ಕಲಬುರಗಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬಹುಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳು ಹಾಗೂ ಕಾಮಗಾರಿಗಳಿಗೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು ಚಾಲನೆ ನೀಡಿದರು
ಕಲಬುರಗಿ: ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 222.73 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿ, ₹ 421 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಜಿಮ್ಸ್ ಆವರಣದ ₹ 216.53 ಕೋಟಿ ಮೊತ್ತದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ₹ 6.20 ಕೋಟಿ ಮೊತ್ತದ ಬ್ರಾಕಿಥೆರಪಿ ಘಟಕವನ್ನು ಉದ್ಘಾಟನೆ ಮಾಡಿದರು.
ತಲಾ ₹ 92 ಕೋಟಿ ವೆಚ್ಚದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಶಾಖಾ ಘಟಕ, ₹ 76 ಕೋಟಿ ವೆಚ್ಚದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ 200 ಹಾಸಿಗೆಗಳ ಕಟ್ಟಡ ವಿಸ್ತರಣೆ, ₹ 53 ಕೋಟಿ ವೆಚ್ಚದ ಜಿಟಿಟಿಸಿ ಕಟ್ಟಡ, ₹ 21 ಕೋಟಿ ವೆಚ್ಚದ ಸರ್ಕಾರಿ ಐಟಿಐ (ಪುರುಷ) ಕಾಲೇಜು ಕಟ್ಟಡದ ಉನ್ನತೀಕರಣ, ₹ 50 ಕೋಟಿ ವೆಚ್ಚದ ಅಲೈಡ್ ಹೆಲ್ತ್ ಸೈನ್ಸ್ ಸಂಸ್ಥೆ, ₹23 ಕೋಟಿ ವೆಚ್ಚದ ಆರೋಗ್ಯ ಭವನ ಹಾಗೂ ಸರ್ಕಾರಿ ಪದವಿ ಕಾಲೇಜಿನಲ್ಲಿ ಆಡಿಟೋರಿಯಂ ನಿರ್ಮಾಣಕ್ಕೂ ಚಾಲನೆ ಕೊಟ್ಟರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ರಾಮಲಿಂಗಾ ರೆಡ್ಡಿ, ಎಂ.ಸಿ. ಸುಧಾಕರ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ರೇಷ್ಮೆ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಡಾ.ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ ಸೇರಿ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.