
ಕಲಬುರಗಿ: ಜೇವರ್ಗಿ ಸಿಸಿ ತಂಡವು ಶನಿವಾರ ಇಲ್ಲಿ ಆರಂಭವಾದ ನೆವಿಲ್ಲೆ ಹೋಮಿ ಇರಾನಿ ಕಪ್ ಟಿ20 ನೂತನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು.
ನೂತನ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನೂತನ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ಕರ್ನಾಟಕ ಕ್ರಿಕೆಟ್ ಕ್ಲಬ್ (ಎಚ್‌ಕೆಸಿಸಿ) ತಂಡವು 16.3 ಓವರ್‌ಗಳಲ್ಲಿ 104 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಜೇವರ್ಗಿ ಕ್ರಿಕೆಟ್ ಕ್ಲಬ್ 12.2 ಓವರ್‌ಗಳಲ್ಲೇ ಕೇವಲ 3 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ವಿಜೇತ ಜೇವರ್ಗಿ ಸಿಸಿ ಪರ ಆದರ್ಶ್ ಪಾಟೀಲ 40 (20ಎಸೆತ) ಹಾಗೂ ವಿಜಯಕುಮಾರ್ ಎಚ್. 27 (24ಎ) ಮಿಂಚಿದರು. ಎದುರಾಳಿ ತಂಡದ ತನ್ಮಯ್, ಕುನಾಲ್, ಸುಜನ್ ತಲಾ 1 ವಿಕೆಟ್ ಗಳಿಸಿದರು.
ಎಚ್‌ಕೆಸಿಸಿ ತಂಡದ ಶ್ರೀಮಂತ ಬಿ.(35), ಆರ್ಯನ್ (30) ಉತ್ತಮವಾಗಿ ಆಡಿದರು. ಜೇವರ್ಗಿ ತಂಡದ ಸುರೇಶ ಚನ್ನೂರ 13 ರನ್‌ಗೆ 5 ವಿಕೆಟ್ ಕಬಳಿಸಿ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಪ್ರತಿಭೆಗಳಿಗೆ ಅವಕಾಶ: ಪಾಂಡ್ವೆ
‘ಕಲಬುರಗಿ ಜಿಲ್ಲೆಯಲ್ಲಿ ಹಲವು ಪ್ರತಿಭಾವಂತ ಕ್ರಿಕೆಟಿಗರ ಪಡೆಯೇ ಇದೆ. ಆದರೆ ಅವರಿಗೆ ಉತ್ತಮವಾದ ಅವಕಾಶ, ವೇದಿಕೆ ಸಿಗುತ್ತಿಲ್ಲ. ಈ ಟೂರ್ನಿಯ ಮೂಲಕ ಆಟಗಾರರಿಗೆ ಅವಕಾಶ ಸಿಗುತ್ತಿರುವುದು ಸಂತಸದ ವಿಷಯ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಆಯುಕ್ತ ರಾಹುಲ್ ಪಾಂಡ್ವೆ ಹೇಳಿದರು.
ನೆವಿಲ್ಲೆ ಹೋಮಿ ಇರಾನಿ ಕಪ್ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದ ಅವರು, ‘ವಾರಾಂತ್ಯಕ್ಕೆ ಇಲ್ಲಿ ಬಂದು ನಾನು ಕ್ರಿಕೆಟ್ ಆಡುತ್ತೇನೆ. ಹಲವು ಕ್ರಿಕೆಟಿಗರು ಇಲ್ಲಿ ಪ್ರಾಕ್ಟೀಸ್ ಮಾಡುತ್ತಾರೆ. ಟೂರ್ನಿಗೆ ಸಿದ್ಧತೆ ಚೆನ್ನಾಗಿ ಮಾಡಿಕೊಳ್ಳಲಾಗಿದೆ. ಕ್ರೀಡಾಸ್ಫೂರ್ತಿಯಿಂದ ಆಡಬೇಕು. ಉತ್ತಮವಾದ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ. ಮೂರು ಮಹಿಳಾ ತಂಡಗಳಿಗೂ ಅವಕಾಶ ನೀಡಿದ್ದು ಖುಷಿಯ ವಿಷಯ’ ಎಂದರು.
ಟೂರ್ನಿಯ ಪ್ರಧಾನ ಪ್ರಾಯೋಜಕ ನೌಷದ್ ನೆವಿಲ್ ಇರಾನಿ ಮಾತನಾಡಿ, ‘ನನ್ನ ಅಜ್ಜ ಮೊದಲ ಬಾರಿಗೆ ಟೂರ್ನಿಯೊಂದನ್ನು ಆಡಿಸಿದ್ದರು. ಅವರ ಹಾದಿಯಲ್ಲಿ ನಮ್ಮ ತಂದೆ, ನಾನು ಸಾಗಿದ್ದೇವೆ. ಉದಯೋನ್ಮುಖ ಆಟಗಾರರಿಗೆ ಪ್ರೋತ್ಸಾಹಿಸಲು ಟೂರ್ನಿ ನಡೆಸಲಾಗುತ್ತಿದೆ’ ಎಂದರು.
ಜಿಲ್ಲಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜೈಭೀಮ ದರ್ಗಿ, ಗೌತಂ ಜಹಗೀರದಾರ, ಸುರೇಂದ್ರ ಜಾಜಿ, ಗಿರೀಶ ಗಲಗಲಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.