ಕಲಬುರಗಿಯಲ್ಲಿ ಶನಿವಾರ ಇಎಸ್‌ಐಸಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 4ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಮದಿಹಾ ನಮೀರಾ ಬೇಗಂ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಪದವಿ ಪ್ರದಾನ ಮಾಡಿದರು.
ಪ್ರಜಾವಾಣಿ ಚಿತ್ರ
ಕಲಬುರಗಿ: ‘ದಂತ ವೈದ್ಯರು ಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಆತ್ಮವಿಶ್ವಾಸವೂ ತುಂಬುತ್ತಾರೆ. ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು. ರೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ, ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸಲಹೆ ನೀಡಿದರು.
ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಇಎಸ್‌ಐಸಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಆರೋಹಣ’ 4ನೇ ವರ್ಷದ ಪದವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘28 ವರ್ಷಗಳ ಹಿಂದೆ ನಾನು ನಿಮ್ಮಂತೆ ತುಮಕೂರಿನ ಸಿದ್ಧಾರ್ಥ ಡೆಂಟಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಓದುವ ವೇಳೆ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಕಲಿತುಕೊಂಡಿದ್ದೇನೆ. ಜೀವನದಲ್ಲಿ ಎದುರಾದ ಅವಮಾನಗಳನ್ನು ಮೆಟ್ಟಿನಿಂತು ಇಂದು ಮಹಿಳಾ ಆಯೋಗದ ಅಧ್ಯಕ್ಷಳಾಗಿದ್ದೇನೆ’ ಎಂದು ತಮ್ಮ ಜೀವನದ ಏಳುಬೀಳುಗಳನ್ನು ಹೇಳಿಕೊಂಡರು.
ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಅಪ್ಸರಾ ಎಸ್. ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಪದವಿ ಪ್ರದಾನ ಮಾಡಿದರು.
‘ಜೀವನದಲ್ಲಿ ಎದುರಾಗುವ ವೈಫಲ್ಯ, ಅವಮಾನ ಮತ್ತು ಸವಾಲುಗಳಿಗೆ ಎದೆಗುಂದಬಾರದು. ಕಲಿಕೆ ನಿರಂತರವಾಗಿರುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ಯಾವುದೇ ಸಮಸ್ಯೆ ಬಂದರೂ ತಮ್ಮ ವೃತ್ತಿಯಿಂದ ಹಿಂದೆ ಸರಿಯಬಾರದು. ಯಾವುದೇ ತುರ್ತು ಪರಿಸ್ಥಿತಿ ಇದ್ದಾಗ 112 ಸಂಖ್ಯೆಗೆ ಕರೆ ಮಾಡಬೇಕು. ಸುರಕ್ಷಾ ಆ್ಯಪ್ ಬಳಸಿ’ ಎಂದು ಸಲಹೆ ನೀಡಿದರು.
‘ಇಂದಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಎಚ್ಚರಿಕೆಯಿಂದ ಮೊಬೈಲ್ ಬಳಸಬೇಕು. ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚಿತ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದು’ ಎಂದು ತಿಳಿಸಿದರು.
ಹೈದರಾಬಾದ್ ಸನತ್‌ನಗರದ ಇಎಸ್‌ಐಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ಶಿರಿಷ್‌ಕುಮಾರ್ ಜಿ.ಚವಾಣ್ ಮಾತನಾಡಿದರು. ಆಸ್ಪತ್ರೆಯ ಡೀನ್ ಡಾ.ಎಸ್.ವಿ. ಸಂತೋಷ ಕ್ಷೀರಸಾಗರ, ವೈದ್ಯಕೀಯ ಅಧೀಕ್ಷಕ ಡಾ.ಎಚ್.ಎಸ್. ಕಡ್ಲಿಮಟ್ಟಿ ಉಪಸ್ಥಿತರಿದ್ದರು.
ಇಎಸ್‌ಐಸಿ ಡೆಂಟಲ್ ಕಾಲೇಜು ಡೀನ್ ಡಾ.ಪ್ರಶಾಂತ ಬಿ.ಪಾಟೀಲ ಸ್ವಾಗತಿಸಿದರು. ಡಾ.ಮೊಹಮ್ಮದ್ ಅಲಿಮೊದ್ದೀನ್ ನಿರೂಪಿಸಿದರು. ಡಾ.ಸಂತೋಷ ವಂದಿಸಿದರು.
47 ಜನರಿಗೆ ಪದವಿ ಪ್ರದಾನ
‘ಆರೋಹಣ’ ಸಮಾರಂಭದಲ್ಲಿ ಡಾ.ಅಪ್ಸರಾ ಎಸ್. ಡಾ.ಮದಿಹಾ ನಮೀರಾ ಬೇಗಂ ಡಾ.ಆಫ್ರಿನ್ ತಾಜ್ ಡಾ.ಐಶ್ವರ್ಯಾ ಡಾ.ಅಕ್ಷತಾ ಸೇರಿದಂತೆ ಒಟ್ಟು 47 ಜನರಿಗೆ ಪದವಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ತಮ್ಮ ತಂದೆ–ತಾಯಿಯೊಂದಿಗೆ ವೇದಿಕೆ ಮೇಲೆ ಬಂದು ಪದವಿ ಪ್ರಮಾಣಪತ್ರ ಮತ್ತು ಭಾವಚಿತ್ರ ಒಳಗೊಂಡ ಫಲಕವನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಪ್ರಥಮ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಾ.ಲಿಯಾ ಟಿ.ಪಾಲ್ ಡಾ.ರೆಹಾನ್ ಮಜತಬಾ ದ್ವಿತೀಯ ಮತ್ತು ನಾಲ್ಕನೇ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಾ.ನಿಂಗಮ್ಮ ಮೂರನೇ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ಡಾ.ಅಂಜಲಿ ಅವರಿಗೆ ಗಣ್ಯರು ಸನ್ಮಾನಿಸಿ ಪ್ರಮಾಣಪತ್ರ ಮತ್ತು ಫಲಕ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.