ADVERTISEMENT

ಕಲಬುರಗಿ ಬಂದ್‌ಗೆ ಉತ್ತಮ ಸ್ಪಂದನೆ: 30ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರ ಬೆಂಬಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:39 IST
Last Updated 14 ಅಕ್ಟೋಬರ್ 2025, 6:39 IST
ಕಲಬುರಗಿ ಬಂದ್‌ ಅಂಗವಾಗಿ ಕೇಂದ್ರ ಬಸ್‌ ನಿಲ್ದಾಣದ ಎದುರು ರೈತ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು 
ಕಲಬುರಗಿ ಬಂದ್‌ ಅಂಗವಾಗಿ ಕೇಂದ್ರ ಬಸ್‌ ನಿಲ್ದಾಣದ ಎದುರು ರೈತ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು    

ಕಲಬುರಗಿ: ರಸ್ತೆಗಿಳಿಯದ ಸಾರಿಗೆ ಬಸ್‌. ಬಿಕೊ ಎಂದ ಕೇಂದ್ರ ಬಸ್‌ ನಿಲ್ದಾಣ. ಪರದಾಡಿದ ಪ್ರಯಾಣಿಕರು. ಸೂಪರ್‌ ಮಾರ್ಕೆಟ್‌ನಲ್ಲಿ ಬಾಗಿಲು ತೆರೆಯದ ಅಂಗಡಿ–ಮುಂಗಟ್ಟು. ಸರ್ಕಾರದ ವಿರುದ್ಧ ಮೊಳಗಿದ ಘೋಷಣೆಗಳು...

ನಿರಂತರ ಮಳೆ ಹಾಗೂ ಪ್ರವಾಹದಿಂದ ಕಲಬುರಗಿ ಜಿಲ್ಲೆ ತತ್ತರಿಸಿದ್ದು, ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ‌ಕರ್ನಾಟಕ‌ ಹೋರಾಟ‌ ಸಮಿತಿ‌‌ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳು ಸೋಮವಾರ ಕರೆ ನೀಡಿದ್ದ ‘ಕಲಬುರಗಿ ಬಂದ್‌’ನ ಚಿತ್ರಣವಿದು.

ಸೂರ್ಯೋದಯದೊಂದಿಗೆ ‘ಕಲಬುರಗಿ ಬಂದ್‌’ ಆರಂಭವಾಯಿತು. ಮಧ್ಯಾಹ್ನ 3 ಗಂಟೆ ತನಕವೂ ಸಾಗಿತು. ನಗರದ ಕೇಂದ್ರ ಬಸ್‌ ನಿಲ್ದಾಣ, ರಾಮಮಂದಿರ‌ ವೃತ್ತ, ಆಳಂದ‌ ಚೆಕ್‌ ಪೋಸ್ಟ್‌ ವೃತ್ತ, ಹುಮನಾಬಾದ್‌ ರಿಂಗ್‌ ರಸ್ತೆ ವೃತ್ತ ಸೇರಿದಂತೆ ಹಲವೆಡೆ ವಿವಿಧ ಸಂಘಟನೆಗಳ ಮುಖಂಡರು ಬೆಳಿಗ್ಗೆ 6 ಗಂಟೆಯಿಂದಲೇ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ADVERTISEMENT

‘ಹಸಿ ಬರಗಾಲ ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ನದಿ ಪ್ರವಾಹಗಳಿಂದ ಜಲಾವೃತವಾಗುವ ಪ್ರದೇಶದ ನಾಗರಿಕರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಹಿಂಗಾರು ಬಿತ್ತನೆಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರೈತ ಮುಖಂಡರು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕ್ರಾಂತಿ ‌ಗೀತೆಗಳನ್ನು‌ ಹಾಡಿ ಸಿಟ್ಟು ಹೊರಹಾಕಿದರು.

ಕೇಂದ್ರ ಬಸ್‌ ನಿಲ್ದಾಣದಿಂದ ಹೊರಟವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಕೆಲಕಾಲ ಪ್ರತಿಭಟಿಸಿದರು. ರಾಮ ಮಂದಿರ ವೃತ್ತದಿಂದ ಹೊರಟವರು ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ವಾಹನಗಳ ಸಂಚಾರವನ್ನು ತಡೆದು ಕೆಲ ನಿಮಿಷ ಆಕ್ರೋಶ ವ್ಯಕ್ತಪಡಿಸಿದರು. ಹಸಿರು ಶಾಲು ಬೀಸಿ, ‘ರೈತರೇ ಈ ದೇಶದ ಮಾಲೀಕರು. ರೈತರು ಅನ್ನ ಬೆಳೆಯದಿದ್ದರೆ ನಗರದಲ್ಲಿರುವವರು ನೋಟು ತಿನ್ನುತ್ತಾರಾ? ರೈತ ಸಾಲಗಾರನ್ನಲ್ಲ, ಸರ್ಕಾರವೇ ಬಾಕಿದಾರ’ ಎಂದು ಗುಡುಗಿದರು.

ನಗರದ ರಿಂಗ್ ರಸ್ತೆಗಳಲ್ಲಿ ಪ್ರತಿಭಟಿಸುತ್ತಿದ್ದ ಪ್ರತಿಭಟನಕಾರರು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಜಗತ್‌ ವೃತ್ತದಲ್ಲಿ ಮೇಳೈಸಿದರು. ನಗರೇಶ್ವರದಿಂದ ಮೂರು ಟ್ರ್ಯಾಕ್ಟರ್‌ ಸಹಿತ ಮೆರವಣಿಗೆಯಲ್ಲಿ ಬಂದ ಪ್ರತಿಭಟನಕಾರರು ನೆತ್ತಿ ಸುಡುವ ಬಿಸಿಲಿನಲ್ಲೇ ಮಾನವ ಸರಪಳಿ ನಿರ್ಮಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನೂ ಮೊಳಗಿಸಿದರು. ಹಲವರು ಮುಖಂಡರು ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು. ಗಂಜ್‌ನಿಂದ ನಡೆದೇ ಬಂದ ಮಾಜಿ ಸಚಿವ ಎಸ್‌.ಕೆ.ಕಾಂತಾ ಅವರು ತಮ್ಮ ಭಾಷಣದ ವೇಳೆ ಬಿರುಬಿಸಿಲಿನಿಂದ ಕುಸಿದು ಬಿದ್ದರು. ಅವರನ್ನು ಕೂಡಲೇ ಕಾರಿನಲ್ಲಿ ಕರೆದೊಯ್ಯಲಾಯಿತು.

ಪ್ರತಿಭಟನೆಯಲ್ಲಿ ಮುಖಂಡರಾದ ಬಸವರಾಜ ಇಂಗಿನ, ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಎಂ.ಬಿ ಸಜ್ಜನ್, ನಾಗೇಂದ್ರಪ್ಪ ಥಂಬೆ, ಎ.ಬಿ.ಹೊಸಮನಿ, ದಿವ್ಯಾ ಹಾಗರಗಿ, ಡಾ.ಸುಧಾ ಹಾಲಕಾಯಿ, ನಾಗಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಸಾರವಾಡ, ಶ್ರೀಕಾಂತ್ ರೆಡ್ಡಿ, ಮಾಲಾ ಕಣ್ಣಿ, ಪ್ರೀತಿ ದೊಡ್ಡಮನಿ, ವೀರಣ್ಣ ಗಂಗಾಣಿ, ಸಿದ್ದಾಜಿ ಪಾಟೀಲ, ಜಗದೇವಿ ಹೆಗಡೆ, ಅಂಬರಾಯ ಬೆಳಕೋಟ, ಶಿವರಾಜ ಅಂಡಗಿ, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ಮಹಾಂತಗೌಡ ನಂದಿಹಳ್ಳಿ, ಮಲ್ಲನಗೌಡ ಪಾಟೀಲ, ದಿಲೀಪ ಪಾಟೀಲ, ಶರಣು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಕಲಬುರಗಿ ಬಂದ್‌ ಅಂಗವಾಗಿ ಜಗತ್ ವೃತ್ತದಲ್ಲಿ ಸೋಮವಾರ ರೈತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು

ರೈತರು ಅನ್ನದ ಉತ್ಪಾದಕರು. ಹೊಲಗಳು ಕಾರ್ಖಾನೆಗಳಿದ್ದಂತೆ. ಕೈಗಾರಿಕೆಗಳಿಗೆ ಕೊಡುವ ಸವಲತ್ತು ಹೊಲಗಳಿಗೂ ಪಡೆಯಲು ರೈತರು ಹೋರಾಡಬೇಕಿದೆ
ಎಸ್‌.ಕೆ.ಕಾಂತಾ ಮಾಜಿ ಸಚಿವ
ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು
ಶರಣು ಪಪ್ಪಾ ಕೆಕೆಸಿಸಿಐ ಅಧ್ಯಕ್ಷ
ರೈತ ಎಲ್ಲರಿಗೂ ಅನ್ನದಾತ. ಅಂಥ ರೈತ ಕಷ್ಟದಲ್ಲಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ಘೋಷಿಸಿ ಪರಿಹಾರ ಕೊಡಬೇಕು
ಸಂತೋಷ ಲಂಗರ ಅಡತಿ ವ್ಯಾಪಾರಿಗಳ ಸಂಘದ ಅಧ್ಯಕ್ಷ
ಅ.2ರಿಂದ ಧರಣಿ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ರೈತ ಸಾಲ ಕೂಡಲೇ ಮನ್ನಾ ಮಾಡಬೇಕು. ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು
ದಯಾನಂದ ಪಾಟೀಲ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಲಬುರಗ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ಪರಿಹಾರ ನೀಡಬೇಕು
ಶರಣಬಸಪ್ಪ ಮಮಶೆಟ್ಟಿ ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ

‘ಬಂದ್‌’ಗೆ ಅನೇಕರ ಸಾಥ್‌

ಬಂದ್‌ ಅಂಗವಾಗಿ ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆ ಸೇಂಟ್‌ ಜೋಸೆಫ್‌ ಸೇಂಟ್‌ ಮೇರಿ ಸೇರಿದಂತೆ ಹಲವು ಶಾಲೆಗಳು ರಜೆ ಘೋಷಿಸಿದ್ದವು. ಕೆಲವು ಕಾಲೇಜುಗಳು ತಮ್ಮ ಅರ್ಧವಾರ್ಷಿಕ ಪರೀಕ್ಷೆಯನ್ನು ಮುಂದೂಡಿದ ಬಗೆಗೆ ವರದಿಯಾಗಿದೆ.  ನಗರದಲ್ಲಿನ ಪೆಟ್ರೋಲ್‌ ಬಂಕ್‌ಗಳೂ ‘ಬಂದ್‌’ ಬೆಂಬಲಿಸಿ ಮಧ್ಯಾಹ್ನ 3ರವರೆಗೆ ಗ್ರಾಹಕರಿಗೆ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಸೂಪರ್‌ ಮಾರ್ಕೆಟ್‌ ಪ್ರದೇಶದ ವ್ಯಾಪಾರಿಗಳು ವಹಿವಾಟು ಸಂಪೂರ್ಣ ನಿಲ್ಲಿಸಿದ್ದರು. ಎಪಿಎಂಸಿಯಲ್ಲೂ ವಹಿವಾಟು ನಡೆಯಲಿಲ್ಲ.

ಪ್ರಯಾಣಿಕರ ಪರದಾಟ: ಆಟೊಗಳ ಸುಗ್ಗಿ

ಬಂದ್‌ ವಿಷಯ ಅರಿಯದ ನೂರಾರು ಪ್ರಯಾಣಿಕರು ದೂರದ ಊರುಗಳಿಗೆ ಹೋಗಲು ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದರೂ ಬಸ್‌ಗಳಿಲ್ಲದೇ ಪರದಾಡಿದರು. ನಗರ ವ್ಯಾಪ್ತಿಯಲ್ಲಿ ಬಹುತೇಕ ಮಧ್ಯಾಹ್ನ 3 ಗಂಟೆ ತನಕ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಬಹುತೇಕ ಪ್ರಯಾಣಿಕರು ಆಟೊಗಳ ಮೊರೆ ಹೋದರು. ಬಂದ್‌ ದಿನವೂ ಆಟೊಗಳು ‘ಭರಪೂರ’ ವಹಿವಾಟು ನಡೆಸಿದವು. ‘ನಗರ ವ್ಯಾಪ್ತಿಯಲ್ಲಿ ನಿತ್ಯವೂ 100 ಬಸ್‌ಗಳು 600 ಟ್ರಿಪ್‌ಗಳಷ್ಟು ಸಂಚರಿಸುತ್ತಿದ್ದವು. ಸೋಮವಾರ ಬಂದ್‌ನಿಂದಾಗಿ ಶೇ 30ರಿಂದ 40ರಷ್ಟು ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.  ‘ದೂರದ ಊರುಗಳ ಬಸ್‌ ಸೇವೆಯು ನಗರದ ರಿಂಗ್‌ ರಸ್ತೆಯ ಆಚೆಯಿಂದ ಕಾರ್ಯಾಚರಣೆ ನಡೆಸಿವೆ’ ಎಂದು ಮೂಲಗಳು ಹೇಳಿವೆ.

ನಾಲ್ಕು ಪ್ರತಿಭಟನೆ; ಜನರ ತತ್ತರ

ನಗರದಲ್ಲಿ ಸೋಮವಾರ ‘ಕಲಬುರಗಿ ಬಂದ್’ ಮಾತ್ರವಲ್ಲದೇ ಕೋಲಿ ಸಮುದಾಯದ ಪ್ರತಿಭಟನೆ ವೆಲ್‌ಫೇರ್‌ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ ಹಾಗೂ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ನಡೆದವು. ಇದರಿಂದ ನಗರದಲ್ಲಿ ವಾಹನಗಳ ಸವಾರು ತೀವ್ರ ತೊಂದರೆ ಅನುಭವಿಸಿದರು. ‍ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟು ವಾಹನಗಳ ಸವಾರರಿಗೆ ಹಲವೆಡೆ ಬದಲಿ ಮಾರ್ಗ ಸೂಚಿಸಿ ನೆರವಾದರು. ಪ್ರತಿಭಟನೆಗಳು ಬಂದ್‌ ಅಂಗವಾಗಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.