ಅಫಜಲಪುರ ತಾಲ್ಲೂಕಿನ ಭೋಸಗಾ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಲಕ್ಷ್ಮಿಬಾಯಿ ಬಿರಾದಾರ ಎಂಬುವರು ಅಸುನೀಗಿದ್ದಾರೆ
ಅಫಜಲಪುರ (ಕಲಬುರಗಿ): ತಾಲ್ಲೂಕಿನಲ್ಲಿ ಮಳೆ ಮುಂದುವರಿದಿದ್ದು, ಭೋಸಗಾ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 6.30ರ ಹೊತ್ತಿಗೆ ಮನೆಯ ಗೋಡೆ ಕುಸಿದು ಲಕ್ಷ್ಮಿಬಾಯಿ ಬಿರಾದಾರ (55) ಎಂಬುವರು ಮೃತಪಟ್ಟಿದ್ದಾರೆ.
ನಿರಂತರವಾಗಿ ಕಳೆದು ಒಂದು ವಾರದಿಂದ ತಾಲ್ಲೂಕಿನಲ್ಲಿ ಕೆಲವೆಡೆ ಧಾರಾಕಾರ ಹಾಗೂ ಜಿಟಿಜಿಟಿ ಮಳೆಯಾಗುತ್ತಿದೆ. ಈಗಾಗಲೇ 50 ಮನೆಗಳ ಗೋಡೆಗಳು ಮಳೆ ನೀರಲ್ಲಿ ನೆನೆದು ಬಿದ್ದಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ತಹಶೀಲ್ದಾರ್ ಸಂಜುಕುಮಾರ್ ದಾಸರ್, 'ತಾಲ್ಲೂಕಿನ ಭೋಸಗಾ ಗ್ರಾಮದಲ್ಲಿ ಬೆಳಗಿನ ಜಾವ ಗೋಡೆ ಕುಸಿದು ಲಕ್ಷ್ಮಿಬಾಯಿ ಬಿರಾದಾರ(55) ಮಹಿಳೆ ಒಬ್ಬಳು ಮೃತಪಟ್ಟಿದ್ದಾಳೆ. ತಾಲ್ಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಣ್ಣಿನ ಗೋಡೆಗಳು ನೆನೆದು ಕುಸಿದು ಬೀಳುತ್ತಿವೆ. ಜನರು ಎಚ್ಚರಿಕೆಯಿಂದ ಇರಬೇಕು. ಮಳೆ ಬೀಳುವಂಥ ಶಿಥಿಲ ಮನೆಗಳು, ಮಣ್ಣಿನ ಮನೆಗಳಲ್ಲಿ ಜನರು ವಾಸ ಮಾಡಬಾರದು ಎಂದು ಸಲಹೆ ನೀಡಿದರು.
'ವಿಷಯ ತಿಳಿದ ತಕ್ಷಣ ನಾನು ತಾಲೂಕಿನ ಭೋಸಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳದಲ್ಲಿ ಇದ್ದು, ಪಂಚನಾಮೆ ಮಾಡುತ್ತಿದ್ದಾರೆ. ನಂತರ ಅವರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು' ಎಂದರು.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಇನ್ನೂ ಆಗಸ್ಟ್ 21ರವರೆಗೆ ಮಳೆ ಬರುವ ಮುನ್ಸೂಚನೆ ಇದೆ ಎಂದು ಅವರು ತಿಳಿಸಿದರು.
ಬೀದರ್ ಜಿಲ್ಲೆಯ ಔರಾದ್ ಹಾಗೂ ಹುಲಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ ನಾಲ್ಕು, ಕಮಲನಗರ ತಾಲ್ಲೂಕಿನಲ್ಲಿ ಒಂದು ಮನೆಗೆ ಹಾನಿಯಾಗಿದೆ.
ಮಹಾರಾಷ್ಟ್ರದಿಂದ ಮುನ್ಸೂಚನೆ ಇಲ್ಲದೆ ನೀರು ಹರಿಸಿರುವ ಕಾರಣ ಮಾಂಜ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ಹುಲಸೂರ ತಾಲ್ಲೂಕಿನ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಬಸನಾಳ–ಕೋರಿಯಾಳ ಮಧ್ಯದ ಸೇತುವೆ ಮೂಲಕ ಸಂಪರ್ಕ ಕಡಿತಗೊಂಡಿತ್ತು.
ಕೊಡಗು ಜಿಲ್ಲೆಯ ಹಲವೆಡೆ ಶನಿವಾರವೂ ಭಾರಿ ಮಳೆ ಮುಂದುವರಿದಿದೆ. ಮಡಿಕೇರಿ ನಗರ ಸೇರಿ ತಾಲ್ಲೂಕಿನಾದ್ಯಂತ ಬಿರುಸಿನ ಮಳೆಯಾಗಿದೆ. ಸಂಪಾಜೆಯಲ್ಲಿ 11 ಸೆಂ.ಮೀ, ಶಾಂತಳ್ಳಿಯಲ್ಲಿ 10, ಮಡಿಕೇರಿ 7, ವಿರಾಜಪೇಟೆ, ಸೋಮವಾರಪೇಟೆ, ಶನಿವಾರಸಂತೆಯಲ್ಲಿ ತಲಾ 4 ಸೆಂ.ಮೀನಷ್ಟು ಮಳೆಯಾಗಿದೆ.
ಹಾಸನ: ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ನಡುವೆ ಮೂರು ಕಡೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಕೆಲಕಾಲ ರೈಲು ಸಂಚಾರ ಸ್ಥಗಿತವಾಗಿತ್ತು.
‘ಮಂಗಳೂರಿನಿಂದ ಹೊರಟಿದ್ದ ಮಂಗಳೂರು–ವಿಜಯಪುರ (ರೈ.ಸಂ. 07378) ರೈಲನ್ನು ಬಂಟ್ವಾಳದಲ್ಲಿ ನಿಲುಗಡೆ ಮಾಡಲಾಗಿತ್ತು. ಎಲ್ಲ ಕಡೆ ಮಣ್ಣು ತೆರವುಗೊಳಿಸಲಾಗಿದ್ದು, ಶೀಘ್ರವೇ ರೈಲು ಸಂಚಾರ ಆರಂಭವಾಗಲಿದೆ’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿರಾಡಿ ಘಾಟ್ ಮಾರ್ಗದಲ್ಲೂ ಗುಡ್ಡ ಕುಸಿದು, ಸಂಚಾರ ಬಂದ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.