ವರ್ಷಾ ಜಾನೆ, ತೃಪ್ತಿ ಲಾಖೆ
ಕಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್–ಉಪಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್ ಸದಸ್ಯ ವರ್ಷಾ ಜಾನೆ ಮಹಾನಗರ ಪಾಲಿಕೆಯ 23ನೇ ಮೇಯರ್ ಆಗಿ ಗುರುವಾರ ಆಯ್ಕೆಯಾದರು. ಕಾಂಗ್ರೆಸ್‌ನ ತೃಪ್ತಿ ಲಾಖೆ ಅವರಿಗೆ ಉಪ ಮೇಯರ್ ಸ್ಥಾನ ಒಲಿಯಿತು.
ನಗರದ ಇಂದಿರಾ ಗಾಂಧಿ ಸ್ಮಾರಕ ಭವನದಲ್ಲಿ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾ ಅಧಿಕಾರಿ, ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ನೇತೃತ್ವದಲ್ಲಿ ಮೇಯರ್–ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ವರ್ಷಾ ಜಾನೆ ಹಾಗೂ ಬಿಜೆಪಿಯ ಗಂಗಮ್ಮ ಮನ್ನೊಳಿ ಸ್ಪರ್ಧಾ ಕಣದಲ್ಲಿದ್ದರು. ಚುನಾವಣೆಯಲ್ಲಿ ಜೆಡಿಎಸ್‌ನ ನಾಲ್ವರು ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರಿಂದ 36 ಮತಗಳೊಂದಿಗೆ ವರ್ಷಾ ಜಾನೆ ವಿಜೇತರಾಗಿ ಹೊರಹೊಮ್ಮಿದರು.
ಜೆಡಿಎಸ್ ಜೊತೆಗಿನ ಮೈತ್ರಿ ನೆಚ್ಚಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಗಂಗಮ್ಮ ಬರೀ 27 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು.
ಉಪಮೇಯರ್ ಸ್ಥಾನಕ್ಕೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ನಿಂದ ತೃಪ್ತಿ ಲಾಖೆ, ಜೆಡಿಎಸ್‌ನಿಂದ ವಿಜಯಲಕ್ಷ್ಮಿ ರೆಡ್ಡಿ ಹಾಗೂ ಬಿಜೆಪಿಯಿಂದ ಪಾರ್ವತಿ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ತೃಪ್ತಿ ಲಾಖೆ 33 ಮತಗಳನ್ನು ಪಡೆದು ವಿಜಯ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.