ADVERTISEMENT

ಕಲಬುರಗಿ: ಮುಖತಜ್ಞರನ್ನು ಮೇಳೈಸಿದ ‘ಮುಖಾಂತರ’ ಸಮ್ಮೇಳನ

ಎಒಎಂಎಸ್‌ಐ ರಾಜ್ಯ ಘಟಕದ 12ನೇ ವಾರ್ಷಿಕ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 7:35 IST
Last Updated 14 ಸೆಪ್ಟೆಂಬರ್ 2025, 7:35 IST
<div class="paragraphs"><p>ಕಲಬುರಗಿಯ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಭಾರತೀಯ ಬಾಯಿ ಆರೋಗ್ಯ ಮತ್ತು ದವಡೆ–ಮುಖತಜ್ಞರ ಸಂಸ್ಥೆಯ (ಎಒಎಂಎಸ್‌ಐ) ರಾಜ್ಯ ಘಟಕದ 12ನೇ ವಾರ್ಷಿಕ ‘ಮುಖಾಂತರ’ ಸಮ್ಮೇಳನವನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಶನಿವಾರ ಉದ್ಘಾಟಿಸಿದರು. </p></div>

ಕಲಬುರಗಿಯ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಭಾರತೀಯ ಬಾಯಿ ಆರೋಗ್ಯ ಮತ್ತು ದವಡೆ–ಮುಖತಜ್ಞರ ಸಂಸ್ಥೆಯ (ಎಒಎಂಎಸ್‌ಐ) ರಾಜ್ಯ ಘಟಕದ 12ನೇ ವಾರ್ಷಿಕ ‘ಮುಖಾಂತರ’ ಸಮ್ಮೇಳನವನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಶನಿವಾರ ಉದ್ಘಾಟಿಸಿದರು.

   

ಕಲಬುರಗಿ: ನಗರದ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಭಾರತೀಯ ಬಾಯಿ ಆರೋಗ್ಯ ಮತ್ತು ದವಡೆ–ಮುಖತಜ್ಞರ ಸಂಸ್ಥೆಯ (ಎಒಎಂಎಸ್‌ಐ) ರಾಜ್ಯ ಘಟಕದ 12ನೇ ವಾರ್ಷಿಕ ಸಮ್ಮೇಳನವು ‘ಮುಖಾಂತರ’ ಮುಖತಜ್ಞ ವೈದ್ಯರನ್ನು ಮೇಳೈಸಿದೆ.

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬಾಯಿ ಮತ್ತು ದವಡೆ–ಮುಖ ಶಸ್ತ್ರಚಿಕಿತ್ಸೆ ವಿಭಾಗದ ಸಹಯೋಗದಲ್ಲಿ ಆಯೋಜಿಸಿರುವ ‘ಮುಖಾಂತರ’ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಲಾಯಿತು. 380 ಪ್ರತಿನಿಧಿಗಳು, 20ಕ್ಕೂ ಹೆಚ್ಚು ಖ್ಯಾತ ವೈದ್ಯರು, ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರು ಹೆಸರು ನೋಂದಾಯಿಸಿ ಪಾಲ್ಗೊಂಡಿದ್ದಾರೆ.

ADVERTISEMENT

ಸಮ್ಮೇಳನಕ್ಕೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿ, ‘ಮುಖದ ಆಘಾತ, ಸೀಳುತುಟಿ ಶಸ್ತ್ರಚಿಕಿತ್ಸೆ ಸೇರಿ ಸಂಕೀರ್ಣ ದವಡೆ ಮತ್ತು ಮುಖದ ವಿರೂಪ ಚಿಕಿತ್ಸೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದಲ್ಲಿ ಮೊದಲ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ನೋಂದಾಯಿತ ಪ್ರತಿನಿಧಿಗಳು ಸಮ್ಮೇಳನದ ಲಾಭ ಪಡೆಯಬೇಕು’ ಎಂದು ಸಲಹೆ ನೀಡಿದರು.

ಎಒಎಂಎಸ್‌ಐ ರಾಜ್ಯ ಘಟಕದ ಅಧ್ಯಕ್ಷ ಡಾ.ಪದ್ಮರಾಜ ಹೆಗಡೆ ಮಾತನಾಡಿ, ‘ಅಪಘಾತವಾದ ಮುಖದ ಗಾಯಗಳ ಶಸ್ತ್ರಚಿಕಿತ್ಸೆ ಸವಾಲಿನ ಕೆಲಸ. ಮುಖದ ನ್ಯೂನತೆ ಸೇರಿ ಹೊಸ ಸವಾಲುಗಳಿಗೆ ಸಿದ್ಧತೆ ಮತ್ತು ತಂತ್ರಜ್ಞಾನ ಬಳಕೆ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಈ ರೀತಿಯ ವೇದಿಕೆಗಳು ಮುಂದಿನ ಪೀಳಿಗೆಗೆ ನಮ್ಮ ಅನುಭವ, ಕೌಶಲವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತವೆ. ರೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನೀಡುವ ಮೂಲಕ ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಬೇಕು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವುದು ಈ ಸಮ್ಮೇಳನದ ಧ್ಯೇಯವಾಗಿದೆ’ ಎಂದರು.

ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಡಾ.ರಾಮದಾಸ್‌ ಬಾಲಕೃಷ್ಣ ಮಾತನಾಡಿದರು. ಸಮ್ಮೇಳನದಲ್ಲಿ ಡಾ.ಮುಸ್ತಾಫಾ ಖಾದರ್‌ ಅವರು ದೃಷ್ಟಿಕೋನ ಭಾಷಣ ಮಾಡಿದರು.

ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ.ನಮೋಶಿ ಅಧ್ಯಕ್ಷತೆ ವಹಿಸಿದ್ದರು. ಜೀವಮಾನದ ಸಾಧನೆಗಾಗಿ ಡಾ.ರಾಜೇಂದ್ರ ದೇಸಾಯಿ, ಡಾ.ಕೆ.ಬಿ. ಶಂಕರಾಂಬಾ, ಕರ್ನಲ್‌ ಡಾ.ಸುರೇಶ್‌ ಮೆನನ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಚ್‌ಕೆಇ ಸಂಸ್ಥೆ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಪಾಟೀಲ, ಅನೀಲಕುಮಾರ ಪಟ್ಟಣ, ಡಾ.ಕಿರಣ ದೇಶಮುಖ, ನಿಶಾಂತ ಜಿ.ಎಲಿ, ನಾಗೇಂದ್ರ ಎಸ್‌.ಮಂಠಾಳೆ, ಮಹಾದೇವಪ್ಪ ವಿ.ರಾಂಪುರೆ, ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ, ಗುರುಲಿಂಗಪ್ಪ ಪಾಟೀಲ, ಪ್ರಾಚಾರ್ಯೆ ಡಾ.ಜಯಶ್ರೀ ಮುದ್ದಾ, ಡಾ.ವೀರೇಂದ್ರ ಪಾಟೀಲ, ಡಾ.ಮನುಪ್ರಸಾದ ಎಸ್‌., ಸಮ್ಮೇಳನ ಸಂಘಟನಾ ಅಧ್ಯಕ್ಷ ಡಾ.ಆಕಿಬ್ ಹಾಸ್ಮಿ, ಮಂಜುನಾಥ ರೆಡ್ಡಿ ಉಪಸ್ಥಿತರಿದ್ದರು.

ಎಒಎಂಎಸ್‌ಐ ರಾಜ್ಯ ಕಾರ್ಯದರ್ಶಿ ಡಾ.ನಾಗರಾಜಪ್ಪ ದಾಸ್‌ ವಾರ್ಷಿಕ ವರದಿ ಓದಿದರು. ಡಾ.ಸ್ಮಿತಾ ಪಾಟೀಲ ಮತ್ತು ಡಾ.ಲಕ್ಷ್ಮಿ ಮಚ್ಚೆಟ್ಟಿ ನಿರೂಪಿಸಿದರು. ಡಾ.ಸತೀಶಕುಮಾರ ಜಿ.ಪಾಟೀಲ ವಂದಿಸಿದರು.

ಬಾಯಿ ಆರೋಗ್ಯ ಮತ್ತು ದವಡೆ–ಮುಖತಜ್ಞರು ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ಈ ಸಮ್ಮೇಳನ ಜ್ಞಾನ ಮತ್ತು ಈ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳನ್ನು ಹಂಚಿಕೊಳ್ಳಲು ವೇದಿಕೆಯಾಗಲಿದೆ
ರಾಜಾ ಬಿ.ಭೀಮಳ್ಳಿ ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ

ಶಸ್ತ್ರಚಿಕಿತ್ಸೆ ಉಪಕರಣ, ಔಷಧ ಪ್ರದರ್ಶನ

‘ಮುಖಾಂತರ’ ಸಮ್ಮೇಳನ ಅಂಗವಾಗಿ ವಿವಿಧ ಕಂಪನಿಗಳ 25ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಅಪಘಾತ ಮತ್ತು ಕ್ಯಾನ್ಸರ್‌ ಸಂದರ್ಭಗಳಲ್ಲಿ ರೋಗಿಗಳಿಗೆ ಅಳವಡಿಸುವ ಅತ್ಯಾಧುನಿಕ ಉಪಕರಣಗಳು ಮುಖದ ನ್ಯೂನತೆಯ ಎಲ್ಲಾ ತರಹದ ಸಾಧನ ಮತ್ತು ಔಷಧಗಳನ್ನು ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಮಾರಾಟ ಮಾಡಲಾಗುತ್ತಿದೆ. ಕಲಬುರಗಿಯ ಫ್ಯೂಚರ್‌ ಮ್ಯಾನ್‌ಕೈಂಡ್‌ ಆ್ಯಕ್ಸಿಯಂಟ್‌ ಲೈಫ್‌ ಸೈನ್ಸ್‌ನ ಔಷಧಗಳು ಇಂಡೊಕೊ ಗುಲಬರ್ಗಾ ಡೆಂಟಲ್‌ ಆ್ಯಂಡ್‌ ಸರ್ಜಿಕಲ್ಸ್‌ ಕಾನ್‌ಫಿಡೆಂಟ್‌ ಡೆಂಟಲ್‌ ಲ್ಯಾಬ್‌ ಬೆಂಗಳೂರಿನ ಗ್ರೂಪ್‌ ಫಾರ್ಮಾಸುಟಿಕಲ್‌ ಲಿಮಿಟೆಡ್‌ನ ಹಲ್ಲಿನ ಪೇಸ್ಟ್‌ಗಳು ಟ್ರೊಯೊಕಾ ಟಸ್ಕ್‌ ಸರ್ಜಿಕಲ್ಸ್‌ ರಿಫರ್ಮ್‌ ಕೆಎಲ್‌ಎಸ್‌ ಮಾರ್ಟಿನ್‌ ಟೆಕ್ನೊ ಡೆಂಟಲ್‌ ಆರ್ಟ್ಸ್‌ ಕೋರಿಯನ್‌ ಕಂಪನಿ ಡೆಂಟೀಸ್‌ ಮೊನೊ ಇಂಪ್ಲಾಂಟ್‌ ಬ್ಯಾಡಗಿಯ ಬಿ.ಕೆ.ಸರ್ಜಿಕಲ್ಸ್‌ ಮುಂಬೈನ ಕ್ವಿಕ್‌ಡೆಂಟ್‌ ಮತ್ತು ನಿಯೊ ಇಂಪ್ಲಾಂಟ್ಸ್‌ ಎ.ಕೆ.ಸರ್ಜಿಕಲ್ಸ್‌ ಪುಣೆಯ ಎಸ್‌.ಕೆ.ಸರ್ಜಿಕಲ್ಸ್‌ ಚನ್ನೈನ ಸಿರಾಗ್‌ ಸರ್ಜಿಕಲ್ಸ್‌ ಗುಜರಾತ್‌ನ ವಿ.ಆರ್‌.ಆರ್ಥೋ ಮತ್ತು ಆರ್ಥೋ ಮ್ಯಾಕ್ಸ್‌ ನೊವಾಲೇಸ್‌ನ ಡೀಲರ್‌ ಧನಲಕ್ಷ್ಮಿ ಡೆಂಟಲ್‌ ಡಿಪಾಟ್‌ ಲೇಸರ್‌ ಚಿಕಿತ್ಸೆ ಮಾಹಿತಿ ಮಳಿಗೆ ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.