ADVERTISEMENT

ಜೇವರ್ಗಿ: ಭಕ್ತರ ಇಷ್ಟಾರ್ಥ ಈಡೇರಿಸುವ ಮಹಾಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:08 IST
Last Updated 18 ಅಕ್ಟೋಬರ್ 2025, 7:08 IST
ಜೇವರ್ಗಿ ಪಟ್ಟಣದ ಮಹಾಲಕ್ಷ್ಮಿ ಮಂದಿರ
ಜೇವರ್ಗಿ ಪಟ್ಟಣದ ಮಹಾಲಕ್ಷ್ಮಿ ಮಂದಿರ   

ಜೇವರ್ಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಕ್ತಿಪೀಠಗಳಿಗೇನೂ ಕಡಿಮೆ ಇಲ್ಲ. ಜೇವರ್ಗಿ ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನ ‌ಕೂಡ ಪ್ರಮುಖ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ‌.

ಸೀಗಿ ಹುಣ್ಣಿಮೆ ನಂತರ ನಡೆಯುವ ಈ ತಾಯಿ ಜಾತ್ರೆಗೆ ರಾಜ್ಯ ಅಲ್ಲದೇ ಅನ್ಯ ರಾಜ್ಯದ ಭಕ್ತರೂ ಆಗಮಿಸುತ್ತಾರೆ. ಮಹಾಲಕ್ಷ್ಮಿ ದೇವಿ ‘ಶಕ್ತಿದೇವತೆ’ ಆಗಿದ್ದು, ಬೇಡಿದ್ದನ್ನು ಕರುಣಿಸುವ ತಾಯಿ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಸರ್ವಧರ್ಮಿಯರೂ ಆಗಮಿಸಿ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಹೋಗುತ್ತಾರೆ. ಸಂತಾನವಿಲ್ಲದವರು ಉಡಿ ತುಂಬಿಸಿದ್ರೆ ಸಂತಾನ ಭಾಗ್ಯ, ಮದುವೆ ಆಗದವರು ಕಂಕಣ ಭಾಗ್ಯ ಪಡೆದುಕೊಳ್ಳುತ್ತಿದ್ದಾರೆ‌. ವರ್ಷದಿಂದ ವರ್ಷಕ್ಕೆ ‌ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದೇವಿಯ ಜಾತ್ರೆಯಿಂದ ರಾಜ್ಯದಲ್ಲಿ ‌ಜೇವರ್ಗಿ ಊರಿನ ಹೆಸರು ಪಸರಿಸುವಂತೆ ಮಾಡಿದೆ. ದೇವಾಲಯ ಟ್ರಸ್ಟ್ ಕಮಿಟಿಯೂ ಭಕ್ತರ ಬೇಡಿಕೆಗೆ ತಕ್ಕಂತೆ ಮೂಲಸೌಕರ್ಯ ಒದಗಿಸಿದೆ.

ಅ.18ರಂದು ನಡೆಯುವ ರಥೋತ್ಸವದಲ್ಲಿ ಭಂಡಾರದಲ್ಲಿ ಇಡೀ ಊರೇ ಮಿಂದೇಳುತ್ತದೆ. ಯಾವುದೇ ಕೋರಿಕೆ ಪೂರ್ಣಗೊಳ್ಳಲಿಲ್ಲವಾದರೆ ಒಮ್ಮೆ ಜೇವರ್ಗಿ ಮಹಾಲಕ್ಷ್ಮಿದೇವಿ ದೇವಾಲಯಕ್ಕೆ ಭೇಟಿ ನೀಡಿ. ಇಷ್ಟಾರ್ಥಗಳನ್ನು ವರ್ಷದೊಳಗೇ ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ.

ADVERTISEMENT

ಜಾತ್ರೆ ಸಂದರ್ಭದಲ್ಲಿ 6 ದಿನಗಳ ಕಾಲ ಉತ್ಸವ ಮೂರ್ತಿ ದರ್ಶನಕ್ಕೆ ಅವಕಾಶವಿರುತ್ತದೆ. ಎಲ್ಲಾ ಕಡೆ ರಥೋತ್ಸವ ಸಾಮಾನ್ಯವಾಗಿ ನೂರು, ಇನ್ನೂರು‌ ಅಡಿ ಪಾದಗಟ್ಟೆವರೆಗೆ ಸಾಗಿ ಮರಳಿ ದೇವಸ್ಥಾನಕ್ಕೆ ಬಂದು ತಲುಪುವುದು. ಆದರೆ, ಜೇವರ್ಗಿ ಮಹಾಲಕ್ಷ್ಮಿ ದೇವಿಯ ರಥೋತ್ಸವ ಕಿ.ಮೀ.ವರೆಗೆ ಸಾಗುವುದು. ಬೆಳಿಗ್ಗೆಯಿಂದ ಸಂಜೆವರೆಗೆ ದಾರಿಯುದ್ದಕ್ಕೂ ಸಹಸ್ರಾರು ಜನ ದೇವಿಯ ದರ್ಶನಕ್ಕಾಗಿ ಕಾಯ್ದು ಕುಳಿತು ರಥದ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸುತ್ತಾರೆ.

ಮಹಾಲಕ್ಷ್ಮಿ ದೇವಿ
ಮಹಾಲಕ್ಷ್ಮಿ ದೇವಸ್ಥಾನ ನಮ್ಮ ಊರಲ್ಲಿ ಇರುವುದು ಹೆಮ್ಮೆ. ದೇವಿಯ ಪವಾಡದಿಂದ ಗ್ರಾಮ ಸುಭಿಕ್ಷೆಯಿಂದ ಇದೆ. ಜಾತ್ರೆಯ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮಹಿಳೆಯರು ದೇವಿಗೆ ಹರಕೆ ಕಟ್ಟಿಕೊಳ್ಳುತ್ತಾರೆ
ರಾಜಶೇಖರ ಸಾಹು ಸೀರಿ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯ
ಜೇವರ್ಗಿ ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿ ಬೇರೆಡೆ ವರ್ಗವಾಗಿ ಹೋದವರು ಯಾರೂ ಮಹಾಲಕ್ಷ್ಮಿ ಜಾತ್ರೆಗೆ ಬರುವುದು ತಪ್ಪಿಸಲ್ಲ. ಸರ್ವ ಜನಾಂಗದವರು ನೈವೇದ್ಯ ಅರ್ಪಿಸಿ ದರ್ಶನ ಪಡೆಯುತ್ತಾರೆ
ಷಣ್ಮುಖಪ್ಪ ಸಾಹು ಗೋಗಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ
ಸರ್ವ ಜನಾಂಗದವರು ಸೇರಿ ಈ ಜಾತ್ರೆ ಮಾಡುವುದರಿಂದ ಬಹಳ ಅದ್ದೂರಿಯಾಗಿ ಜರುಗುತ್ತಿದೆ. ಕೋಮು-ಸೌಹಾರ್ದತೆ ಸಾರುವ ಈ ಜಾತ್ರೆಗೆ ಲಕ್ಷಾಂತರ ಜನ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ
ರಮೇಶ ಬಾಬು ವಕೀಲ ಟ್ರಸ್ಟ್ ಕಾರ್ಯದರ್ಶಿ

ಸರ್ವಜನಾಂಗದವರು ಭಾಗಿ

ವರ್ಷಕ್ಕೊಮ್ಮೆ ನಡೆಯುವ ಮಹಾಲಕ್ಷ್ಮಿ ಜಾತ್ರೆಯಲ್ಲಿ ಸರ್ವಜನಾಂಗದವರೂ ಪಾಲ್ಗೊಳ್ಳುತ್ತಾರೆ. ದಲಿತರು ಮರ ಕಡಿಯುತ್ತಾರೆ ವಿಶ್ವಕರ್ಮ ಜನಾಂಗದವರು ಮೂರ್ತಿ ಕೆತ್ತನೆ ಮಾಡಿ ಬಣ್ಣ ಲೇಪನ ಮಾಡುತ್ತಾರೆ. ದೇವಿಗೆ ವಸ್ತ್ರಗಳನ್ನು ಸಿಂಪಿಗ ಸಮಾಜದವರು ಸಿದ್ದಪಡಿಸಿದರೇ ಮಾತಂಗ ಸಮಾಜದವರು ದೇವಿಗೆ ಮೊದಲ ಉಡಿ ತುಂಬುತ್ತಾರೆ. ತಳವಾರ ಸಮಾಜದವರು ಚಿಕ್ಕರಥ ತಲೆ ಮೇಲೆ ಹೊತ್ತು ಸಾಗುತ್ತಾರೆ. ಕುರುಬ ಸಮಾಜದವರು ಹುಳಿ ಬಾನ ಪ್ರಸಾದ ಹಾಗೂ ಡೊಳ್ಳಿನ ಸೇವೆ ನೀಡುತ್ತಾರೆ. ವಾಲ್ಮೀಕಿ ಮಡಿವಾಳ ಲಿಂಗಾಯತ ಸೇರಿದಂತೆ ಹಲವು ಜನಾಂಗದವರ ಪಾಲ್ಗೊಳ್ಳುವಿಕೆ ಈ ಜಾತ್ರೆಯ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.