ಸದಾ ಪ್ರಯಾಣಿಕರ ದಟ್ಟನೆಯಿಂದ ಗಿಜಗುಡುವ ಕಲಬುರಗಿ ಕೇಂದ್ರ ಬಸ್ ನಿಲ್ದಾಣ ಸೋಮವಾರ ಬಿಕೊ ಎಂದಿತು
ಕಲಬುರಗಿ: ಅತಿವೃಷ್ಟಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯನ್ನು ಹಸಿಬರಗಾಲ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸಂಘಟನೆಗಳು ಜಂಟಿಯಾಗಿ ಕರೆ ನೀಡಿರುವ ಕಲಬುರಗಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಿವಿಧ ಸಂಘಟನೆಗಳ ಮುಖಂಡರು ಬೆಳಿಗ್ಗೆಯಿಂದಲೇ ನಗರದ ಕೇಂದ್ರ ಬಸ್ ನಿಲ್ದಾಣ, ರಾಮಮಂದಿರ ವೃತ್ತ, ಆಳಂದ ಚೆಕ್ ಪೋಸ್ಟ್, ಖರ್ಗೆ ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಕಾರರು ಸರ್ಕಾರ ವಿರೋಧಿ ಘೋಷಣೆ ಕೂಗಿದರು. ಕ್ರಾಂತಿ ಗೀತೆಗಳನ್ನು ಹಾಡಿದರು.
'ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ಎಕರೆ ₹25 ಸಾವಿರ ಪರಿಹಾರ ಘೋಷಿಸಬೇಕು. ಕಳೆದ 13 ದಿನಗಳಿಂದ ಕಲಬುರಗಿ ಜಗತ್ ವೃತ್ತದಲ್ಲಿ ಧರಣಿ ನಡೆಸಿದರೂ ಸೌಜನ್ಯಕ್ಕೂ ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಬಂದು ರೈತರ ಸಂಕಷ್ಟ ಆಲಿಸಿಲ್ಲ. ಇದು ರೈತ ವಿರೋಧಿ ಸರ್ಕಾರ' ಎಂದು ಪ್ರತಿಭಟನೆ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸಾರಿಗೆ ಬಸ್‌ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಹಲವು ಅಂಗಡಿಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿವೆ. ಬಂದ್ ಹಿನ್ನೆಲೆ ಹಲವು ಶಿಕ್ಷಣ ಸಂಸ್ಥೆಗಳು ಶಾಲೆಗಳಿಗೆ ರಜೆ ಘೋಷಿಸಿವೆ.
ಕೇಂದ್ರ ಬಸ್ ನಿಲ್ದಾಣ ಬಸ್‌ಗಳು ಹಾಗೂ ಪ್ರಯಾಣಿಕರು ಇಲ್ಲದೇ ಬಿಕೊ ಎಂದಿತು. ದೂರದ ಊರುಗಳಿಗೆ ತೆರಳಲು ಬಂದಿದ್ದ ಹಲವು ಪ್ರಯಾಣಿಕರು ಬಸ್ ಇಲ್ಲದೇ ಪರದಾಡಿದರು.
'ಸುರಪುರಕ್ಕೆ ಹೋಗಬೇಕು ಎಂದು ಕುಟುಂಬ ಸಮೇತ ಬಂದಿದ್ದೇವೆ. ಆದರೆ ಬಸಗಳೇ ಇಲ್ಲ.ರಾಮ ಮಂದಿರ ವೃತ್ತದಿಂದಲೂ ಖಾಸಗಿವಾಹನ ಸಿಗುವುದು ಅನುಮಾನ. ಹೀಗಾಗಿ ಸುಮ್ನೆ ಮನಗೆ ಮರಳಿ ಹೋಗುವುದೇ ವಾಸಿ' ಎನ್ನುತ್ತ ರಾಜ ಅಹ್ಮದ್ ಅವರ ಕುಟುಂಬದ ಮನೆಯತ್ತ ಮುಖ ಮಾಡಿದರು.
'ಸುರಪುರಕ್ಕೆ ಹೋಗಬೇಕಿತ್ತು. ಬಸ್ ಬಂದ್ ಇರುವ ವಿಷಯ ಗೊತ್ತಿರಲಿಲ್ಲ. ಇನ್ನೊಂದೆಡೆ ಗಂಟೆ ಕಾದು ನೋಡಿ ಬಸ್ ಸಿಗದಿದ್ದರೆ ಮರಳಿ ಮನೆಗೆ ಹೋಗುತ್ತೇನೆ' ಎಂದು ವೃದ್ಧೆ ಯಂಕಮ್ಮ ಹೇಳಿದರು.
'ನಮ್ಮದು ಚಿಂಚೋಳಿ. ಕಲಬುರಗಿಯಲ್ಲಿ ಅಕ್ಕ ಮನೆಗೆ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಿದ್ದೆ. ಕಲಬುರಗಿ ಬಂದ್‌ಹಾಗೂ ಬಸ್ ಬಂದ ಇರುವ ವಿಷಯ ತಿಳಿದಿರಲಿಲ್ಲ. ಬಸ್ಸೆ ಇಲ್ಲದಿದ್ದರೆ ಊರಿಗೆ ಹೋಗುವುದು ಹೇಗೆ. ಇನ್ನೊಂದು ದಿನ ಅಕ್ಕ ಮನೆಯಲ್ಲೇ ಉಳಿಯಬೇಕಾಗುತ್ತೇನೋ' ಎಂದು
ಚಿಕ್ಕ ಮಗಳೊಂದಿಗೆ ಬಸ್‌ನಿಲ್ದಾಣಕ್ಕೆ ಬಂದಿದ್ದ ಸರೋಜಾ ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.