
ಜೇವರ್ಗಿ: ‘ತಾಲ್ಲೂಕಿನ ಯಾಳವಾರ, ಸಿಗರಥಹಳ್ಳಿ, ಚಿಗರಹಳ್ಳಿ, ಸೋಮನಾಥಹಳ್ಳಿ, ಕೊಡಚಿ ಗ್ರಾಮಗಳಲ್ಲಿ ಗ್ರಾಹಕರಿಗೆ ಬೇಕಾಬಿಟ್ಟಿ ವಿದ್ಯುತ್ ಬಿಲ್ ನೀಡಲಾಗಿದೆ’ ಎಂದು ಜೆಸ್ಕಾಂ ವಿರುದ್ಧ ಸಿಪಿಐ ಮುಖಂಡ ಡಾ.ಮಹೇಶ ರಾಠೋಡ ಕಿಡಿ ಕಾರಿದರು.
ಪಟ್ಟಣದ ಜೆಸ್ಕಾಂ ಕಚೇರಿಗೆ ಭಾರತ ಕಮ್ಯುನಿಷ್ಟ್ ಪಕ್ಷ (ಸಿಪಿಐ), ಆದರ್ಶ ಗ್ರಾಮ ಸಮಿತಿ ಯಾಳವಾರ ಹಾಗೂ ಜೇವರ್ಗಿ-ಯಡ್ರಾಮಿ ತಾಲ್ಲೂಕ ರೈತ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಬೇಕಾಬಿಟ್ಟಿ ವಿದ್ಯುತ್ ಬಿಲ್ ನೀಡಿರುವ ಕ್ರಮವನ್ನು ಖಂಡಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಬದಲಿಗೆ, ₹1.40 ಲಕ್ಷ, ₹50 ಸಾವಿರ, ₹40, 20, 10 ಸಾವಿರ ಹೀಗೆ ಬೇಕಾಬಿಟ್ಟಿ ಬಿಲ್ ನೀಡಲಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿ ಝಿರೋ ಬಿಲ್ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ರಾಜೇಶ ಕಟ್ಟಿಮನಿ, ಕೆಪಿಟಿಸಿಎಲ್ ಅಧಿಕಾರಿಗಳು ಪ್ರತಿಭಟನಾನಿರತ ಮುಖಂಡರೊಂದಿಗೆ ಚರ್ಚಿಸಿದರು.
ಬಿಲ್‌ಗಳ ಕುರಿತು ಪರಿಶೀಲನೆ ನಡೆಸಿ ಗ್ರಾಹಕರಿಂದ ಪಡೆದ ವಿದ್ಯುತ್ ಬಿಲ್ ಮರಳಿ ನೀಡಲಾಗುವುದು. ಯಾಳವಾರ ಹತ್ತಿರ ವಿದ್ಯುತ್ ಉಪಕೇಂದ್ರ ನಿರ್ಮಾಣದ ಬಗ್ಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಆದರ್ಶ ಗ್ರಾಮ ಸಮಿತಿಯ ಇಬ್ರಾಹಿಂ ಪಟೇಲ ಯಾಳವಾರ, ಬಾಬು ಬಿ.ಪಾಟೀಲ, ರಾಜಾ ಪಟೇಲ ಪೊಲೀಸ್ ಪಾಟೀಲ, ಅಖಿಲ್ ಪಾಶ ಜಹಾಗೀರದಾರ, ಸದ್ದಾಮ್ ಪಟೇಲ್, ರಿಜ್ವಾನ್ ಪಟೇಲ್, ಶಾಂತಯ್ಯ ಗುತ್ತೇದಾರ, ಅಜೀಜ್ ಪಟೇಲ್, ಹುಸೇನ್ ಪಟೇಲ್, ಜಾಫರ್ ಪಟೇಲ್, ದಾವೂದ್ ಹರನೂರ, ಮಹಮ್ಮದ್ ಚೌದ್ರಿ, ಗಫೂರ್ ಪಟೇಲ್ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.