
ಕಲಬುರಗಿ: ‘ಚಿರತೆಗಳ ವಿಹಾರ’ಕ್ಕೆ ಸಂರಕ್ಷಿತ ಅರಣ್ಯ ಪ್ರದೇಶ ಮೀಸಲಿರಿಸಲು ಕಲಬುರಗಿ ಅರಣ್ಯ ವಿಭಾಗ ಮುಂದಾಗಿದೆ. ಮೊದಲ ಹೆಜ್ಜೆಯಾಗಿ ಚಿತ್ತಾಪುರ ತಾಲ್ಲೂಕಿನ ಜನವಸತಿ ರಹಿತ 2,877 ಎಕರೆ ದಟ್ಟ ಕಾನನ ಪ್ರದೇಶವನ್ನು ಗುರುತಿಸಿದೆ.
ಅಶನಾಳ ಬ್ಲಾಕ್ ಅಧಿಸೂಚಿತ ಪ್ರದೇಶದಲ್ಲಿ 24 ಸಾವಿರ ಎಕರೆಗಳಷ್ಟು ಅರಣ್ಯ ಪ್ರದೇಶವಿದೆ. ಆ ಪೈಕಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಅಲ್ಲೂರ (ಬಿ) ಗ್ರಾಮದ ಸರಹದ್ದಿನ 2,877 ಎಕರೆ ಕಾನನವನ್ನು ‘ಚಿರತೆ ಸಂರಕ್ಷಣೆ’ಗೆ ಮೀಸಲಿರಿಸಲು ಉದ್ದೇಶಿಸಿದೆ.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ನವೆಂಬರ್‌ನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಅಂದುಕೊಂಡಂತೆ ಪ್ರಸ್ತಾವ ಜಾರಿಯಾದರೆ ‘ರಾಜ್ಯದ ಮೊದಲ ಚಿರತೆ ಸಂರಕ್ಷಣಾ ಪ್ರದೇಶ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಸದ್ಯ ಗುರುತಿಸಲಾದ ಅರಣ್ಯದಲ್ಲಿ ಕೆಲವು ತಿಂಗಳ ಹಿಂದೆ ಹೊಳೆಮತ್ತಿ ನೇಚರ್ ಫೌಂಡೇಷನ್‌ನಿಂದ ಕ್ಯಾಮೆರಾ ಟ್ರ್ಯಾಪಿಂಗ್ ಸಾಧನಗಳನ್ನು ಅಳವಡಿಸಲಾಗಿತ್ತು. ಆಗ ಚಿರತೆಗಳು ಸೇರಿದಂತೆ ಇತರೆ ವನ್ಯಜೀವಿಗಳು ಓಡಾಟ ಪತ್ತೆಯಾಗಿತ್ತು. ಆ ಬೆನ್ನಲ್ಲೇ ಈ ಪ್ರಸ್ತಾವ ಸಲ್ಲಿಕೆಯಾಗಿದೆ.
‘ಚಿರತೆ ಸಂರಕ್ಷಿತ ಪ್ರದೇಶ ಘೋಷಣೆಗೆ ಸ್ಥಳೀಯರೊಂದಿಗೆ ಬೆಂಬಲ ಜನಪ್ರತಿನಿಧಿಗಳ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಸಂಬಂಧ ಹಳ್ಳಿಗಳಲ್ಲಿ ಗ್ರಾಮಸಭೆಗಳನ್ನೂ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮತಿಯ ಮುದ್ರೆಯೂ ಇದಕ್ಕೆ ಬಿದ್ದಿದೆ. ಜೊತೆಗೆ ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ, ಈ ಪ್ರದೇಶವನ್ನು ಗುರುತಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಚಿರತೆಗಳು ಕ್ಷಿಪ್ರ ಹೊಂದಿಕೊಳ್ಳುವ ಗುಣವುಳ್ಳ ವನ್ಯಜೀವಿಗಳು. ಹೀಗಾಗಿಯೇ ಅನೇಕ ಅಡೆತಡೆ, ಸವಾಲುಗಳ ಹೊರತಾಗಿಯೂ ಅವು ನಗರಗಳ ಅಂಚಿಗೂ ನುಸುಳುತ್ತಿವೆ. ಜೊತೆಗೆ ಅಲ್ಲಲ್ಲಿ ದನ–ಕರುಗಳ ಮೇಲೆ ದಾಳಿ ನಡೆಸುತ್ತಿವೆ. ಸಂರಕ್ಷಿತ ಪ್ರದೇಶ ಘೋಷಣೆಯಾದರೆ ಈ ದಾಳಿಗಳಿಗೆ ಕಡಿವಾಣ ಬೀಳುವ ಜೊತೆಗೆ ಇತರೆ ವನ್ಯಜೀವಿಗಳ ಸಂರಕ್ಷಣೆಗೂ ನೆರವಾಗಲಿದೆ’ ಎನ್ನುತ್ತಾರೆ ಕಲಬುರಗಿ ಡಿಸಿಎಫ್ ಸುಮಿತ್‌ಕುಮಾರ್ ಪಾಟೀಲ.
‘ಉತ್ತರ ಕರ್ನಾಟಕ ಹಲವು ವನ್ಯಜೀವಿಗಳ ತಾಣವಾಗಿದೆ. ಈ ಉದ್ದೇಶಿತ ಮೀಸಲು ಪ್ರದೇಶದಲ್ಲಿ ಚುಕ್ಕೆ ಜಿಂಕೆಗಳಲ್ಲದೇ ಕೃಷ್ಣ ಮೃಗಗಳಿವೆ. ಅದರ ನೆರೆಹೊರೆಯ ಪ್ರದೇಶದಲ್ಲಿ ತೋಳ, ಕಾಡು ನಾಯಿ, ಹೈನಾ, ನರಿ ಹಾಗೂ ಗುಳ್ಳೆನರಿಗಳು ಓಡಾಟ ಕಂಡು ಬಂದಿದೆ. ಹೀಗಾಗಿ ಅರಣ್ಯವನ್ನು ಬರೀ ಒಂದು ಪ್ರದೇಶವಾಗಿ ನೋಡುವ ಬದಲು ಅದಕ್ಕೆ ವನ್ಯಜೀವಿ ತಾಣ ಎಂಬ ಆಯಾಮ ನೀಡುವ ಆಶಯ ನಮ್ಮದು. ಸದ್ಯ, ಪ್ರಸ್ತಾವಿತ ಎಲೆಗಳು ಉದುರುವ ಕಾಡುಪ್ರದೇಶವು ತುಲನಾತ್ಮಕವಾಗಿ ತೀರಾ ಚಿಕ್ಕದೆನಿಸಿದರೂ, ಇದೊಂದು ಆರಂಭವಷ್ಟೇ’ ಎಂಬುದು ಅವರ ಅಭಿಮತ.
ಯಾವ ಹಂತದಲ್ಲಿದೆ?:
‘ಉದ್ದೇಶಿತ ಪ್ರಸ್ತಾವವು ಸದ್ಯ ರಾಜ್ಯ ವನ್ಯಜೀವಿ ಮಂಡಳಿಯ ಅಂಗಳದಲ್ಲಿದೆ. ಮಂಡಳಿಯ ಸಂಬಂಧಿತ ಸಮಿತಿಯು ಈ ಕುರಿತು ಪ್ರಾಥಮಿಕವಾಗಿ ಚರ್ಚಿಸಿದೆ. ವಿಸ್ತೃತ ಚರ್ಚೆಯ ಬಳಿಕ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದೆ. ನಂತರ ಆ ಪ್ರಸ್ತಾವಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ’ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಚಿರತೆ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆಯಾದರೆ ಚಿರತೆ ಸೇರಿ ವನ್ಯಜೀವಿಗಳ ಸಂರಕ್ಷಣೆ ಜೊತೆಗೆ ಅರಣ್ಯೀಕರಣ ಹಾಗೂ ಅರಣ್ಯ ಸಂಪತ್ತಿನ ಸಂರಕ್ಷಣೆಗೂ ನೆರವಾಗಲಿದೆ ಸುಮಿತ್‌ಕುಮಾರ್ ಪಾಟೀಲ ಕಲಬುರಗಿ ಡಿಸಿಎಫ್
‘ಸಂಘರ್ಷ ತಡೆಗೆ ಸಹಕಾರಿ’
‘ಚಿತ್ತಾಪುರ ಅರಣ್ಯದಲ್ಲಿ ಕೆಲ ತಿಂಗಳ ಹಿಂದೆ 15 ದಿನಗಳ ಕಾಲ 16 ಪ್ರದೇಶಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಸಾಧನಗಳನ್ನು ಅಳವಡಿಸಲಾಗಿತ್ತು. ಆಗ ಚಿರತೆ ಕಾಡುಬೆಕ್ಕು ತುಕ್ಕುಹಿಡಿದಂಥ ಚುಕ್ಕೆಯುಳ್ಳ ಬೆಕ್ಕು ಚುಕ್ಕೆ ಜಿಂಕೆ ಮುಳ್ಳುಹಂದಿ ಸೇರಿದಂತೆ ಹಲವು ವನ್ಯಜೀವಿಗಳು ಪತ್ತೆಯಾಗಿವೆ. ಪ್ರಪಂಚದಲ್ಲಿ ನಾಲ್ಕು ಕೊಂಬಿನ ಏಕೈಕ ಪ್ರಾಣಿ ಕೊಂಡಕುರಿಯೂ ಕಂಡುಬಂದಿದೆ. ಒಂದೊಮ್ಮೆ ಚಿರತೆ ಸಂರಕ್ಷಣಾ ಪ್ರದೇಶ ಘೋಷಣೆಯಾದರೆ ಭವಿಷ್ಯದಲ್ಲಿ ಚಿರತೆ–ಮಾನವ ಸಂಘರ್ಷ ದನ–ಕರುಗಳ ಮೇಲಿನ ಚಿರತೆ ದಾಳಿ ತಡೆಗೆ ನೆರವಾಗುತ್ತದೆ. ಚಿರತೆಯಷ್ಟೇ ಅಲ್ಲದೇ ಹತ್ತಾರು ವನ್ಯಜೀವಿಗಳು ರಕ್ಷಣೆಯೊಂದಿಗೆ ಕಾಡಿನ ಸಂರಕ್ಷಣೆಯೂ ಆಗುತ್ತದೆ’ ಎನ್ನುತ್ತಾರೆ ಹೊಳೆಮತ್ತಿ ನೇಚರ್ ಫೌಂಡೇಷನ್ (ಎಚ್‌ಎನ್‌ಎಫ್) ಸಂಸ್ಥಾಪಕ ಸಂಜಯ್ ಗುಬ್ಬಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.