
ಚಿಂಚೋಳಿ: ಜಿಲ್ಲೆಯ ಯಶಸ್ವಿ ನೀರಾವರಿ ಯೋಜನೆ ಖ್ಯಾತಿಯ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ. ಇದರಿಂದ ಬೆಳೆದ ಜೋಳ ಹಾಳಾಗುತ್ತಿದ್ದು, ರೈತರನ್ನು ಕಂಗಾಲಾಗಿಸಿದೆ.
ಈಗಾಗಲೇ ಮುಂಗಾರು ಬೆಳೆಗಳು ಅತಿವೃಷ್ಟಿಯಿಂದ ಸಂಪೂರ್ಣ ನೆಲಕಚ್ಚಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈಗ ಗಾಯದ ಮೇಲೆ ಬರೆ ಎಳೆದಂತೆ ಹಿಂಗಾರು ಬೆಳೆಗಳು ನೀರಿಲ್ಲದೇ ಒಣಗುತ್ತಿರುವುದರಿಂದ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಮುಖ್ಯ ಕಾಲುವೆಯ ಎಡದಂಡೆ ನಾಲೆ 21 ಕಿಮೀ, ಬಲದಂಡೆ ನಾಲೆ 14 ಕಿಮೀ ಉದ್ದವಿದ್ದು, ಒಟ್ಟು 36 ವಿತರಣಾ ನಾಲೆಗಳಿವೆ. ಚಂದ್ರಂಪಳ್ಳಿ, ಕೊಳ್ಳೂರು, ಪತೆಪುರು, ದೇಗಲಮಡಿ, ಪಟಪಳ್ಳಿ, ಐನೋಳ್ಳಿ, ಚಿಂಚೋಳಿ, ಚಂದಾಪುರ, ಕಲಭಾವಿ, ಪೋಲಕಪಳ್ಳಿ ಗ್ರಾಮಗಳ 5223 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಗುರಿ ಹೊಂದಿರುವ ಯೋಜನೆಯಲ್ಲಿ ಮುಖ್ಯ ಕಾಲುವೆ ಹಾಗೂ ವಿತರಣಾ ನಾಲೆಗಳು ಹಾಳಾಗಿವೆ. ಜತೆಗೆ ಹುಲ್ಲು, ಗಿಡಗಂಟೆ ಬೆಳೆದು ಕಾಲುವೆಗಳು ಕಾಣದಂತಾಗಿವೆ.
ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಕಾಲುವೆಗಳಲ್ಲಿ ಸರಾಗವಾಗಿ ಹರಿಯಲು ಅಡಚಣೆಯಾಗಿದ್ದರಿಂದ ಬಯಲು ಸೀಮೆಯ ರೈತರ ಹಸಿವು ನೀಗಿಸುವ ಬಿಳಿ ಜೋಳದ ಬೆಳೆ ಒಣಗುತ್ತಿರುವುದು ನೋಡುತ್ತ ಬೆಳೆಗಾರರು ಸಂಕಟ ಅನುಭವಿಸುತ್ತಿದ್ದಾರೆ.
ಜಲಾಶಯದ ನೀರು ನಂಬಿ ಜೋಳ, ಕಡಲೆ, ಗೋಧಿ, ಅರಸಿನ, ತೊಗರಿ, ಈರುಳ್ಳಿ, ಚಿಯಾ ಮೊದಲಾದ ಬೆಳೆಗಳು ಬೆಳೆಯುತ್ತಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಸಕ್ತ ವರ್ಷ ಕಾಲುವೆಗಳ ಹೂಳು ತೆಗೆಯದೇ, ಜಂಗಲ್ ಕಟಿಂಗ್ ಮಾಡದೇ ಜಲಾಶಯದ ನೀರು ಕಾಲುವೆಗೆ ಬಿಟ್ಟಿದ್ದರಿಂದ ಸಕಾಲದಲ್ಲಿ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ ಎಂದು ರೈತ ಲಕ್ಷ್ಮಣ ಕಲಭಾವಿ ಅಳಲು ತೋಡಿಕೊಂಡಿದ್ದಾರೆ.
ಕಳೆದ 15 ದಿನಗಳಿಂದ ನೀರಿಗಾಗಿ ಕಚೇರಿಗಳಿಗೆ ಅಲೆದರೂ ನಮ್ಮನ್ನು ಯಾರು ಕ್ಯಾರೇ ಅಂದಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಇದರಿಂದ ಈಗ ಬೆಳೆಗಳು ಒಣಗುತ್ತಿವೆ. ಮುಂಗಾರು ಮಳೆ ನೀರಿನಿಂದ ಬೆಳೆ ಕೈತಪ್ಪಿದರೆ ಹಿಂಗಾರು ಬೆಳೆಗಳು ನೀರಿಲ್ಲದೇ ಕೈತಪ್ಪಿದ್ದು ಸರ್ಕಾರದ ನಿರ್ಲಕ್ಷಕ್ಕೆ ಹಿಡಿದ ಕನ್ನಡಿ ಎನ್ನುತ್ತಾರೆ ರೈತ ಬಾಬು ಚವ್ಹಾಣ.
ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಕನಸಿನ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯ ಚಂದ್ರಂಪಳ್ಳಿ ನೀರಾವರಿ ಯೋಜನೆಗೆ ಮಾಜಿ ಸಿಎಂ ಯಡಿಯೂರಪ್ಪನವರ ಕಾಲವಧಿಯಲ್ಲಿ ಅಂದಿನ ಶಾಸಕ ಸುನೀಲ ವಲ್ಯಾಪುರ ಅಗತ್ಯ ಅನುದಾನ ಮಂಜೂರು ಮಾಡಿಸಿ ಕಾಲುವೆ ಜಾಲ ನವಿಕರಿಸಿದ್ದರು. ಆದರೆ, ಈಗ ಮತ್ತೆ ಹಾಳಾಗಿದ್ದು ಕಾಲುವೆ ಬಲವರ್ಧನೆಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ರೈತರು ತೀವ್ರ ಅತೃಪ್ತಿ
ವ್ಯಕ್ತಪಡಿಸಿದ್ದಾರೆ.
ವಾರ್ಷಿಕ ಕ್ರಿಯಾ ಯೋಜನೆ ಮತ್ತು ಅಂದಾಜು ಪಟ್ಟಿ ಪರಿಶೀಲನಾ ಸಮಿತಿ ಅನುಮೋದನೆ ವಿಳಂಬವಾಗಿದೆ. ಮರು ಟೆಂಡರ್ ಕರೆದಿದ್ದೇವೆ. ಹೂಳು ತೆಗೆಯುವುದು ನಡಿಯುತ್ತಿದೆ.– ಚೇತನ ಕಳಸ್ಕರ್, ಎಇಇ ಚಂದ್ರಂಪಳ್ಳಿ ನೀರಾವರಿ ಯೋಜನೆ ಚಿಂಚೋಳಿ
ಕಳೆದ ವರ್ಷ ನ.15ಕ್ಕೆ ಎರಡು ಬಾರಿ ಬೆಳೆಗಳಿಗೆ ನೀರುಣಿಸಿದ್ದೆವು. ಇದರಿಂದ ನನ್ನ ಹೊಲದಲ್ಲಿ 28 ಚೀಲ ಜೋಳ ಬೆಳೆಯಲಾಗಿತ್ತು. ಪ್ರಸಕ್ತ ವರ್ಷ ಒಮ್ಮೆಯೂ ನೀರು ಸಿಕ್ಕಿಲ್ಲ ಇದರಿಂದ ಜೋಳದ ಬೆಳೆ ಒಣಗಿ ನಿಂತಿದೆ.– ಮಾಣಿಕ ಕೇಶು ಜಾಧವ, ಕಲಭಾ ವಿ ರೈತ
ಚಂದ್ರಂಪಳ್ಳಿ ನೀರಾವರಿ ಯೋಜನೆ ಮುಖ್ಯ ಕಾಲುವೆ ಹಾಗೂ ವಿತರಣ ನಾಲೆಗಳು ಸಂಪೂರ್ಣ ಹಾಳಾಗಿವೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಈ ಕುರಿತು ಗಂಭೀರತೆ ಇಲ್ಲ.ವಿಜಯಕುಮಾರ ರೊಟ್ಟಿ, ಐನೋಳ್ಳಿ ಅಚ್ಚುಕಟ್ಟು ಪ್ರದೇಶದ ರೈತ
ಟೆಂಡರ್ ಅಂತಿಮವಿಲ್ಲ!
ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಾಲುವೆ ಜಾಲದ ಆಧುನೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಅಂದಾಜು ಪಟ್ಟಿ ತಯಾರಿಸಲು ಸರ್ಕಾರು ₹50 ಲಕ್ಷ ಮಂಜೂರು ಮಾಡಿ ವರ್ಷ ಕಳೆದಿದೆ. ಒಮ್ಮೆ ಟೆಂಡರ್ ಕರೆದರೂ ಯಾರು ಅರ್ಜಿ ಸಲ್ಲಿಸಿಲ್ಲ. ಮತ್ತೊಮ್ಮೆ ಟೆಂಡರ್ ಆಹ್ವಾನಿಸಿದಾಗ ಮೂವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಈವರೆಗೂ ಟೆಂಡರ್ ಪ್ರಕ್ರಿಯೆ ಅಂತಿಮವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.