ADVERTISEMENT

ಕಲಬುರಗಿ: ತಾಪಮಾನ ಹೆಚ್ಚಿದರೂ ಬತ್ತದ ನೀರಿನ ಬುಗ್ಗೆ!

ಜೂನ್‌ನಲ್ಲೂ ಉರಿಬಿಸಿಲು; ಜನ ಜೀವನ ಅಸ್ತವ್ಯಸ್ತ

ಜಗನ್ನಾಥ ಡಿ.ಶೇರಿಕಾರ
Published 4 ಜೂನ್ 2023, 4:35 IST
Last Updated 4 ಜೂನ್ 2023, 4:35 IST
ಚಿಂಚೋಳಿ ಪಟ್ಟಣದ ಹೊರ ವಲಯದ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ಬಿಸಿಲಿನ ಬೇಗೆ ನಿವಾರಿಸಿಕೊಳ್ಳುತ್ತಿರುವುದು
ಚಿಂಚೋಳಿ ಪಟ್ಟಣದ ಹೊರ ವಲಯದ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ಬಿಸಿಲಿನ ಬೇಗೆ ನಿವಾರಿಸಿಕೊಳ್ಳುತ್ತಿರುವುದು   

ಚಿಂಚೋಳಿ: ಜೂನ್ ತಿಂಗಳು ಆರಂಭವಾಗಿ ಮೂರು ದಿನಗಳು ಗತಿಸಿದರೂ ತಾಲ್ಲೂಕಿನಲ್ಲಿ ಉರಿ ಬಿಸಿಲಿನ ಬೇಗೆ ತಗ್ಗುತ್ತಿಲ್ಲ. ಇದರಿಂದ ಯುವಕರು, ಮಕ್ಕಳು ತಂಪು ತಾಣಗಳತ್ತ ಲಗ್ಗೆ ಇಡುತ್ತಿದ್ದಾರೆ.

ಇಲ್ಲಿನ ಮುಲ್ಲಾಮಾರಿ ನದಿ ದಂಡೆಯ ಮೇಲಿರುವ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ನೀರು ನಿರಂತರ ಉಕ್ಕುತ್ತಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಅತ್ಯಧಿಕ ಬಿಸಿಲಿನ ಬೇಗೆ ಜತೆಗೆ ಗರಿಷ್ಠ ತಾಪಮಾನ 41 ಡಿಗ್ರಿ ದಾಖಲಾದರೂ ಕೂಡ ಬುಗ್ಗೆ ಮಾತ್ರ ಬತ್ತಿಲ್ಲ. ಬಿಸಿಲಿನಿಂದ ಕಂಗೆಟ್ಟ ಯುವಕರು, ಮಕ್ಕಳು ಇಲ್ಲಿಗೆ ಬಂದು ಬುಗ್ಗೆಯ ನೀರಿನಲ್ಲಿ ಮಿಂದೆದ್ದು ಬೇಗೆ ತಣಿಸಿಕೊಳ್ಳುತ್ತಿದ್ದಾರೆ.

ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಬಡಿ ದರ್ಗಾದ ಹಿಂದುಗಡೆ ಬರುವ ಈ ಪಂಚಲಿಂಗೇಶ್ವರ ಈ ಬುಗ್ಗೆಗೆ ಕಳೆದ 2 ವರ್ಷಗಳ ಹಿಂದೆ ಕಾಯಕಲ್ಪ ನೀಡಲಾಗಿದೆ. ಇದರಿಂದ ಬುಗ್ಗೆ ಪ್ರದೇಶ ಸೌಂದರ್ಯೀಕರಣಗೊಂಡಿದೆ. ಇದರಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ಬುಗ್ಗೆಯಲ್ಲಿ ಎರಡು ತೊಟ್ಟಿಗಳಿದ್ದು, ಎರಡೂ ತೊಟ್ಟಿಗಳಲ್ಲೂ ನೀರು ಭೂಮಿಯಿಂದ ಹೊರ ಬರುತ್ತದೆ.

ADVERTISEMENT

ಒಂದು ತೊಟ್ಟಿಯಲ್ಲಿ ಐದು ಶಿವಲಿಂಗಗಳು, ನಂದಿ ಮೂರ್ತಿಗಳಿವೆ. ನೋಡಲು ಐದೂ ಶಿವಲಿಂಗಗಳು ಸಮಾನ ಎತ್ತರದಲ್ಲಿರುವಂತೆ ಕಂಡರೂ ಕೂಡ ಎಲ್ಲಾ ಶಿವಲಿಂಗಗಳು ಒಂದೊಂದು ಮಟ್ಟದಲ್ಲಿರುವುದು ಇಲ್ಲಿನ ವಿಶೇಷವಾಗಿದೆ. ನಂದಿಮೂರ್ತಿಯ ಎದುರುಗಡೆ ಮತ್ತು ಶಿವಲಿಂಗಗಳ ಕೆಳಗಡೆಯಿಂದ ನೀರು ಬುಗ್ಗೆಯಂತೆ ಹರಿಯುತ್ತದೆ. ಹೀಗೆ ಹರಿಯುವ ನೀರು ತೊಟ್ಟಿಯಿಂದ ಮುಲ್ಲಾಮಾರಿ ನದಿ ಸೇರುತ್ತದೆ. ತೊಟ್ಟಿಯಿಂದ ನೀರು ಹೊರ ಹೋಗಲು ಎರಡು ಮಾರ್ಗಗಳನ್ನು ನಿರ್ಮಿಸಲಾಗಿದೆ. ಈ ಮಾರ್ಗಗಳನ್ನು ಬಂದ್ ಮಾಡಿದರೆ ಕೆಲವು ನಿಮಿಷಗಳಲ್ಲಿ ತೊಟ್ಟಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ.

ಅಲ್ಲಲ್ಲಿ ಕೊಳವೇ ಬಾವಿಗಳು ಕೊರೆದಿರುವುದರಿಂದ ಶಿವಲಿಂಗವಿರುವ ತೊಟ್ಟಿಯಲ್ಲಿ ನೀರು ಬತ್ತುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಬತ್ತಿಲ್ಲ. ಇದರ ಪಕ್ಕದಲ್ಲಿರುವ ಇನ್ನೊಂದು ತೊಟ್ಟಿಯನ್ನು ಸ್ನಾನಕ್ಕೆ ಬಳಕೆ ಮಾಡಲಾಗುತ್ತದೆ. ಈ ಸ್ನಾನದ ಬುಗ್ಗೆಯ ತೊಟ್ಟಿಯ ನೀರು ಮಾತ್ರ ಎಂದೂ ಬತ್ತಿಲ್ಲ ಎನ್ನುತ್ತಾರೆ ಹಿರಿಯರಾದ ಅಶೋಕ ಪಾಟೀಲ.

1972-73ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಭೀಕರ ಬರಗಾಲ ಎದುರಾದಾಗ 25ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಇದೇ ತೊಟ್ಟಿ ಬುಗ್ಗೆಯ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗಿದೆ ಎಂದು ಅವರು ಹೇಳುತ್ತಾರೆ. ಮುಲ್ಲಾಮಾರಿ ನದಿಯ ನೀರು ಮಳೆಗಾಲದಲ್ಲಿ ಪ್ರವಾಹ ಬಂದಾಗ ಬುಗ್ಗೆ ಮುಳುಗುತ್ತದೆ. ಹೀಗಾಗಿ ಇಲ್ಲಿ ಪ್ರವಾಹ ನಿಯಂತ್ರಣ ಕೈಗೊಳ್ಳಬೇಕೆಂಬ ಬೇಡಿಕೆ ಜನರಿಂದ ಬಂದಿತ್ತು. ಇದಕ್ಕಾಗಿ ₹1.5 ಕೋಟಿ ಮಂಜೂರಾಗಿತ್ತು. ಆದರೆ ಈವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ಪ್ರವಾಹ ನಿಯಂತ್ರಣ ಕಾಮಗಾರಿ ನಡೆಯುವುದೇ ಎಂಬ ಅನುಮಾನ ಜನರಲ್ಲಿ ಮೂಡಿದೆ.

ಚಿಂಚೋಳಿಯ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ನೀರು ಹರಿಯುತ್ತಿರುವುದು
ಸುರೇಶ ದೇಶಪಾಂಡೆ ಅಧ್ಯಕ್ಷರು ಕಸಾಪ ಚಿಂಚೋಳಿ 

ಬುಗ್ಗೆಗೆ ಕಾಯಕಲ್ಪ ನೀಡಿದ್ದು ಸಂತಸದ ಸಂಗತಿ. ಇಲ್ಲಿ ಪ್ರವಾಸಿಗರ ಆಕರ್ಷಣೆಗೆ ಶಿವನ ಮೂರ್ತಿ ಪ್ರತಿಷ್ಠಾಪಿಸಬೇಕು. ಬೀದರ್ ಮಾರ್ಗದ ಹೆದ್ದಾರಿಯಿಂದ ಅಗಲವಾದ ಕೂಡು ರಸ್ತೆ ನಿರ್ಮಿಸಬೇಕು -ಸುರೇಶ ದೇಶಪಾಂಡೆ ಅಧ್ಯಕ್ಷರು ಕಸಾಪ ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.