ADVERTISEMENT

ಕಲಬುರಗಿಯಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜನೆ; ಡಿ.ಸಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 6:32 IST
Last Updated 16 ಫೆಬ್ರುವರಿ 2023, 6:32 IST
ಯಶವಂತ‌ ವಿ. ಗುರುಕರ್
ಯಶವಂತ‌ ವಿ. ಗುರುಕರ್   

ಕಲಬುರಗಿ: ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಸಮ್ಮೇಳನಕ್ಕೆ ಎಲ್ಲರೂ ಹಾಜರಿದ್ದು ಫಲಾನುಭವಿಗಳನ್ನು ಕರೆತರುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಯಶವಂತ‌ ವಿ. ಗುರುಕರ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು,‘ಅರ್ಹ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಮ್ಮೇಳನ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಯೋಜಿತ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ’ ಎಂದರು.

ಆಯುಷ್ಮಾನ ಭಾರತ ಪ್ರಧಾನಮಂತ್ರಿ ಆರೋಗ್ಯ ಕಾರ್ಡ್‌ ವಿತರಣೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ಅವರಿಂದ ಮಾಹಿತಿ ಪಡೆದರು. ಕಾರ್ಮಿಕರ ಕಾರ್ಡ್ ವಿತರಣೆ ಮತ್ತು ಮಹಿಳೆಯರಿಗೆ ಪ್ರೋತ್ಸಾಹ ಧನ ಸಿಗುವ ಬಗ್ಗೆಯೂ ತಿಳಿದುಕೊಂಡರು.

ADVERTISEMENT

ಸಮ್ಮೇಳನದಲ್ಲಿ ಫಲಾನುಭವಿಗಳಿಗೆ ಲೇಬರ್ ಕಾರ್ಡ್ ವಿತರಿಸಲು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಅವರಿಗೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮಾತನಾಡಿ, ‘ಜಿಲ್ಲೆಯಲ್ಲಿ ಇನ್ನೂ ಎರಡು ಸಾವಿರ ಪಡಿತರ ಚೀಟಿಗಳನ್ನು ವಿತರಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಮಾತನಾಡಿ, ‘ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹಾಗೂ ನರೇಗಾ, ವಸತಿ, ಇತರೆ ಯೋಜನೆಗಳ ಫಲಾನುಭವಿಗಳ ಪಟ್ಟಿ ಮಾಡಬೇಕು’ ಎಂದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ. ಶುಭಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕಿಶೋರ ಕುಮಾರ ದುಬೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ, ಡಿಆರ್‌ಡಿಎ ಯೋಜನಾ ನಿರ್ದೇಶಕ ಬಿ.ಜಗದೇವ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮೂದ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.