ADVERTISEMENT

5 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್‌ ಪ್ರಬಲ ಸ್ಪರ್ಧೆ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 12:20 IST
Last Updated 11 ನವೆಂಬರ್ 2019, 12:20 IST
ದೇವೇಗೌಡ
ದೇವೇಗೌಡ   

ಕಲಬುರ್ಗಿ: ‘ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಐದು ಕ್ಷೇತ್ರಗಳಲ್ಲಿ ಮಾತ್ರ ನಾವು ಪ್ರಬಲ ಪೈಪೋಟಿ ನೀಡುತ್ತೇವೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

‘ಎಲ್ಲ 15 ಸ್ಥಾನಗಳಲ್ಲೂ ಗೆಲ್ಲುತ್ತೇವೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಹೇಳುತ್ತಲೇ ಇದ್ದಾರೆ. ಅದು ತರ್ಕವಿಲ್ಲದ ಹೇಳಿಕೆ. ಬೆಳಗಾವಿ ಹಾಗೂ ಹಳೆ ಮೈಸೂರು ಭಾಗದಲ್ಲಿನ ಕ್ಷೇತ್ರಗಳು ಜೆಡಿಎಸ್‌ ಪಾಲಾಗಲಿವೆ ಹೊರತು; ಎಲ್ಲ ಕಡೆ ಗೆಲ್ಲುತ್ತೇವೆ ಎಂದು ನಾನು ಭ್ರಮೆಯಿಂದ ಹೇಳಲಾರೆ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸದ್ಯ ಯಡಿಯೂರಪ್ಪ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ಉಪಚುನಾವಣೆ ಫಲಿತಾಂಶ ಹೊರಬಿದ್ದ ಮೇಲೆ ಮಧ್ಯಂತರ ಚುನಾವಣೆ ಅನಿವಾರ್ಯ ಎಂದೂ ಕೆಲವರು ತಾಳೆ ಹಾಕುತ್ತಿದ್ದಾರೆ. ಆದರೆ, ಮಧ್ಯಂತರ ಚುನಾವಣೆಗೆ ಹೋಗುವ ಶಕ್ತಿ ನಮಗೆ ಇಲ್ಲ. ಕಾಂಗ್ರೆಸ್‌– ಬಿಜೆಪಿಯ ಆಂತರಿಕ ಕಚ್ಚಾಟ ಮಿತಿಮೀರಿದರೆ ನಾವೇನೂ ಮಾಡಲಾಗುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಈ ಹಿಂದೆ ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಇಳಿಸಲು ಎಲ್ಲ ಪಕ್ಷಗಳೂ ಒಂದಾಗಿದ್ದವು. ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ದೂರ ಇಡಲು ಎಲ್ಲ ಪಕ್ಷಗಳೂ ಒಂದಾಗುತ್ತಿವೆ. ಶಿವಸೇನೆಯ ಬಲದಿಂದಲೇ ಬಿಜೆಪಿಯವರು ಅಧಿಕಾರ ನಡೆಸಿದರು. ಆದರೆ, ಈಗ ಉದ್ಧವ್‌ ಠಾಕ್ರೆ ದೊಡ್ಡವರಾಗಿದ್ದಾರೆ. ಪ‍್ರಬಲರಾಗಿದ್ದಾರೆ. ಹಾಗಾಗಿ, ಬಿಜೆಪಿಗೇ ಸೆಡ್ಡು ಹೊಡೆಯುತ್ತಿದ್ದಾರೆ. ಇತಿಹಾಸ ಹೀಗೆಯೇ ಮರಳುತ್ತದೆ’ ಎಂದೂ ಅವರು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.