ADVERTISEMENT

ಕಲಬುರಗಿ |‘ಕುಟುಂಬಕ್ಕಿಂತಲೂ ಪರಿವಾರ ಶ್ರೇಷ್ಠ’

21 ವರ್ಷ ಪೂರೈಸಿದ ವಿಕಾಸ ಅಕಾಡೆಮಿ; ಪರಿವಾರ ಮಿಲನ ಸಡಗರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:48 IST
Last Updated 12 ಜನವರಿ 2026, 7:48 IST
ಕಲಬುರಗಿ ಹೊರವಲಯದ ಸಿರನೂರಿನ ಭಾರತೀಯ ವಿದ್ಯಾಕೇಂದ್ರದಲ್ಲಿ  ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯರು, ಚಕೋರ ಮೆಹತಾ, ವೀಣಾ ಬನ್ನಂಜೆ, ಬಸವರಾಜ ಪಾಟೀಲ ಸೇಡಂ ಭಾಗವಹಿಸಿದ್ದರು
ಕಲಬುರಗಿ ಹೊರವಲಯದ ಸಿರನೂರಿನ ಭಾರತೀಯ ವಿದ್ಯಾಕೇಂದ್ರದಲ್ಲಿ  ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯರು, ಚಕೋರ ಮೆಹತಾ, ವೀಣಾ ಬನ್ನಂಜೆ, ಬಸವರಾಜ ಪಾಟೀಲ ಸೇಡಂ ಭಾಗವಹಿಸಿದ್ದರು   

ಕಲಬುರಗಿ: ‘ಕುಟುಂಬಕ್ಕಿಂತಲೂ ಪರಿವಾರ ಮುಖ್ಯ. ಕುಟುಂಬಕ್ಕೆ ಸೀಮಿತ ಅರ್ಥ ಇದ್ದರೆ, ಪರಿವಾರಕ್ಕೆ ವಿಶಾಲ ಅರ್ಥವಿದೆ’ ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಸಿರನೂರಿನ ಭಾರತೀಯ ವಿದ್ಯಾಕೇಂದ್ರದಲ್ಲಿ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸೇಡಂ, ವಿಕಾಸ ಅಕಾಡೆಮಿ ಕಲಬುರಗಿ ವತಿಯಿಂದ ಭಾನುವಾರ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಕುಟುಂಬದಲ್ಲಿ ಕೇವಲ ರಕ್ತ ಸಂಬಂಧಿಗಳಿದ್ದರೆ ಪರಿವಾರದಲ್ಲಿ ಎಲ್ಲ ಧರ್ಮ, ಮತ, ಪಂಥ, ಕುಲಗಳನ್ನು ಮೀರಿದ ಮನುಷ್ಯ ಬಾಂಧವ್ಯ ಮಾತ್ರ ಇರುತ್ತದೆ. ಇದನ್ನು ರಾಮಾಯಣ, ಮಹಾಭಾರತದ ದೃಷ್ಟಾಂತಗಳಿಂದ ನಾವು ಅರಿಯಬಹುದು. ಮಹಾಭಾರತದಲ್ಲಿ ಕುಟುಂಬ ಕದನವಿದ್ದರೆ, ರಾಮಾಯಣದಲ್ಲಿ ಪರಿವಾರದ ಸಂಬಂಧವಿದೆ. ಕುಟುಂಬದಿಂದ ವಿನಾಶ, ಪರಿವಾರದಿಂದ ಜಗತ್ತಿಗೆ ಒಳಿತಾಗುತ್ತದೆ’ ಎಂದರು.

ADVERTISEMENT

‘ರಕ್ತ ಸಂಬಂಧಕ್ಕಿಂತಲೂ ಪ್ರೇಮ ಮತ್ತು ಕರ್ತವ್ಯದ ಸಂಬಂಧವೇ ಶ್ರೇಷ್ಠ. ರಕ್ತ ಸಂಬಂಧಗಳು ಹಕ್ಕುಗಳಿಗಾಗಿ ಹೋರಾಡುತ್ತವೆ. ವಿರಕ್ತ ಸಂಬಂಧಗಳು ವಿಶ್ವಶಾಂತಿಗೆ ಶ್ರಮಿಸುತ್ತವೆ. ಸನಾತನ ಧರ್ಮದ ನಾಲ್ಕು ಆಶ್ರಮಗಳ ಪೈಕಿ ಗೃಹಸ್ಥಾಶ್ರಮವು ಪ್ರಮುಖವಾದದದ್ದು. ಎಲ್ಲ ಆಶ್ರಮಗಳಿಗೂ ಅದುವೇ ಮೂಲ ಕೇಂದ್ರ’ ಎಂದು ಹೇಳಿದರು.

ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಯಾವುದೇ ಒಂದು ಪ್ರದೇಶ ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣಾತ್ಮಕ ಬೋಧನೆ ಅಗತ್ಯ. ಇದರಿಂದ ಯುವಜನರ ಹೃದಯದಲ್ಲೊಂದು ಕಿಡಿಯ ಬೀಜಾಂಕುರವಾಗುತ್ತದೆ. ಇದು ಮೊದಲ ಹೆಜ್ಜೆ. ನಿಜ ಜೀವನದಲ್ಲಿ ಈ ಕಿಡಿ ಕಾರ್ಯರೂಪಕ್ಕೆ ಬರದೇ ಇದ್ದರೆ, ಅದು ನಿಧಾನವಾಗಿ ಶಾಂತವಾಗುತ್ತದೆ. ನಮಗೆ ಇಂಥ ನಿಷ್ಕ್ರಿಯ ಪ್ರೇರಣೆಯಲ್ಲಿ ವಿಶ್ವಾಸವಿಲ್ಲ. ಆದರೆ, ಕಿಡಿಯ ರೂಪಾಂತರದಲ್ಲಿ ವಿಶ್ವಾಸವಿಟ್ಟು ಕಾರ್ಯಶೀಲವಾಗುವುದರಲ್ಲಿ ಬಲವಾದ ನಂಬಿಕೆಯಿದೆ’ ಎಂದರು.

ಎಸ್.ಆರ್.ಎನ್ ಮೆಹತಾ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಚಕೋರ ಮೆಹತಾ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಅನುರಾಧಾ ಪಾಟೀಲ, ವಿಶ್ವಸ್ಥ ಮಾರ್ತಾಂಡ ಶಾಸ್ತ್ರಿ, ಶಾಂತರೆಡ್ಡಿ, ಅಂಬಿಕಾ ಶೆಳ್ಳಗಿ, ಗುಂಡಪ್ಪ ಪಟ್ಟಣ, ವಿಶ್ರಾಂತ ಕುಲಪತಿ ಪ್ರೊ. ದಯಾನಂದ ಅಗಸರ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ರಾಷ್ಟ್ರಧರ್ಮ ಪರಿಪಾಲಿಸುವ ಭವಿಷ್ಯದ ಯುವ ನಾಯಕರನ್ನು ರೂಪಿಸಲು ಸೇಡಂನ ನೃಪತುಂಗ ಪದವಿ ಕಾಲೇಜು ಆವರಣದಲ್ಲಿ ಅನ್ವಿಕ್ಷಿಕಿ ಅಧ್ಯಯನ ಕೇಂದ್ರ ಜ‌.23ರಂದು ಆರಂಭಿಸಲಾಗುತ್ತಿದೆ
ಬಸವರಾಜ ಪಾಟೀಲ ಸೇಡಂ ಸಂರಕ್ಷಕ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ
ಸಾಮಾಜಿಕ ಪರಿವರ್ತನೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯೇ ಇದಕ್ಕೆ ನಿದರ್ಶನ
ಚೆನ್ನವೀರ ಶಿವಾಚಾರ್ಯ ಹಾರಕೂಡ ಸಂಸ್ಥಾನ ಮಠ ಬಸವಕಲ್ಯಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.