ಜೇವರ್ಗಿ: ಹುಮನಾಬಾದ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50, ಜೇವರ್ಗಿ - ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150.ಎ ಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಹೀಗಾಗಿ ಪ್ರಯಾಣಿಕರು ಕಷ್ಟಡುವಂತಾಗಿದೆ.
ಈ ಹೆದ್ದಾರಿಗಳು ಕಲಬುರಗಿ ನಗರದಿಂದ ಮುಂಬೈ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿವೆ. ಹೀಗಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸವಾರರಿಗೆ ನರಕಯಾತನೆಯಾಗಿದೆ.
ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳು ವಾಹನ ಸವಾರರಿಗೆ ದೂರದಿಂದ ಕಾಣುದಿಲ್ಲ. ಹತ್ತಿರ ಬಂದಾಗ ಸವಾರರು ಏಕಾಏಕಿ ಬ್ರೇಕ್ ಹಾಕುವ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಹಿಂಬದಿ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳಾಗುತ್ತಿವೆ. ಕಟ್ಟಿಸಂಗಾವಿ ಸೇತುವೆ ಬಳಿ ಹಸನಾಪೂರ ಕ್ರಾಸ್ ಹತ್ತಿರ ಬಿದ್ದಿರುವ ಗುಂಡಿಗಳಿಂದ ಇದೇ ರೀತಿ ಸಾಕಷ್ಟು ಅಪಘಾತಗಳು ಆಗುತ್ತಿವೆ.
ಹರವಾಳ ಕ್ರಾಸ್ ಹತ್ತಿರ ರಸ್ತೆ ಉಬ್ಬು-ತಗ್ಗಿನಿಂದ ಕೂಡಿದೆ. ಇದರಿಂದ ದ್ವಿಚಕ್ರ ಸವಾರರಿಗೆ ಪ್ರಯಾಣ ಸವಾಲಾಗಿ ಪರಿಣಮಿಸಿದೆ. ‘ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಸರಿಯಾಗಿ ಕಾಣದೆ ಬೈಕ್ ಸವಾರರು ಬಿದ್ದು ಸಾಕಷ್ಟು ಅಪಘಾತಗಳು ಆಗಿವೆ’ ಎನ್ನುತ್ತಾರೆ ಸ್ಥಳೀಯರು.
ಈ ರಸ್ತೆಗೆ ಹಲವು ಬಾರಿ ತೇಪೆ ಹಾಕಿದರೂ ಪದೇ ಪದೇ ಗುಂಡಿ ಬೀಳುತ್ತಲೇ ಇರುತ್ತವೆ. ಗುಂಡಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನು ಮುಚ್ಚಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಬೇಕು’ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಹದಗೆಟ್ಟ ರಸ್ತೆಯಿಂದ ವಾಹನಗಳು ಪದೇ ಪದೆ ದುರಸ್ತಿಗೆ ಬರುತ್ತಿವೆ. ಹೀಗಾಗಿ ಖಾಸಗಿ ವಾಹನಗಳ ಮಾಲೀಕರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.
‘ಅತಿಯಾದ ಮಳೆಯಿಂದಾಗಿ ಜೇವರ್ಗಿ ಸೇರಿದಂತೆ ಜಿಲ್ಲೆಯಾದ್ಯಂತ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳ ದುರಸ್ತಿ ಹೋಗಲಿ, ಗುಂಡಿ ಮುಚ್ಚುವ ಕಾರ್ಯವನ್ನಾದರೂ ಮಾಡಬೇಕು’ ಎನ್ನುವ ಒತ್ತಾಯ ಜನರದ್ದಾಗಿದೆ.
ಟೋಲ್ ಪಾವತಿಸಿ ಹದೆಗೆಟ್ಟ ರಸ್ತೆಯಲ್ಲಿ ಭಯದಲ್ಲೇ ಸಂಚರಿಸಬೇಕಾಗಿದೆ. ಸ್ವಲ್ಪ ಯಾಮಾರಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆಪಂಚಯ್ಯಸ್ವಾಮಿ ಗುಡೂರ ಚಾಲಕ
ಮಳೆಯಿಂದ ಹದಗೆಟ್ಟಿರುವ ರಸ್ತೆ ದುರಸ್ತಿ ಗುಂಡಿ ಮುಚ್ಚಿ ಸುಗಮ ರಸ್ತೆ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕುಸಂಗಮೇಶ ಬೋರಟ್ಟಿ ಕನ್ನಡ ಪರ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.