ADVERTISEMENT

ಚಿಂಚೋಳಿ: ಮುಲ್ಲಾಮಾರಿ ನದಿಗೆ 3,500 ಕ್ಯುಸೆಕ್ಸ್ ನೀರು

ನಾಗರಾಳ -ಚಂದ್ರಂಪಳ್ಳಿಗೆ ಒಳ ಹರಿವು ಹೆಚ್ಚಳ 

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 16:05 IST
Last Updated 27 ಜುಲೈ 2023, 16:05 IST
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯದ ನೀರು ನದಿಗೆ ಬಿಟ್ಟಾಗ, ಗ್ರಾಮ ಪ್ರವೇಶದ ಸೇತುವೆಯಿಂದ ಭೋರ್ಗರೆಯುವ ದೃಶ್ಯ ಮನಮೋಹಕವಾಗಿದೆ
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯದ ನೀರು ನದಿಗೆ ಬಿಟ್ಟಾಗ, ಗ್ರಾಮ ಪ್ರವೇಶದ ಸೇತುವೆಯಿಂದ ಭೋರ್ಗರೆಯುವ ದೃಶ್ಯ ಮನಮೋಹಕವಾಗಿದೆ   

ಚಿಂಚೋಳಿ: ತಾಲ್ಲೂಕಿನ ನಾಗರಾಳ ಜಲಾಶಯದಿಂದ 2,000 ಕ್ಯುಸೆಕ್ ಹಾಗೂ ಚಂದ್ರಂಪಳ್ಳಿ ಜಲಾಶಯದಿಂದ 1500 ಕ್ಯುಸೆಕ್ ನೀರು ಮುಲ್ಲಾಮಾರಿ ನದಿಗೆ ಬಿಡಲಾಗುತ್ತಿದೆ.

ನಾಗರಾಳ ಜಲಾಶಯಕ್ಕೆ 1360 ಕ್ಯುಸೆಕ್ ಒಳ ಹರಿವಿದ್ದು, 1,200 ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ರಾತ್ರಿ ನದಿಗೆ ನೀರು ಬಿಡುವ ಪ್ರಮಾಣ ಹೆಚ್ಚಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರುಣಕುಮಾರ ವಡಗೇರಿ ತಿಳಿಸಿದರು.

ಹುಮ್ನಾಬಾದ್‌, ಚಿಟ್ಟುಗುಪ್ಪ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಜಲಾಶಯಕ್ಕೆ ಒಳ ಹರಿವು ಹೆಚ್ಚುವ ಸಾಧ್ಯತೆಯಿದೆ. ಸದ್ಯ ಜಲಾಶಯದ ನೀರಿನ ಮಟ್ಟ 489.72 ಮೀಟರ್ ಇದೆ. ನೀರು ಬಿಡುತ್ತಿದ್ದರೂ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ರಾತ್ರಿ ನೀರು ಬಿಡುವ ಪ್ರಮಾಣ ಹೆಚ್ಚಲಿದೆ ಎಂದು ಸಹಾಯಕ ಎಂಜಿನಿಯರ್ ವಿನಾಯಕ ಚವ್ಹಾಣ ಮಾಹಿತಿ ನೀಡಿದರು.

ADVERTISEMENT

ಚಂದ್ರಂಪಳ್ಳಿ ಜಲಾಶಯಕ್ಕೆ 1,340 ಕ್ಯುಸೆಕ್ ಒಳಹರಿವಿದೆ. ಇಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯದ ನೀರಿನ ಮಟ್ಟ 1613 ಅಡಿಯಿದೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಚೇತನ ಕಳಸ್ಕರ್ ತಿಳಿಸಿದರು.

ತಡರಾತ್ರಿ ಹಗಲೆಲ್ಲಾ ಮಳೆ: ತಾಲ್ಲೂಕಿನಲ್ಲಿ ಗುರುವಾರ ಬೆಳಗಿನ ಜಾವದಿಂದ ಪ್ರಾರಂಭವಾದ ಮಳೆ ಹಗಲೆಲ್ಲಾ ಸುರಿದು ಜನರ ಜೀವನ ದುಸ್ತರಗೊಳಿಸಿತು.
ಬಿಡದೇ ಸುರಿಯುತ್ತಿರುವ ಮಳೆ ಮುಂಗಾರಿನ ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿದೆ. ಇದರಿಂದ ಉದ್ದು, ಹೆಸರು, ತೊಗರಿ ಹಾಗೂ ಮೆಕ್ಕೆ ಜೋಳ, ಸಜ್ಜೆ ಕೈಗೆಟುಕುವುದು ಅನುಮಾನವಾಗಿದೆ.

ಎಲ್ಲೆಡೆ ಹೊಲ ಗದ್ದೆಗಳಿಂದ ನೀರು ಜಿನುತ್ತಿದೆ. ಮಳೆಯಿಂದ ನದಿನಾಲಾ ತೊರೆಗಳು, ಜಲಪಾತಗಳು ಭೋರ್ಗರೆಯುತ್ತಿದ್ದು, ಜಲಾಶಗಳಿಗೂ ಒಳಹರಿವು ಹೆಚ್ಚಾಗಿದೆ.

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಚಿಂಚೋಳಿ 25 ಮಿ.ಮೀ, ಐನಾಪುರ 20 ಮಿ.ಮೀ, ಸುಲೇಪೇಟ 26 ಮಿ.ಮೀ, ಚಿಮ್ಮನಚೋಡ 23 ಮಿ.ಮೀ, ಕುಂಚಾವರಂ 80 ಮಿ.ಮೀ, ನಿಡಗುಂದಾ 32 ಮಿ.ಮೀ ಹಾಗೂ ಕೋಡ್ಲಿ 23.8 ಮಿ.ಮೀ ಮಳೆ ಸುರಿದಿದೆ ಎಂದು ಮಳೆಮಾಪನ ಕೇಂದ್ರದ ಶ್ರೀಮಂತ ದುಕಾನದಾರ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಿಂದ 78 ಮನೆಗಳಿಗೆ ಹಾನಿಯಾಗಿದೆ. ಬೆಳೆ ಹಾಳಾದ ಕುರಿತು ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯವರು ಸರ್ವೆ ಮಾಡುತ್ತಿದ್ದಾರೆ
ವೀರೇಶ ಮುಳುಗುಂದ ಮಠ ತಹಶೀಲ್ದಾರ್‌ ಚಿಂಚೋಳಿ
ಚಿಂಚೋಳಿಯಲ್ಲಿ ಹೃದಯಾಘಾತದಿಂದ ಒಂದು ಎತ್ತು ಸತ್ತಿದೆ. ಮಳೆಯಿಂದ ಮೃತಪಟ್ಟಿಲ್ಲ. ಶೀತದಿಂದ ಜಾನುವಾರುಗಳು ಸಾಯುವುದಿಲ್ಲ
ಧನರಾಜ ಬೊಮ್ಮಾ ಸಹಾಯಕ ನಿರ್ದೆಶಕರು ಪಶು ಪಾಲನಾ ಇಲಾಖೆ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.