
ಕಲಬುರಗಿ: ಆಳಂದ ತಾಲ್ಲೂಕಿನ ಜಂಬಗಾ, ಜವಳಗಾ, ಹೊದಲೂರು, ಖಜೂರಿ ಗ್ರಾಮದ ಐದು ಕಡೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ₹ 10.35 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಅಡ್ಡೂರು ಶ್ರೀನಿವಾಸುಲು, ‘ಪ್ರಕರಣ ಸಂಬಂಧ ಕಮಸೂರು ನಾಯಕ ತಾಂಡಾದ ಪ್ರಭು ಗಂಗಾರಾಮ ಚವ್ಹಾಣ್ ಹಾಗೂ ಗಂಗಾಜಿ ಅಲಿಯಾಸ ಮೇಘನಾಥ ಈರಪ್ಪ ಪವಾರ ಎಂಬುವವರನ್ನು ಬಂಧಿಸಲಾಗಿದೆ. ಕಳೆದ ಅಕ್ಟೋಬರ್ 29ರಂದು ರಾತ್ರಿ ಸಮಯದಲ್ಲಿ ಜಂಬಗಾ (ಆರ್) ಗ್ರಾಮದ ವಿಕ್ರಮ ಪಾಟೀಲ ಎಂಬುವವರ ಮನೆಯ ಬೀಗವನ್ನು ಮುರಿದು ನಾಲ್ಕು ತೊಲೆ ಬಂಗಾರ, ಒಂದೂವರೆ ತೊಲೆ ಬೆಳ್ಳಿ ಹಾಗೂ ಇತರೆ ಸಾಮಾನು ಸೇರಿದಂತೆ
₹ 6.50 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆಗೆ ತಂಡಗಳನ್ನು ರಚಿಸಿದ್ದರು. ಡಿವೈಎಸ್ಪಿ ತಮ್ಮಾರಾಯ ಪಾಟೀಲ, ಆಳಂದ ಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‌ಐ (ತನಿಖೆ) ಸಂಜೀವರೆಡ್ಡಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಖಜೂರಿ ಗ್ರಾಮದ ಸರಹದ್ದಿನಲ್ಲಿ ಬುಧವಾರ ಮಿಂಚಿನ ದಾಳಿ ನಡೆಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆಯಿತು’ ಎಂದರು.
ವಿಚಾರಣೆ ವೇಳೆ ಜವಳಗಾ, ಹೊದಲೂರು, ಖಜೂರು ಗ್ರಾಮದ ಮನೆಗಳು ಹಾಗೂ ಖಜೂರಿಯ ವೈನ್‌ಶಾಪ್‌ನಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 70 ಗ್ರಾಂ ಚಿನ್ನ, 40 ಗ್ರಾಂ ಬೆಳ್ಳಿ ₹ 25 ಸಾವಿರ ನಗದು ಸೇರಿದಂತೆ ಐದು ಪ್ರಕರಣಗಳಲ್ಲಿ ₹ 10.35 ಲಕ್ಷ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ, ಡಿವೈಎಸ್ಪಿ ತಮ್ಮಾರಾಯ ಪಾಟೀಲ, ಆಳಂದ ಪೊಲೀಸ್ ಇನ್‌ಸ್ಪೆಕ್ಟರ್ ಶರಣಬಸಪ್ಪ ಕೋಡ್ಲಾ, ಪಿಎಸ್‌ಐ ಸವಿತಾ ಇದ್ದರು.
ಪೊಲೀಸ್ ಅಧಿಕಾರಿಗಳೊಂದಿಗೆ ಎಎಸ್‌ಐ ಯಲ್ಲಪ್ಪ, ಸಿಬ್ಬಂದಿಯಾದ ಚಂದ್ರಕಾಂತ, ಮಂಜುನಾಥ, ಹುಲಿಕಂಠರಾಯ, ಮಾಳಪ್ಪ, ಖಾಸಿಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆಳಂದ ತಾಲ್ಲೂಕಿನ ಕೆರೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿದ್ದ ₹ 90 ಸಾವಿರ ಕಾಣಿಕೆ ಹಣವನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಮಾದನ ಹಿಪ್ಪರಗಿ ಗ್ರಾಮದ ಬಳಿ ಬಂಧಿಸಲಾಗಿದೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಮಾಹಿತಿ ನೀಡಿದರು. ಕಳೆದ ವರ್ಷದ ಏಪ್ರಿಲ್ 27ರಂದು ರಾತ್ರಿ ಸಮಯದಲ್ಲಿ ದೇವಸ್ಥಾನದ ಹುಂಡಿಯನ್ನು ಕದ್ದಿದ್ದರು. ಈ ಬಗ್ಗೆ ಮಾದನ ಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೆ ನವೆಂಬರ್ 4ರಂದು ಕಳ್ಳತನದ ಯತ್ನ ನಡೆದಿತ್ತಾದರೂ ಯಾವುದೇ ಸ್ವತ್ತುಗಳ ಕಳುವಾಗಿರಲಿಲ್ಲ. ಡಿಸೆಂಬರ್ 27ರಂದು ಪೊಲೀಸರು ಆರೋಪಿಗಳಾದ ಕೆರೂರ ಗ್ರಾಮದ ವೀರೇಶ ಪರಮೇಶ್ವರ ಬ್ಯಾಗಳಿ ಗಣಪತಿ ಉದ್ದನಶೆಟ್ಟಿ ಲಾಡಪ್ಪ ಶರಣಪ್ಪ ಚನಗೊಂಡ ಹಾಗೂ ಅನಿಲಕುಮಾರ್ ಶ್ರೀಶೈಲ ಕೊಂಕಾಟೆ ಎಂಬುವವರನ್ನು ಬಂಧಿಸಿ ಅವರಿಂದ ₹ 31200 ನಗದು ಜಪ್ತಿ ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.