ADVERTISEMENT

ಅ.13ರಂದು ಕಲಬುರಗಿ ಬಂದ್‌: ಹಲವು ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 3:13 IST
Last Updated 12 ಅಕ್ಟೋಬರ್ 2025, 3:13 IST
ಕಲಬುರಗಿ ಬಂದ್‌ ಕುರಿತು ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾತನಾಡಿದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ರೈತ ಮುಖಂಡರು ಭಾಗವಹಿಸಿದ್ದರು
ಕಲಬುರಗಿ ಬಂದ್‌ ಕುರಿತು ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾತನಾಡಿದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ರೈತ ಮುಖಂಡರು ಭಾಗವಹಿಸಿದ್ದರು   

ಕಲಬುರಗಿ: ಇತ್ತೀಚೆಗೆ ಸುರಿದ ಮಳೆ ಹಾಗೂ ಭಾರಿ ಪ್ರವಾಹದಿಂದಾಗಿ ಬೆಳೆ ನಾಶವಾಗಿದ್ದರಿಂದ ಸರ್ಕಾರ ಹಸಿ ಬರ ಎಂದು ಘೋಷಿಸಿ ರೈತರಿಗೆ ನಷ್ಟ ಪರಿಹಾರ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇದೇ 13ರಂದು ರೈತ, ದಲಿತ, ಕನ್ನಡ, ಮಹಿಳಾ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿರುವ ಬಂದ್‌ಗೆ ಕೆಕೆಸಿಸಿಐ ಸೇರಿದಂತೆ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. 

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ವ್ಯಾಪಾರಸ್ಥರ ಸಂಘಟನೆಗಳ ಸಭೆಯಲ್ಲಿ ಶಾಂತಿಯುತವಾಗಿ ನಡೆಯಲಿರುವ ಬಂದ್‌ ಬೆಂಬಲಿಸಲು ತೀರ್ಮಾನಿಸಿ ಠರಾವು ಪಾಸ್ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ತಿಳಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ವರ್ಷಗಳಲ್ಲಿ ಸುರಿದ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದಾಗಿ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ವಿಶೇಷ ಪ್ರಕರಣವೆಂದು ಭಾವಿಸಿ ರೈತರಿಗೆ ವಿಳಂಬ ಮಾಡದೇ ತುರ್ತು ಪರಿಹಾರ ಮಂಜೂರು ಮಾಡಬೇಕು. ರೈತರ ಶೇ 90ರಷ್ಟು ಬೆಳೆ ನಷ್ಟವಾಗಿದ್ದು, ಸಾಲ ಮಾಡಿಕೊಂಡಿರುವ ರೈತರ ಪರಿಸ್ಥಿತಿ ದಯನೀಯವಾಗಿದೆ. ಹಾಗಾಗಿ, ಸಾಲ ಮನ್ನಾ ಮಾಡುವುದರ ಜೊತೆಗೆ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರವನ್ನು ಸರ್ಕಾರವೇ ಉಚಿತವಾಗಿ ಪೂರೈಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಭೆಯಲ್ಲಿ ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ, ದಾಲ್ ಮಿಲ್ ಅಸೋಸಿಯೇಷನ್, ಕೀಟನಾಶಕ ವರ್ತಕರ ಸಂಘ, ಕಿರಾಣಾ ಮರ್ಚಂಟ್ ಅಸೋಸಿಯೇಷನ್, ಆಟೊಮೊಬೈಲ್ ಡೀಲರ್ಸ್ ಅಸೋಸಿಯೇಷನ್, ಸರಾಫ್ ಬಜಾರ್, ಕಪಡಾ ಬಜಾರ್ ಸಂಘ, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ ವಿ. ಇಂಗಿನಶೆಟ್ಟಿ, ಕೆಕೆಸಿಸಿಐ ಒಕ್ಕಲುತನ ಉಪಸಮಿತಿಯ ಅಧ್ಯಕ್ಷ ಜಗದೀಶ ಬಿ. ಗಾಜರೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ದಯಾನಂದ ಪಾಟೀಲ, ಭೀಮಾಶಂಕರ ಮಾಡಿಯಾಳ ಇತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.