ADVERTISEMENT

‘ಹಸಿ ಬರಗಾಲ’ ಘೋಷಣೆಗೆ ಆಗ್ರಹ, ಕಲಬುರಗಿ ಬಂದ್’

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 0:35 IST
Last Updated 14 ಅಕ್ಟೋಬರ್ 2025, 0:35 IST
‘ಕಲಬುರಗಿ ಬಂದ್‌’ ಕರೆ ನೀಡಿದ್ದ ವಿವಿಧ ಸಂಘಟನೆಗಳ ಮುಖಂಡರು ಕಲಬುರಗಿಯ ಜಗತ್ ವೃತ್ತದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು  –ಪ್ರಜಾವಾಣಿ ಚಿತ್ರ
‘ಕಲಬುರಗಿ ಬಂದ್‌’ ಕರೆ ನೀಡಿದ್ದ ವಿವಿಧ ಸಂಘಟನೆಗಳ ಮುಖಂಡರು ಕಲಬುರಗಿಯ ಜಗತ್ ವೃತ್ತದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು  –ಪ್ರಜಾವಾಣಿ ಚಿತ್ರ   

ಕಲಬುರಗಿ: ಅತಿವೃಷ್ಟಿ ಬಾಧಿತ ಕಲಬುರಗಿಯನ್ನು ‘ಹಸಿ‌ ಬರಗಾಲ ಜಿಲ್ಲೆಯಾಗಿ ಘೋಷಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ‌ಕರ್ನಾಟಕ‌ ಹೋರಾಟ‌ ಸಮಿತಿ‌‌ ಸೋಮವಾರ ನೀಡಿದ್ದ ‘ಕಲಬುರಗಿ ಬಂದ್‌’ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಲಬುರಗಿ ಕೇಂದ್ರ ಬಸ್‌ ನಿಲ್ದಾಣ ಹಾಗೂ ಪ್ರಮುಖ ಮಾರ್ಗಗಳಲ್ಲಿ ರೈತ ಪರ, ಕಾರ್ಮಿಕ ಪ‍ರ, ವಿದ್ಯಾರ್ಥಿ ಪರ, ಮಹಿಳಾ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದವು.

ನಗರದಲ್ಲಿ ಸಾರಿಗೆ ಬಸ್‌ಗಳ ಓಡಾಟ ಮಧ್ಯಾಹ್ನ ತನಕ ಬಂದ್‌ ಆಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು. ‘ನಗರದಲ್ಲಿ ವ್ಯಾಪ್ತಿಯಲ್ಲಿ ಶೇ 30ರಿಂದ 40ರಷ್ಟು ಬಸ್‌ಗಳ ಸೇವೆ ವ್ಯತ್ಯಯವಾಗಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ADVERTISEMENT

ಸೂಪರ್‌ ಮಾರ್ಕೆಟ್‌ ಪ್ರದೇಶದ ಶೇ90ರಷ್ಟು ವ್ಯಾಪಾರಿಗಳು ವಹಿವಾಟು ನಿಲ್ಲಿಸಿದ್ದರು. ಎಪಿಎಂಸಿಯಲ್ಲೂ ವಹಿವಾಟು ನಡೆಯಲಿಲ್ಲ. ನಗರದಲ್ಲಿನ ಪೆಟ್ರೋಲ್‌ ಬಂಕ್‌ಗಳೂ ‘ಬಂದ್‌’ ಬೆಂಬಲಿಸಿ ಮಧ್ಯಾಹ್ನ 3ರವರೆಗೆ ಗ್ರಾಹಕರಿಗೆ ಸೇವೆಯನ್ನು ಸ್ಥಗಿತಗೊಳಿಸಿದ್ದವು.

ಬಳಿಕ ನಗರೇಶ್ವರ ಶಾಲೆಯಿಂದ ಜಗತ್‌ ವೃತ್ತದ ರೈತ ಮುಖಂಡರು ಟ್ರ್ಯಾಕ್ಟರ್‌ಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ‘ಕೇಂದ್ರ, ರಾಜ್ಯ ಸರ್ಕಾರಗಳು ಜಿಲ್ಲೆಯ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.