
ಕಲಬುರಗಿ: ಒಳಚರಂಡಿ ಸಮಸ್ಯೆ, ನೀರು ಪೂರೈಕೆ ಸಮಸ್ಯೆ, ಕಸ ವಿಲೇವಾರಿ ಸಂಕಟ, ರಸ್ತೆಯ ತಗ್ಗುಗುಂಡಿಗಳ ಚರ್ಚೆಗೆ ಸೋಮವಾರ ನಡೆದ ಕಲಬುರಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ವೇದಿಕೆಯಾಯಿತು.
ನಗರದ ಇಂದಿರಾ ಸ್ಮಾರಕ ಭವನದಲ್ಲಿ ಒಂದು ಗಂಟೆ ತಡವಾಗಿ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಸಾಮಾನ್ಯ ಸಭೆಯ ಕಲಾಪದ ‘ಪ್ರಶ್ನೋತ್ತರ’ ಅವಧಿಯಲ್ಲೇ ನಗರದ ಎಲ್ಲ ವಾರ್ಡ್‌ಗಳ ಸಮಸ್ಯೆಗಳ ಸುದೀರ್ಘ ಚರ್ಚೆ ನಡೆಯಿತು. ಹಾಜರಿದ್ದ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯ ಸಮಸ್ಯೆಗಳ ಸರಣಿಯನ್ನು ಅಧಿಕಾರಿಗಳ ಎದುರಿಗೆ ಬಿಚ್ಚಿಟ್ಟರು.
ಆರಂಭದಲ್ಲೇ ಗದ್ದಲ: ಕಲಾಪದ ಆರಂಭದಲ್ಲೇ ‘ಪಾಲಿಕೆ ಸದಸ್ಯರು ಕೇಳುವ ಮಾಹಿತಿ ಎಷ್ಟು ದಿನಗಳಲ್ಲಿ ಒದಗಿಸಬೇಕು? ನಿಯಮ ಏನು ಹೇಳುತ್ತೆ? ಮಾಹಿತಿಯೇ ಕೊಡದಿದ್ದರೆ ಚರ್ಚಿಸುವುದು ಹೇಗೆ’ ಎಂದು ಬಿಜೆಪಿಯ ವಿಜಯಕುಮಾರ ಸೇವಾಲಾನಿ, ಸದಸ್ಯ ಶಂಭುಲಿಂಗ ಬಳಬಟ್ಟಿ ಪ್ರಶ್ನಿಸಿದರು. ‘ಮಾಹಿತಿ ಕೊಟ್ಟೇ ಕಲಾಪ ಆರಂಭಿಸಬೇಕು’ ಎಂದು ವಿರೋಧ ಪಕ್ಷದ ಸದಸ್ಯರು ಮೇಯರ್ ಪೀಠದ ಎದುರು ಗದ್ದಲ ಸೃಷ್ಟಿಸಿದರು.
ಈ ವಿಷಯ ವಿರೋಧ ಪಕ್ಷ– ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಈ ಹಂತದಲ್ಲಿ ಸಭಾನಾಯಕ ಶೇಖಅಜ್ಮಲ್ ಗೋಲಾ ‘ಅಶಿಕ್ಷಿತರು’ ಎಂಬ ಪದ ಬಳಕೆ ಮಾಡಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಸದಸ್ಯರು ‘ಧಿಕ್ಕಾರ’ವನ್ನೂ ಕೂಗಿದರು. ಬಳಿಕ ಮೇಯರ್ ಮೈಕ್‌ಗಳನ್ನು ಬಂದ್ ಮಾಡಿಸಿದರು. ನಂತರ ಐದು ನಿಮಿಷ ಸದನವನ್ನು ಮುಂದೂಡಿದರು.
ಮತ್ತೆ ಕಲಾಪ ಆರಂಭವಾಗಲೂ ಗದ್ದಲ ನಡೆಯಿತು. ಬಳಿಕ ಆರಂಭವಾದ ಪ್ರಶ್ನೋತ್ತರ ಸಂಜೆ 6 ಗಂಟೆ ತನಕವೂ ಸಾಗಿತು.
‘ಮುಂದಿನ ಸಾಮಾನ್ಯ ಸಭೆಯೊಳಗೆ ನೀರಿನ ಸಮಸ್ಯೆ ಪರಿಹರಿಸದಿದ್ದರೆ, ಗಾಂಧಿ ಪುತ್ಥಳಿ ಎದುರು ಧರಣಿ ಕೂರಬೇಕಾಗುತ್ತದೆ’ ಎಂದು ವಾರ್ಡ್ 15ರ ಸದಸ್ಯೆ ನಜ್ಮಾಬೇಗಂ ಎಚ್ಚರಿಸಿದರು.
‘ನಮ್ಮ ವಾರ್ಡ್‌ನಲ್ಲಿ ಗರ್ಭಿಣಿಯೊಬ್ಬರ ಮನೆಯ ಒಳಚರಂಡಿ ಸಮಸ್ಯೆಯಾಗಿ ಆರು ದಿನಗಳಾದವು. ಇಂದಿಗೂ ಅದು ಪರಿಹಾರವಾಗಿಲ್ಲ. ನಾವು ಜನಕ್ಕೆ ಏನೆಂದು ಉತ್ತರಿಸಬೇಕು?’ ಎಂದು ವಾರ್ಡ್‌ನ 36ರ ಸದಸ್ಯ ಶಂಭುಲಿಂಗ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
‘2 ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಚಿತಾಯಂತ್ರ ಸ್ಥಾಪಿಸಲಾಗಿದೆ. ಈತನಕ ಅದನ್ನು ಆರಂಭಿಸಿಲ್ಲ. ಇದು ತೆರಿಗೆ ದುಡ್ಡು ಪೋಲಲ್ಲವೇ’ ಎಂದು ವಾರ್ಡ್ 35ರ ವಿಜಯಕುಮಾರ ಸೇವಲಾನಿ ಪ್ರಶ್ನಿಸಿದರು.
‘ಒಳಚರಂಡಿ, ಗಾರ್ಬೇಜ್ ಸಮಸ್ಯೆ ತೀವ್ರಗೊಂಡಿದೆ. ಅಧಿಕಾರಿಗಳಿಗೆ, ಸಿಬ್ಬಂದಿಗೆ ಫೋನ್ ಮಾಡಿ ‘ಬಾ... ಬಾ...’ ಎಂದು ಗೋಗರೆದರೂ ಬರಲ್ಲ. ಇಂದು ಮತದಾರರೊಬ್ಬರು ಕರೆ ಮಾಡಿ ತನ್ನ ಅಜ್ಜಿ ಸತ್ತಿದ್ದು, ಮನೆ ಎದುರಿನ ಕಸ ತೆಗೆಸಿ ಎಂದು ಗೋಗರೆಯುತ್ತಾರೆ. ನಾವ್ ಏನು ಮಾಡಬೇಕು?’ ಎಂದು ವಾರ್ಡ್ 23ರ ಸದಸ್ಯ ದಿಗಂಬರ ಭಾವುಕರಾದರು.
ತಮ್ಮ ವಾರ್ಡ್ ವ್ಯಾಪ್ತಿಯ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗೆಲ್ಲವೂ ಅಧಿಕಾರಿಗಳು ಮುಖ–ಮುಖ ನೋಡಿಕೊಳ್ಳುವುದು, ಆಯುಕ್ತರತ್ತ ನೋಡುವುದು ಮುಂದುವರಿದಿತ್ತು. ಇದಕ್ಕೆ ಮೇಯರ್ ಸೇರಿದಂತೆ ಪಾಲಿಕೆ ಸದಸ್ಯರು, ಅಸಮಾಧಾನ ವ್ಯಕ್ತಪಡಿಸಿದರು.
ಮೃತ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಲಾಪ ಆರಂಭಿಸಲಾಯಿತು. ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ ಕೆಲಕಾಲ ಕಲಾಪದಲ್ಲಿ ಪಾಲ್ಗೊಂಡಿದ್ದರು.
‘ಏಳು ದಿನಗಳಲ್ಲಿ ಮಾಹಿತಿ’ ‘
ಕೆಎಂಸಿ ಕಾಯ್ದೆ ಪ್ರಕಾರ ಪಾಲಿಕೆಯ ಸದಸ್ಯರಿಗೆ ಏಳು ದಿನಗಳಲ್ಲಿ ಮಾಹಿತಿ ನೀಡಬೇಕು. ಅದರಂತೆ ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡಲಾಗುವುದು’ ಎಂದು ಪಾಲಿಕೆಯ ಆಯುಕ್ತ ಅವಿನಾಶ ಶಿಂದೆ ಪಾಲಿಕೆ ಸದಸ್ಯರಿಗೆ ಸ್ಪಷ್ಟಪಡಿಸಿದರು. ‘ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಹಾಗೂ ಆಡಳಿತಾತ್ಮಕ ಕಾರಣಕ್ಕೆ ಪಾಲಿಕೆಯಲ್ಲಿ ಹಲವು ಅಧಿಕಾರಿ ಸಿಬ್ಬಂದಿ ವರ್ಗಾವಣೆ ನಡೆದಿದೆ. ಈ ನಿರ್ಧಾರವನ್ನು ಸದಸ್ಯರು ಪ್ರಶ್ನಿಸುವಂತಿಲ್ಲ’ ಎಂದು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ‘ಒಳಚರಂಡಿ ಸಮಸ್ಯೆ ಕಸ ವಿಲೇವಾರಿ ಸಮಸ್ಯೆ ಗಂಭೀರವಾಗಿದೆ. ಒಳಚರಂಡಿಗಳ ಶುಚಿತ್ವಕ್ಕೆ ಬೇಕಾದ ವಾಹನಗಳ ಹಾಗೂ ಕಸ ವಿಲೇವಾರಿ ವಾಹನಗಳ ಖರೀದಿ ಪ್ರಗತಿಯಲ್ಲಿದೆ. ಮುಂದಿನ 10 ದಿನಗಳಲ್ಲಿ ನಗರದ ರಸ್ತೆಗಳ ಸಂಪೂರ್ಣ ಸ್ಥಿತಿಗತಿ ಕುರಿತು ಆಡಿಟ್ ನಡೆಸಲಾಗುವುದು. ನಗರದಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಬೇಸಿಗೆಗೂ ಮುನ್ನ ದುರಸ್ತಿ ಮಾಡಲಾಗುವುದು’ ಎಂದರು.
ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಅಸ್ತು
ದಿನದ ಕಲಾಪದ ಕೊನೆಯ ನಿಮಿಷಗಳಲ್ಲಿ ಹಲವು ಸದಸ್ಯರ ವಿರೋಧದ ನಡುವೆಯೂ 272 ಮಳಿಗೆಗಳ ಮಹಾನಗರ ಪಾಲಿಕೆಯ ಹಳೆಯ ತರಕಾರಿ ಮಾರ್ಕೆಟ್ ನಿರ್ಮಿಸುವ ಪ್ರಸ್ತಾವಕ್ಕೆ ಪಾಲಿಕೆಯ ಸಾಮಾನ್ಯ ಸಭೆ ಅನುಮೋದನೆ ನೀಡಿತು. ‘ಮೀಸಲಾತಿ ಸಮಸ್ಯೆ ಬಗೆಹರಿಸಿಯೇ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬೇಕು’ ಎಂದು ಅನುಪಮಾ ಕಮಕನೂರ ಸಚಿನ್ ಶಿರವಾಳ ಯಲ್ಲಪ್ಪ ನಾಯಕೊಡಿ ವಿಶಾಲ ದರ್ಗಿ ಕೃಷ್ಣ ನಾಯಕ ಸೇರಿದಂತೆ ಹಲವರು ಒತ್ತಾಯಿಸಿದರು. ಆದರೂ ಮೇಯರ್ ವರ್ಷಾ ಜಾನೆ ಅವರು ಮಾರುಕಟ್ಟೆ ನಿರ್ಮಾಣ ಪ್ರಸ್ತಾವ ಅಂಗೀಕರಿಸಿರುವುದಾಗಿ ರೂಲಿಂಗ್ಸ್ ಕೊಟ್ಟರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.