ADVERTISEMENT

ಕಲಬುರಗಿ: ನದಿಯಲ್ಲೇ 3 ಕಿ.ಮೀ. ಕಚ್ಚಾ ರಸ್ತೆ ನಿರ್ಮಾಣ

ಕಾಗಿಣಾ ನದಿ ಪಾತ್ರ, ಪಟ್ಟಾ ಜಮೀನುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ: ವರದಿ ಸಲ್ಲಿಸಿದ ತನಿಖಾ ತಂಡ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 4:51 IST
Last Updated 24 ಜೂನ್ 2025, 4:51 IST
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಸಮೀಪದ ಕಾಗಿಣಾ ನದಿಯಲ್ಲಿ ಮರಳು ಗಣಿಗಾರಿಕೆಗಾಗಿ ನಿರ್ಮಿಸಲಾದ ಕಚ್ಚಾ ರಸ್ತೆ
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಸಮೀಪದ ಕಾಗಿಣಾ ನದಿಯಲ್ಲಿ ಮರಳು ಗಣಿಗಾರಿಕೆಗಾಗಿ ನಿರ್ಮಿಸಲಾದ ಕಚ್ಚಾ ರಸ್ತೆ   

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಸಮೀಪದ ಕಾಗಿಣಾ ನದಿ ಪಾತ್ರ ಹಾಗೂ ಪಟ್ಟಾ ಜಮೀನುಗಳಲ್ಲಿ ನಿಯಮ ಬಾಹಿರವಾಗಿ ಅನಧಿಕೃತ ಮರಳು ಗಣಿಗಾರಿಕೆ ಮಾಡಿ, ಅದನ್ನು ಸಾಗಣೆ ಮಾಡಿದ ಪ್ರಕರಣದ ತನಿಖಾ ವರದಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿದೆ.

ಅಕ್ರಮ ಗಣಿಗಾರಿಕೆ ಆರೋಪದಡಿ ಜಿಲ್ಲಾ ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಹಾಗೂ ಎಂ.ಕೆ. ಮಾಲಿ ಪಾಟೀಲ ದೂರು ಸಲ್ಲಿಸಿದ್ದರು. ಗಣಿ ಇಲಾಖೆಯ ಆರು ಜನ ಅಧಿಕಾರಿಗಳಿದ್ದ ತನಿಖಾ ತಂಡವು ಮೇ 16ರಿಂದ 18ರ ವರೆಗೆ ಗಣಿಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಕೆಆರ್‌ಐಡಿಎಲ್‌ ಸಂಸ್ಥೆಗೆ ಮಂಜೂರಾದ ನದಿ ಪಾತ್ರದ ಮರಳು ಗಣಿ ಪ್ರದೇಶ ಹಾಗೂ ಭಾಗೋಡಿ, ದಂಡೋತಿ, ಕಾಟಮದೇವರಹಳ್ಳಿ ಮತ್ತು ಕುಂದನೂರು ಗ್ರಾಮಗಳ ವ್ಯಾಪ್ತಿಯಲ್ಲಿನ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಯ ಪರವಾನಗಿ ಪಡೆದವರ ಸ್ಥಳವನ್ನೂ ಪರಿಶೀಲಿಸಿದೆ.

ADVERTISEMENT

ಸ್ಥಳ ಮಹಜರ್, ಛಾಯಾಚಿತ್ರಗಳು ಹಾಗೂ ತಂಡದ ಅಭಿಪ್ರಾಯಗಳೊಂದಿಗೆ ವಿವರವಾದ ವರದಿಯನ್ನು ಸಿದ್ಧಪಡಿಸಿದ್ದು, ಕೆಲವೊಂದು ಸೂಚನೆಗಳನ್ನು ಸಹ ನೀಡಿದೆ. ಗಣಿಗಾರಿಕೆಯ ನಕ್ಷೆ, ಗೂಗಲ್ ಚಿತ್ರಗಳನ್ನು ಸಹ ವರದಿಯಲ್ಲಿ ಲಗತ್ತಿಸಿದೆ. ಗಣಿ ಇಲಾಖೆಯ ಬಳ್ಳಾರಿ ಉತ್ತರ ವಲಯದ ಹೆಚ್ಚುವರಿ ನಿರ್ದೇಶಕರು ಇಲಾಖೆಯ ನಿರ್ದೇಶಕರಿಗೆ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ.

ಭಾಗೋಡಿ ಸಮೀಪ ಕಾಗಿಣಾ ನದಿ ಪಾತ್ರದ 40 ಎಕರೆ ಪ್ರದೇಶದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಮರಳು ಒದಗಿಸುವಂತೆ ಕೆಆರ್‌ಐಡಿಎಲ್‌ ಸಂಸ್ಥೆಗೆ 2021ರ ಏಪ್ರಿಲ್‌ನಿಂದ ಮುಂದಿನ 5 ವರ್ಷಗಳ ಅವಧಿಗೆ ಗುತ್ತಿಗೆ (ಗುತ್ತಿಗೆ ಸಂಖ್ಯೆ ಒಎಸ್‌–11) ನೀಡಲಾಗಿತ್ತು. ಮೂರು ಸ್ಟಾಕ್ ಯಾರ್ಡ್‌ ಪ್ರದೇಶಗಳಲ್ಲಿ ಅಂದಾಜು 98,030 ಮೆಟ್ರಿಕ್ ಟನ್‌ ಮರಳು ದಾಸ್ತಾನು ಮಾಡಲಾಗಿದ್ದು, ಸ್ಟಾಕ್ ಯಾರ್ಡ್‌ ಒಳಗೆ ಪ್ರವೇಶಿಸದಂತೆ ಬೀಗ ಸಹ ಹಾಕಲಾಗಿದೆ ಎಂದು ಉಲ್ಲೇಖಿಸಿದೆ.

ಸ್ಟಾಕ್ ಯಾರ್ಡ್‌ನಿಂದ ಮರಳು ಬ್ಲಾಕ್‌ವರೆಗೆ ನದಿ ಪಾತ್ರ ಒಳಗಡೆಯೇ 3 ಕಿ.ಮೀ. ಕಚ್ಚಾ ರಸ್ತೆ ನಿರ್ಮಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಕಚ್ಚಾ ರಸ್ತೆಯಲ್ಲಿ ಯಾವುದೇ ಚಲನ–ವಲನ ಆಗದಂತೆ ಅಲ್ಲಲ್ಲಿ ಕಂದಕಗಳನ್ನು ನಿರ್ಮಿಸಿದ್ದು ಕಂಡುಬಂದಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚದುರಿದಂತೆ ಮರಳು ಗಣಿಗಾರಿಕೆ ನಡೆಸಿರುವ ಗುಂಡಿಗಳು ಹಾಗೂ ಕಪ್ಪು ಮಣ್ಣಿನ ರಾಶಿಗಳಿವೆ. ಮರಳು ಗಣಿಗಾರಿಕೆ ನಡೆದಿರುವ ನದಿ ಪಾತ್ರದಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವುದು ಕಂಡುಬಂದಿದೆ ಎಂದು ಹೇಳಿದೆ.

ತನಿಖಾ ತಂಡದಿಂದ ಮೂರು ದಿನ ಸ್ಥಳ ಪರಿಶೀಲನೆ ಸ್ಟಾಕ್ ಯಾರ್ಡ್‌; 98,030 ಮೆಟ್ರಿಕ್ ಟನ್‌ ಮರಳು ದಾಸ್ತಾನು ಮಾನವಶಕ್ತಿಯಿಂದ ಅಂದಾಜಿಸಲು ಅಗದಷ್ಟು ಮರಳು ತೆಗೆದ ಕೆಆರ್‌ಐಡಿಎಲ್‌
ಗಣಿ ಇಲಾಖೆಯ ತಜ್ಞರ ವರದಿಯನ್ನು ಆಧರಿಸಿ ಸರ್ವೆ ಕಾರ್ಯ ಆರಂಭಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸ್ಟಾಕ್ ಯಾರ್ಡ್‌ ಹೊರ ತೆಗೆದ ಮರಳಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಅಂದಾಜಿಸಬೇಕು
ಅವ್ವಣ್ಣ ಮ್ಯಾಕೇರಿ ಅಕ್ರಮ ಗಣಿಗಾರಿಕೆಯ ದೂರುದಾರ

ವೈಜ್ಞಾನಿಕ ವಿಧಾನದಿಂದ ಸರ್ವೆಗೆ ಶಿಫಾರಸು

ಕೆಆರ್‌ಐಡಿಎಲ್‌ ಸಂಸ್ಥೆ ನಡೆಸಿದ ಮರಳು ಗಣಿಗಾರಿಕೆ ಪ್ರದೇಶವು ಅತಿ ಹೆಚ್ಚು ವಿಸ್ತೀರ್ಣವಾಗಿದ್ದು ಹೊರ ತೆಗೆಯಲಾದ ಮರಳಿನ ಪ್ರಮಾಣವು ಮಾನವಶಕ್ತಿಯಿಂದ ಅಂದಾಜಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅತ್ಯಾಧುನಿಕ ವೈಜ್ಞಾನಿಕ ವಿಧಾನದಿಂದ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ತನಿಖೆ ತಂಡ ಶಿಫಾರಸು ಮಾಡಿದೆ. ನದಿ ಪಾತ್ರದಲ್ಲಿ ನೀರು ಹರಿಯುತ್ತಿದೆ. ಭೌತಿಕವಾಗಿ ಸಂಚರಿಸಲು ಆಗದಷ್ಟು ರೀತಿಯಲ್ಲಿ ಅಡೆ–ತಡೆಗಳಿವೆ. ಗಣಿಗಾರಿಕೆಯಿಂದ ನದಿ ಪಾತ್ರದಲ್ಲಿ ನಿರ್ಮಾಣವಾಗಿರುವ ಗುಂಡಿಗಳ ಆಳ ಮತ್ತು ಮರಳಿನ ಪ್ರಮಾಣವನ್ನು ಅಂದಾಜಿಸಲು ಆಗುತ್ತಿಲ್ಲ. ಅನಧಿಕೃತವಾಗಿ ನಡೆದ ಪ್ರದೇಶದ ವಿಸ್ತೀರ್ಣ ಮತ್ತು ಹೊರತೆಗೆದ ಮರಳಿನ ಪ್ರಮಾಣವನ್ನು ಜಿಲ್ಲಾ ಮರಳು ಸಮಿತಿಯಲ್ಲಿ ಚರ್ಚಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ದೂರುದಾರರೊಂದಿಗೆ ಜಂಟಿಯಾಗಿ ಟೋಟಲ್ ಸ್ಟೇಷನ್/ ಡ್ರೋನ್ ಮತ್ತು ಡಿಜಿಪಿಎಸ್‌ ಉಪಕರಣ ಅಥವಾ ಇತರೆ ಅತ್ಯಾಧುನಿಕ ವಿಧಾನದ ಮೂಲಕ ಸರ್ವೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.