ADVERTISEMENT

ಪೋಕ್ಸೊ ಪ್ರಕರಣ: 1ನೇ ಅಪರಾಧಿಗೆ 35 ವರ್ಷ, 2ನೇ ಅಪರಾಧಿಗೆ 17 ವರ್ಷ 6 ತಿಂಗಳು ಸಜೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 8:11 IST
Last Updated 27 ಡಿಸೆಂಬರ್ 2024, 8:11 IST
   

ಕಲಬುರಗಿ: ಶೌಚಾಲಯಕ್ಕೆ ಹೋಗಿದ್ದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಕಲಬುರಗಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌(ಪೋಕ್ಸೊ ವಿಶೇಷ) ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ 1ನೇ ಅಪರಾಧಿ, ಹುಣಸಿಹಡಗಿಲ ಗ್ರಾಮದ ಯುವಕ ಜಾನಿ ಅಲಿಯಾಸ್‌ ರೇವಣಸಿದ್ಧ ಮಾಂಗಗೆ ನ್ಯಾಯಾಲಯವು 35 ವರ್ಷ ಜೈಲು ಹಾಗೂ ₹30 ಸಾವಿರ ದಂಡ ವಿಧಿಸಿದೆ. ಅತ್ಯಾಚಾರ ಕೃತ್ಯಕ್ಕೆ ಸಹಕರಿಸಿದಕ್ಕಾಗಿ ಪ್ರಕರಣದ 2ನೇ ಅಪರಾಧಿ, ಹತಗುಂದಾ ಗ್ರಾಮದ ಯುವಕ ಸಾಗರ ಹೊಗೆ 17 ವರ್ಷ 6 ತಿಂಗಳು ಜೈಲು, ₹10 ಸಾವಿರ ದಂಡಕ್ಕೆ ಗುರಿಯಾಗಿದ್ದಾನೆ.

ಘಟನೆ ವಿವರ:

2023ರ ಮಾರ್ಚ್‌ 18ರಂದು ಮಧ್ಯಾಹ್ನ ಬಾಲಕಿ ಶೌಚಾಲಯಕ್ಕೆ ಹೋಗಿದ್ದಳು. ಈ ವೇಳೆ ಜಾನಿ ಅಲಿಯಾಸ್‌ ರೇವಣಸಿದ್ಧ ಹಾಗೂ ಸಾಗರ ಹೊಗೆ ಬಾಲಕಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಕುತ್ತಿಗೆಗೆ ಚಾಕು ಇಟ್ಟು, ಜೀವಬೆದರಿಕೆ ಹಾಕಿದ್ದರು. ಬಳಿಕ ಜಾನಿ ಅಲಿಯಾಸ್ ರೇವಣಸಿದ್ಧ ಅತ್ಯಾಚಾರ ಎಸೆಗಿದ್ದ. ಈ ಪ್ರಕರಣದ ತನಿಖೆ ನಡೆಸಿದ್ದ ಕಲಬುರಗಿ ಸಬ್‌ಅರ್ಬನ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಮೀರ್ ಮುಲ್ಲಾ ಹಾಗೂ ಪಿಎಸ್‌ಐ ಬಸವರಾಜು ಅವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌(ಪೋಕ್ಸೊ ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ, ಪೋಕ್ಸೊ ಹಾಗೂ ಪಿಐಸಿಯ ವಿವಿಧ ಕಲಂಗಳಡಿ ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಅಲ್ಲದೇ, ಪ್ರಕರಣದ ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ₹7 ಲಕ್ಷ ಪರಿಹಾರವನ್ನು 1 ತಿಂಗಳಲ್ಲಿ ನೀಡುವಂತೆಯೂ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.

ಕಲಬುರಗಿ ಸಬ್‌ಅರ್ಬನ್‌ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಪ್ರಭುರಾಜ ಎಸ್‌., ಶ್ರೀನಿವಾಸ ಹಾಗೂ ಕುಮಾರ ಅವರು ಪ್ರಕರಣದ ಸಾಕ್ಷಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.