಾಜ ಸೇವೆಯಿಂದ ಪ್ರಭಾವಿತರಾದ ಲಿಂಗಮ್ಮ (ದಾನಮ್ಮ), ಮುಂದೆ ಅವರ ಮಾರ್ಗದರ್ಶನ ಪಡೆದರು. ಶರಣರನ್ನು ಕಾಣುವ ಇಚ್ಛೆಯೊಂದಿಗೆ ಕಲ್ಯಾಣಕ್ಕೆ ಹೋಗುತ್ತಿದ್ದ ಗುಂಪಿನೊಂದಿಗೆ ಮಹಾರಾಷ್ಟ್ರದಿಂದ ಕಲ್ಯಾಣಕ್ಕೆ ಬಂದರು. ಲಿಂಗದೀಕ್ಷೆಯೂ ಪಡೆದು ಶರಣರ ತತ್ವಗಳನ್ನು ಅರ್ಥೈಸಿಕೊಂಡರು. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಶರಣರ ತತ್ವಗಳು, ವಚನಗಳನ್ನು ಪ್ರಚಾರ ಮಾಡಿ, ಹೋದಲ್ಲೆಲ್ಲ ಹಲವರಿಗೆ ಲಿಂಗದೀಕ್ಷೆಯೂ ಮಾಡಿದರು’ ಎಂದು ಹೇಳಿದರು.

‘ಕಲ್ಯಾಣ ಕ್ರಾಂತಿಯ ಬಳಿಕ ಶರಣರ ವಚನಗಳನ್ನು ಸಂರಕ್ಷಿಸುವಲ್ಲಿನ ದಾನಮ್ಮ ಅವರ ಪಾತ್ರವನ್ನು ಯಾರೂ ಮರೆಯುವಂತಿಲ್ಲ. ಉತ್ತಮವಾಗಿ ಸಮಾಜ ಸೇವೆ ಮಾಡಿದ ಮಹಾನ್ ಮಹಿಳೆಯರನ್ನು ಪವಾಡ ಪುರುಷರು, ದೇವತೆಯ ಸ್ಥಾನಕ್ಕೆ ಏರಿಸಲಾಗಿದೆ. ಅವರ ಬಗ್ಗೆ ನೈಜ ಚರಿತ್ರೆಯನ್ನು ಜನರಿಗೆ ತಿಳಿಸಬೇಕಿದೆ’ ಎಂದರು.

ಮಹಾಸಭಾದ ಜಿಲ್ಲಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಆರ್‌.ಜಿ. ಶೆಟಕಾರ ಮಾತನಾಡಿ, ‘ಶರಣರ ಸಂದೇಶಗಳನ್ನು ತಿಳಿಯಲು ಹಾಗೂ ಪರಸ್ಪರ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಶರಣ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದರು.

ವಿಶ್ವನಾಥ ಡೊಣ್ಣೂರ ಅವರು ‘ಭಾಲ್ಕಿಯ ಡಾ.ಚನ್ನಬಸವ ಪಟ್ಟದೇವರು ಹಾಗೂ ಒಕ್ಕಲಿಗ ಮುದ್ದಣ್ಣ’ ಕುರಿತು ಉಪನ್ಯಾಸ ನೀಡಿದರು. ಸಿದ್ದಲಿಂಗೇಶ್ವರ ಬುಕ್‌ ಡಿಪೊ ಸಂಸ್ಥಾಪಕ ಬಸವರಾಜ ಜಿ.ಕೊನೇಕ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ, ಮಹಾಸಭಾ ಕಾರ್ಯದರ್ಶಿ ಅಶೋಕ ಘೊಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.