
ಕಲಬುರಗಿ: ‘ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯರು ಜಿಲ್ಲಾಮಟ್ಟದ ಉದ್ಯೋಗ ಮೇಳದ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ಆಗ ಮಾತ್ರವೇ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಹೇಳಿದರು.
ಕಲಬುರಗಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಉದ್ಯೋಗ ಮೇಳದಲ್ಲಿ ರಾಜ್ಯದ ಮತ್ತು ಹೊರರಾಜ್ಯಗಳಿಂದ ಹಲವು ಉದ್ಯೋಗದಾತ ಕಂಪನಿಗಳು ಪಾಲ್ಗೊಂಡಿವೆ. ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ 12,961 ಮಂದಿ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೇಳದಲ್ಲಿ ಕೆಲಸ ಪಡೆಯುವಲ್ಲಿ ಹಿನ್ನಡೆ ಅನುಭಸಿದರೂ ಚಿಂತೆ ಬೇಡ. ಅವರಿಗೆ ಬೇರೆ–ಬೇರೆ ಸಂಸ್ಥೆಗಳ ಮೂಲಕ ಕೌಶಲ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ನಿರ್ದೇಶಕ ಜಗದೇವ ಬಿ., ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ನಾಗುಬಾಯಿ ದೊಡ್ಡಮನಿ ಮಾತನಾಡಿದರು.
ಎಸ್‌ಬಿಆರ್ ಸೆಟಿ ತರಬೇತಿ ಕೇಂದ್ರದ ನಿರ್ದೇಶಕ ನಂದಕಿಶೋರ ಮಳಖೇಡಕರ ಮಾತನಾಡಿ, ವಿವಿಧ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಅಧಿಕಾರಿಗಳಾದ ವಿಕಾಸ ಸಜ್ಜನ್, ಪವನಕುಮಾರ, ಜಾಧವ, ತಾ.ಪಂ ಇಒ ಎಂ.ಡಿ.ಸೈಯದ್ ಪಟೇಲ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಲೋಹಿತಕುಮಾರ ಸೇರಿದಂತೆ ಹಲವರು ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಹಾಗೂ ಕಲಬುರಗಿ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.
ಕೆಲಸ ಪಡೆಯುವಾಗ ಕೌಶಲಗಳ ಕೊರತೆ ಕಾಡಿದರೆ ಯುವಜನರು ಜಿಲ್ಲಾ ಕೌಶಲ ಇಲಾಖೆ ಕಚೇರಿ ಸಂಪರ್ಕಿಸಬೇಕು. ಅವರಿಗೆ ಅಗತ್ಯ ಕೌಶಲವೃದ್ಧಿಗೆ ಕ್ರಮವಹಿಸಲಾಗುವುದುನಾಗೂಬಾಯಿ ಜಿಲ್ಲಾ ಕೌಶಲ ಅಧಿಕಾರಿ
396 ಮಂದಿಗೆ ನೇಮಕಾತಿ ಪತ್ರ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ ಒಟ್ಟು 4822 ಅಭ್ಯರ್ಥಿಗಳು ಹಾಗೂ 32 ಕಂಪನಿಗಳು ಭಾಗವಹಿಸಿದ್ದವು. ಯಶಸ್ವಿಯಾಗಿ ಸಂದರ್ಶನ ಎದುರಿಸಿದ 396 ಮಂದಿಗೆ ವಿವಿಧ ಕಂಪನಿಗಳು ನೇಮಕಾತಿ ಪತ್ರ ವಿತರಿಸಿದವು. ಇನ್ನುಳಿದಂತೆ 610 ಅಭ್ಯರ್ಥಿಗಳು ವಿವಿಧ ಕಂಪನಿಗಳ 2ನೇ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಈ ಉದ್ಯೋಗ ಮೇಳದಲ್ಲಿ 26 ಅಂಗವಿಕಲರಿಗೆ ಸ್ಥಳದಲ್ಲಿಯೇ ಉದ್ಯೋಗ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.