ADVERTISEMENT

ಜೇವರ್ಗಿ | ಮೈಕ್ರೊ ಫೈನಾನ್ಸ್ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 16:05 IST
Last Updated 26 ಏಪ್ರಿಲ್ 2025, 16:05 IST
ನಾಗೇಶ ರೂಗಿ
ನಾಗೇಶ ರೂಗಿ   

ಜೇವರ್ಗಿ (ಕಲಬುರಗಿ ಜಿಲ್ಲೆ): ಮೈಕ್ರೊ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಕಿರುಕುಳದಿಂದ ಬೇಸತ್ತು ತಾಲ್ಲೂಕಿನ ಯಾತನೂರ ಗ್ರಾಮದಲ್ಲಿ ಶನಿವಾರ ವ್ಯಕ್ತಿಯೊಬ್ಬ ಮನೆಯಲ್ಲೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಗೇಶ ರಾಮಣ್ಣ ರೂಗಿ (50) ಆತ್ಮಹತ್ಯೆ ಮಾಡಿಕೊಂಡವರು. ಕಲಬುರಗಿ ನಗರದ ಹಿಂದೂಜಾ ಹಣಕಾಸು ಸಂಸ್ಥೆಯಲ್ಲಿ ಒಟ್ಟು ₹ 5 ಲಕ್ಷ ಸಾಲ ಪಡೆದುಕೊಂಡಿದ್ದರು. ಅದರಲ್ಲಿ ₹ 3.5 ಲಕ್ಷ ಮರುಪಾವತಿ ಮಾಡಿದ್ದರು. ಉಳಿದ ₹ 1.5 ಲಕ್ಷ ಸಾಲದ ಹಣ ಕಟ್ಟುವಂತೆ ಹಿಂದೂಜಾ ಹಣಕಾಸು ಸಂಸ್ಥೆಯ ಸಿಬ್ಬಂದಿ ಯಾತನೂರ ಗ್ರಾಮದ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು. ಮನೆಯ ಗೋಡೆ ಮೇಲೆ ‘ಹಿಂದೂಜಾ ಫೈನಾನ್ಸ್‌ಗೆ ಅಡಮಾನ ಮಾಡಲಾಗಿದೆ’, ‘ಈ ಮನೆ ಮಾರಾಟಕ್ಕೆ ಇದೆ’ ಎಂದು ಫೈನಾನ್ಸ್ ಸಿಬ್ಬಂದಿ ಬರೆದಿದ್ದರು.

ಫೈನಾನ್ಸ್‌ ಸಿಬ್ಬಂದಿ ಕಿರುಕುಳ ನೀಡಿದ ಕಾರಣಕ್ಕೆ ಮನೆಯಲ್ಲಿ ನಿದ್ದೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾಗೇಶ ಪತ್ನಿ ಸುನಂದಾ ರೂಗಿ ನೆಲೋಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

‘ಫೈನಾನ್ಸ್‌ನ ಅಧಿಕಾರಿ ಹಾಗೂ ಸಿಬ್ಬಂದಿ ಪದೇ ಪದೇ ಮನೆಗೆ ಬಂದು ಸಾಲ ಮರು ಪಾವತಿಸುವಂತೆ ಕಿರುಕುಳ ನೀಡುತ್ತಿದ್ದರು. ಸಾಲ ಮರುಪಾವತಿಸದೇ ಇದ್ದರೆ ಮನೆಗೆ ಕೀಲಿ ಹಾಕುತ್ತೇವೆ ಎಂದು ಎಂದು ಮಾನಸಿಕ ಹಿಂಸೆ ಕೊಡುತ್ತಿದ್ದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ಯಾತನೂರು ಗ್ರಾಮದ ನಾಗೇಶ ರೂಗಿ ಮನೆಯ ಗೋಡೆಗೆ ಮನೆ ಮಾರಾಟಕ್ಕಿದೆ ಎಂದು ಬರೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.