ವಾಡಿ: ಭೀಕರ ನೆರೆಯು ಕಡಬೂರ, ಕೊಲ್ಲೂರು ಗ್ರಾಮಸ್ಥರ ದಸರಾ ಹಬ್ಬದ ಸಂಭ್ರಮ ಕಿತ್ತುಕೊಂಡಿದೆ. ಅತೀ ಹೆಚ್ಚು ಬಾಧಿತ ಕಡಬೂರ ಗ್ರಾಮದಲ್ಲಿ ನೆರೆಯು ಆರದಷ್ಟು ಗಾಯ ಮಾಡಿದ್ದು ಆರ್ಥಿಕ ಜಂಘಾಬಲವೇ ಕುಸಿಯುವಂತೆ ಮಾಡಿದೆ. ದೈನಂದಿನ ಅಗತ್ಯ ವಸ್ತುಗಳ ಜತೆಗೆ ಸ್ಥಳೀಯರ ಖುಷಿ ನದಿಯಲ್ಲಿ ಕೊಚ್ಚಿಹೋಗಿದೆ.
ಸೆ. 27ರಂದು ಗ್ರಾಮಕ್ಕೆ ಹೊಕ್ಕ ಭೀಮಾನದಿ ನೀರು ಇಡೀ ಗ್ರಾಮವನ್ನು ನೀರಲ್ಲಿ ಮುಳುಗಿಸಿತ್ತು. 80ಕ್ಕೂ ಅಧಿಕ ಮನೆಗಳು ಕಣ್ಣಿಗೆ ಗೋಚರಿಸದೆ ಮುಳುಗಿದ್ದು ದೋಣಿ ಮನೆಗಳ ಮೇಲೆ ಓಡಾಡಿತ್ತು. ದವಸಧಾನ್ಯಗಳು ಅಮೂಲ್ಯ ಕಾಗದಪತ್ರಗಳು ಎಲ್ಲವೂ ನೀರಲ್ಲಿ ಹೋಮವಾಗಿತ್ತು. ಗ್ರಾಮಸ್ಥರನ್ನು ಒಟ್ಟ ಬಟ್ಟೆಯಲ್ಲೇ ಮನೆತೊರೆದು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿತ್ತು.
ಮಕ್ಕಳಿಗೆ ಹೊಸಬಟ್ಟೆ ತೊಡಿಸಿ ಬನ್ನಿ ಮುಡಿದು ಪರಸ್ಪರ ಶುಭಾಶಯ ಕೋರುತ್ತಾ ಸಂಭ್ರಮಿಸಬೇಕಿದ್ದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಹಿಂದೆಂದೂ ಕಂಡು ಕೇಳರಿಯದ ಭೀಕರ ಪ್ರವಾಹ ಹೊಕ್ಕ ಪರಿಣಾಮ ಸ್ವಚ್ಛತೆ ಸವಾಲಾಗಿದೆ. ಮನೆಗಳಲ್ಲಿ ದುರ್ಗಂಧ ಆವರಿಸಿದ್ದು ಹಾವುಚೇಳುಗಳೊಂದಿಗೆ ಬದುಕು ದೂಡಬೇಕಾದ ಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಹಬ್ಬದ ಮಾತೆಲ್ಲಿ ಎನ್ನುತ್ತಾರೆ ಸ್ಥಳೀಯರಾದ ಶರಣಮ್ಮ, ರಾಜಪ್ಪ ಹೆರೂರು, ಲಕ್ಷ್ಮೀಬಾಯಿ ತಳವಾರ, ಹಾಜಿಸಾಬ್, ಸಿದ್ದಮ್ಮ, ಈಶ್ವರಿ.
ವಾಡಿ ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕಾಳಜಿ ಕೇಂದ್ರದಲ್ಲಿದ್ದ 150 ಜನರನ್ನು ಬುಧವಾರ ತಾಲ್ಲೂಕು ಆಡಳಿತ ಅಗತ್ಯ ವಸ್ತುಗಳುಳ್ಳ ಕಿಟ್ ಕೊಟ್ಟು ಮನೆಗೆ ಕಳುಹಿಸಿಕೊಟ್ಟಿದೆ.
ಕಾಳಜಿ ಕೇಂದ್ರದಲ್ಲಿ ವಿಶೇಷ ಭೋಜನ
ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರ ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ದಸರಾ ಪ್ರಯುಕ್ತ ಸಜ್ಜಕ, ತುಪ್ಪದ ಊಟದ ವ್ಯವಸ್ಥೆ ಮಾಡಲಾಗಿತ್ತು.
‘ಭೀಮಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ದೇವಲ ಗಾಣಗಾಪುರ ಯಾತ್ರಿ ನಿವಾಸದಲ್ಲಿ 15 ದಿನಗಳಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಒಟ್ಟು 420 ಜನ ನಿರಾಶ್ರಿತರಿದ್ದಾರೆ. ಹಬ್ಬದ ಪ್ರಯುಕ್ತ ಸಜ್ಜುಕ, ತುಪ್ಪ ಚಪಾತಿ ಸೇರಿ ಇತರೆ ಕಾಯಿಪಲ್ಲೆ ಹಾಗೂ ವಿಶೇಷ ಭೋಜನ ಆಯೋಜನೆ ಮಾಡಿಲಾಗಿದೆ’ ಎಂದು ನಿರಾಶ್ರಿತ ಕೇಂದ್ರದ ವ್ಯವಸ್ಥಾಪಕ ಪಾಂಡುರಂಗ ರಾವ್ ಮಾಹಿತಿ ನೀಡಿದರು.
ಕಾಳಜಿ ಕೇಂದ್ರಕ್ಕೆ ಗ್ರಾಮದ ಕೆಲವು ದಾನಿಗಳು ತಿಂಡಿ ಊಟ ನೀಡುತ್ತಿದ್ದಾರೆ. ಮಣ್ಣೂರು ಕಾಳಜಿ ಕೇಂದ್ರಕ್ಕೆ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು ಒಂದು ದಿನದ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಗ್ರೇಡ್–2 ತಹಶೀಲ್ದಾರ್ ಶರಣಬಸಪ್ಪ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.