ಕಲಬುರಗಿ: ‘ಹಸಿ ಬರಗಾಲ ಘೋಷಣೆ, ಎನ್‌ಡಿಆರ್‌ಎಫ್‌ನಡಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡುವುದು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ
ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಕಲಬುರಗಿ ಬಂದ್‌ಗೆ ಕರೆ ನೀಡಲಾಗಿದೆ.
ಈ ಬಂದ್‌ಗೆ ಕೆಕೆಸಿಸಿಐ, ರೈತಪರ, ದಲಿತ ಪರ, ಕನ್ನಡಪರ, ಕಾರ್ಮಿಕ ಪರ, ಮಹಿಳಾ ಪರ ಸೇರಿದಂತೆ ವಿವಿಧ 30 ಸಂಘಟನೆಗಳು–ಸಂಸ್ಥೆಗಳು ಬೆಂಬಲ ನೀಡಿವೆ.
‘ಕಲಬುರಗಿ ಬಂದ್ ಬೆಳಿಗ್ಗೆ 5.30ರಿಂದ ಆರಂಭವಾಗಲಿದೆ. ಕೇಂದ್ರ ಬಸ್ ನಿಲ್ದಾಣ, ಹುಮನಾಬಾದ್ ರಿಂಗ್ ರಸ್ತೆ, ಖರ್ಗೆ ಪೆಟ್ರೋಲ್ ಬಂಕ್ ಸಮೀಪದ ರಿಂಗ್ ರಸ್ತೆ, ಶಹಾಬಾದ್ ರಿಂಗ್ ರಸ್ತೆ, ರಾಮಮಂದಿರ ರಿಂಗ್ ರಸ್ತೆ ಹಾಗೂ ಆಳಂದ ಚೆಕ್ ಪೋಸ್ಟ್‌ನಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದು ಮುಖಂಡರು ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾತ್ಮ ಗಾಂಧಿ ಜಯಂತಿ ದಿನವಾದ ಅ.2ರಂದು ಕಲಬುರಗಿ ಪಾಲಿಕೆ ಉದ್ಯಾನ ಆವರಣದ ಗಾಂಧಿ ಪುತ್ಥಳಿ ಎದುರು ಧರಣಿ ಆರಂಭಿಸಲಾಗಿತ್ತು. ಬಳಿಕ ಅಹೋರಾತ್ರಿ ಧರಣಿಯನ್ನು ಜಗತ್ ವೃತ್ತಕ್ಕೆ ಸ್ಥಳಾಂತರಿಸಲಾಗಿತ್ತು.
ಶಾಸಕ ಅಲ್ಲಮಪ್ರಭು ಭೇಟಿ: ಇದೇ 13ರಂದು ಕಲಬುರಗಿ ಬಂದ್ ಕರೆ ನೀಡಿರುವ ಪ್ರಯುಕ್ತ ರೈತರ ಅಹವಾಲುಗಳನ್ನು ಆಲಿಸಲು ಶಾಸಕ ಅಲ್ಲಮಪ್ರಭು ಪಾಟೀಲ ಜಗತ್ ವೃತ್ತದಲ್ಲಿನ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ರೈತ, ದಲಿತ, ಕನ್ನಡ, ಕಾರ್ಮಿಕ, ಮಹಿಳಾಪರ ಒಕ್ಕೂಟವಾದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿರುವ ಬಂದ್‌ಗೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೈನ್ಯ, ನವ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ ಬಣ), ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ಜನವಾದಿ ಮಹಿಳಾ ಸಂಘಟನೆ, ಅಖಿಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್), ಬೇಕರಿ ಮತ್ತು ವಸತಿಗೃಹ ಮಾಲೀಕರ ಸಂಘ, ದಾಲ್ ಮಿಲ್ ಅಸೋಸಿಯೇಷನ್, ಕೀಟನಾಶಕ ವರ್ತಕರ ಸಂಘ, ಕಿರಾಣಾ ಮರ್ಚಂಟ್ ಅಸೋಸಿಯೇಷನ್, ಆಟೊಮೊಬೈಲ್ ಡೀಲರ್ಸ್ ಅಸೋಸಿಯೇಷನ್, ಸರಾಫ್ ಬಜಾರ್, ಕಪಡಾ ಬಜಾರ್ ಸಂಘ, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.
ಕಲಬುರಗಿ ಬಂದ್‌ಗೆ ಸಿಪಿಐ ಬೆಂಬಲ
ಕಲಬುರಗಿ: ‘ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತ ದಲಿತ ಕಾರ್ಮಿಕ ವಿದ್ಯಾರ್ಥಿ–ಯುವಕರ ಮತ್ತು ಮಹಿಳಾ ಸಂಘಟನೆಗಳನ್ನೊಳಗೊಂಡ ಸಮಿತಿಯು ಅ.13ರಂದು ರೈತರ ಹಿತದೃಷ್ಟಿಯಿಂದ ನಡೆಸುತ್ತಿರುವ ಕಲಬುರಗಿ ಬಂದ್‌ಗೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಬೆಂಬಲಿಸಲಿದೆ’ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹೋರಾಟ ಸಮಿತಿ ಮುಖಂಡರು ಬಂದ್‌ಅನ್ನು ಶಾಂತಿಯುತವಾಗಿ ನಡೆಸಬೇಕು. ಏಕೆಂದರೆ ಕೆಲವು ಸಮಾಜಘಾತುಕ ಶಕ್ತಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಹೋರಾಟಕ್ಕೆ ಹಿಂಬಾಗಿಲಿನಿಂದ ನುಸುಳಿದ್ದಾರೆ. ಇವರು ಹೋರಾಟದ ದಿಕ್ಕು ತಪ್ಪಿಸುವ ಸಾಧ್ಯತೆಯಿದ್ದು ಕೇಂದ್ರ ಸರ್ಕಾರದ ವೈಫಲ್ಯವನ್ನು ಮರೆಮಾಚಿ ರಾಜ್ಯ ಸರ್ಕಾರದ ವಿರುದ್ಧ ರೈತರು ಬಂಡೆದ್ದಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಈ ಕಾರಣದಿಂದ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮಧ್ಯಪ್ರವೇಶ ಮಾಡಿ ರೈತರ ಸಮಸ್ಯೆ ಆಲಿಸಿ ವೈಜ್ಞಾನಿಕ ರೀತಿಯ ಪರಿಹಾರ ಒದಗಿಸಬೇಕು. ಮುಖ್ಯಮಂತ್ರಿ ಅವರ ಪರಿಹಾರ ಘೋಷಣೆ ಹಾಸ್ಯಾಸ್ಪದವಾಗಿದೆ. ವಿಶೇಷ ಪರಿಹಾರ ಘೋಷಣೆ ಮಾಡದೆ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ ಸಿದ್ದಪ್ಪ ಪಾಲ್ಕಿ ಪದ್ಮಾವತಿ ಮಾಲಿಪಾಟೀಲ ಯಡ್ರಾಮಿ ತಾಲ್ಲೂಕು ಕಾರ್ಯದರ್ಶಿ ಭೀಮರಾಯ ಮುದಬಸಪ್ಪಗೋಳ ನಗರ ಕಾರ್ಯದರ್ಶಿ ಸಾಜೀದ್ ಅಹಮದ್ ಹಾಜರಿದ್ದರು.
ಎಐಡಿಎಸ್‌ಒ ಬೆಂಬಲ
ಕಲಬುರಗಿ: ‘ಸೋಮವಾರ ಕರೆ ನೀಡಿರುವ ಕಲಬುರಗಿ ಬಂದ್ ಅನ್ನು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ’ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ. ತಿಳಿಸಿದ್ದಾರೆ.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಾಗೂ ನೆರೆರಾಜ್ಯ ಮಹಾರಾಷ್ಟ್ರದಿಂದ ಭೀಮಾ ನದಿಗೆ ಹರಿಸಿದ ನೀರು ರೈತರ ಹೊಲ ಮನೆಗಳಿಗೆ ನುಗ್ಗಿ ಸಂಪೂರ್ಣವಾಗಿ ಜನ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಜನ ದವಸಧಾನ್ಯ ಕಳೆದುಕೊಂಡಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ಸರ್ಕಾರ ಜನರ ಬೆಂಬಲಕ್ಕೆ ನಿಂತು ಸೂಕ್ತ ಪರಿಹಾರ ನೀಡಬೇಕಿತ್ತು. ಆದರೆ ನಾಮಕಾವಸ್ತೆ ಎಂಬಂತೆ ಬಿಡಿಗಾಸು ಘೋಷಿಸಿ ಜಾರಿಕೊಂಡಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.