ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ವಿಜಯಪುರ ರಸ್ತೆಯಲ್ಲಿರುವ ಹಳ್ಳ ಉಕ್ಕೇರಿ ಹರಿಯುತ್ತಿರುವುದು
ಜೇವರ್ಗಿ: ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದ ವರೆಗೆ ಸುರಿದ ಭಾರಿ ಮಳೆಯಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೊಲ-ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಿನ ಬಳಕೆಯ ವಸ್ತುಗಳು ಸೇರಿದಂತೆ ವಿವಿಧ ಸಾಮಗ್ರಿಗಳು ನೀರು ಪಾಲಾಗಿವೆ. ಮನೆಯವರೆಲ್ಲರೂ ಬೆಳಗಾಗುವವರೆಗೂ ನಿದ್ದೆಗೆಟ್ಟು ನೀರು ಹೊರಹಾಕಲು ಪರದಾಡಿದ್ದಾರೆ. ಮಕ್ಕಳು, ವೃದ್ಧರು ಅಕ್ಕಪಕ್ಕದ ಮನೆಗಳಲ್ಲಿ ರಾತ್ರಿ ಕಳೆದಿದ್ದಾರೆ.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಪಕ್ಕದ ಜೋಪಡಪಟ್ಟಿ ಬಡಾವಣೆ, ಷಣ್ಮುಖ ಶಿವಯೋಗಿಗಳ ವಿರಕ್ತ ಮಠದ ಆವರಣ, ಷಣ್ಮುಖ ಶಿವಯೋಗಿ ಪ್ರೌಢ ಶಾಲೆ, ಬುಗ್ಗಿ ಬಡಾವಣೆ, ಜೇವರ್ಗಿ–ಕೆ ಬಡಾವಣೆ, ಮೌನೇಶ್ವರ ಕಾಲೊನಿ ಬಡಾವಣೆಯ ಮನೆಗಳಲ್ಲಿ ನೀರು ನುಗ್ಗಿ ಸಾಕಷ್ಟು ಸಂಭವಿಸಿದೆ. ಹಳ್ಳದ ಪ್ರವಾಹದಿಂದ ಜೇವರ್ಗಿ-ಗೌನಳ್ಳಿ ಗ್ರಾಮಕ್ಕೆ ತೆರಳುವ ಬ್ರಿಡ್ಜ್ ಮುಳುಗಡೆಯಾಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.
ಪಟ್ಟಣದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಮೇಲೆ ನೀರು ಹರಿದು ಜನ-ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಮಳೆಯ ನೀರಿನೊಂದಿಗೆ ಒಳ ಚರಂಡಿ ತ್ಯಾಜ್ಯ ಮನೆಗಳಿಗೆ ನುಗ್ಗಿದ್ದರಿಂದ ಕೆಟ್ಟ ವಾಸನೆ ಬೀರಿದ್ದು, ಸಾಂಕ್ರಾಮಿಕ ರೋಗದ ಭೀತಿಯೂ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.