
ಕಲಬುರಗಿಯ ಹಳೇ ಜೇವರ್ಗಿ ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿರುವುದು
ಪ್ರಜಾವಾಣಿ ಚಿತ್ರ
ಕಲಬುರಗಿ: ನಗರದ ಹಳೇ ಜೇವರ್ಗಿ ರಸ್ತೆಯ ಇಸಾಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎದುರಿಗೆ ಗುಂಡಿಗಳು ಬಿದ್ದಿದ್ದು, ವಾಟರ್ ಟ್ಯಾಂಕ್ ಸಮೀಪದ ರಸ್ತೆ ಹದಗೆಟ್ಟಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ. ವೇಗವಾಗಿ ರಾಮಮಂದಿರದತ್ತ ಸಾಗುವ ವಾಹನಗಳು ಈ ಭಾಗದಲ್ಲಿ ಕಡ್ಡಾಯವಾಗಿ ವೇಗ ತಗ್ಗಿಸಿಕೊಂಡು ಸರದಿ ಹಿಡಿದು ತೆವಳಿಕೊಂಡು ಹೋಗುವಂತಾಗಿದೆ.
ಇಸಾಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎದುರಿನ ಗುಂಡಿಗಳು ವಿಸ್ತಾರಗೊಂಡು ಹೊಂಡಗಳಾಗಿ ಬದಲಾಗಿವೆ. ಜೀವನ ಪ್ರಕಾಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಎದುರಿನಲ್ಲಿರುವ ಒಳಚರಂಡಿ ಚೇಂಬರ್ ಉಕ್ಕಿ ಹರಿಯುತ್ತ ಆ ಗುಂಡಿಗಳನ್ನು ಆವರಿಸುತ್ತಿದೆ. ರಸ್ತೆಯಲ್ಲಿನ ಗುಂಡಿಗಳು ವಾಹನ ಸವಾರರನ್ನು ಹೈರಾಣಾಗಿಸಿದರೆ, ಅದರಲ್ಲಿ ತುಂಬಿಕೊಳ್ಳುತ್ತಿರುವ ಚರಂಡಿ ನೀರು ರಸ್ತೆ ಬದಿಯ ಅಂಗಡಿಗಳ ಮಾಲೀಕರ ನೆಮ್ಮದಿ ಕಸಿದಿದೆ. ರಸ್ತೆ ಗುಂಡಿ ಹಾಗೂ ಚರಂಡಿ ನೀರು ಸೇರಿಕೊಂಡು ರಸ್ತೆಯ 45 ಅಡಿಗಳಷ್ಟು ಆಪೋಶನ ಪಡೆದು, ವಾಹನಗಳ ಬಳಕೆಗೆ ಬರೀ ನಾಲ‌್ಕೈದು ಅಡಿಗಳಷ್ಟು ಮಾತ್ರವೇ ಉಳಿದಿದೆ.
‘ಹಳೇ ಜೇವರ್ಗಿ ರಸ್ತೆಯ ಗುಂಡಿಗಳ ದುರಸ್ತಿ ಮುಗಿಯದ ಕತೆ. ಚರಂಡಿ ನೀರು ನಿಂತು–ನಿಂತು ರಸ್ತೆ ಹದಗೆಡುತ್ತಿದೆ. ಚಿಕ್ಕ ಗುಂಡಿ ಹೊಂಡದಷ್ಟು ದೊಡ್ಡದಾಗಿದೆ. ಹೊಂಡದಲ್ಲಿ ಗಲೀಜು ನೀರು ನಿಲ್ಲುತ್ತದೆ. ದ್ವಿಚಕ್ರ ವಾಹನಗಳ ಸವಾರರು ನಿತ್ಯ ಒಬ್ಬರಿಲ್ಲ ಒಬ್ಬರು ಜಾರಿ ಬೀಳುವುದು ತಪ್ಪಿಲ್ಲ. ಈ ಕಡೆಗೆ ಪಾದಚಾರಿ ಮಾರ್ಗವೂ ಇಲ್ಲ. ಜನರು ಪರದಾಡುವುದು ನಿತ್ಯದ ಗೋಳು. ಗುಂಡಿಗಳು ಹೆಚ್ಚಿದ್ದರಿಂದ ದೂಳೂ ಹೆಚ್ಚಿದೆ. ನಿತ್ಯ ಎರಡ್ಮೂರು ಬಾರಿ ಟೇಬಲ್ ಮೇಲಿನ ದೂಳು ಒರೆಸುತ್ತಿದ್ದೆ. ಇದೀಗ ಹತ್ತು ಬಾರಿ ಒರೆಸಿದರೂ, ಮತ್ತೆ ದೂಳಿನ ಕಾಟ ತಪ್ಪುತ್ತಿಲ್ಲ’ ಎಂದು ಎ.ಜೆ.ಮೆಡಿಕಲ್ಸ್‌ನ ಶರತ ಜಮಶೆಟ್ಟಿ ಹಾಗೂ ಜೆಮಶೆಟ್ಟಿ ವಾಣಿಜ್ಯ ಮಳಿಗೆಗಳ ಮಾಲೀಕ ಅಶೋಕ ಜೆಮಶೆಟ್ಟಿ ಬೇಸರಿಸುತ್ತಾರೆ.
ವ್ಯಾಪಾರ ಕಸಿದ ದುರ್ನಾತ: ಹಳೇ ಜೇವರ್ಗಿ ರಸ್ತೆಯ ಜೀವನ ಪ್ರಕಾಶ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಎದುರಿನ ಒಳಚರಂಡಿ ಉಕ್ಕೇರಿ ದುರ್ನಾತ ಬೀರುತ್ತಿದ್ದು, ಇಲ್ಲಿನ ಮಳಿಗೆಯಲ್ಲಿರುವ ಅಂಗಡಿಗಳ ವಹಿವಾಟಿಗೂ ಹೊಡೆತ ಬಿದ್ದಿದೆ.
‘ಒಳಚರಂಡಿ ದುರ್ನಾತದಿಂದ ಮೂಗಿನಲ್ಲಿನ ಉತ್ತಮ ಬ್ಯಾಕ್ಟೇರಿಯಾಗಳೆಲ್ಲ ಸತ್ತೇ ಹೋದಂತೆ ಅನಿಸುತ್ತಿದೆ. ಉಗುಳಿ–ಉಗುಳಿ ನಾಲಿಗೆ ಒಣಗುತ್ತಿದೆ. ಚರಂಡಿ ಉಕ್ಕೇರಲು ಶುರುವಾಗಿ ತಿಂಗಳ ಮೇಲಾಯಿತು. ದುರ್ನಾತ ಶುರುವಾದಾಗಿನಿಂದ ವ್ಯಾಪಾರ ಶೇ 50ರಷ್ಟು ತಗ್ಗಿದೆ. ಶಾಲಾ ವಿದ್ಯಾರ್ಥಿಗಳು ಅನಿವಾರ್ಯ ಇದ್ದಾಗಷ್ಟೇ ನಮ್ಮಲ್ಲಿ ಖರೀದಿಗೆ ಬರುವಂತಾಗಿದೆ. ದುರ್ನಾತ ನೋಡಿದರೆ ಇಲ್ಲಿಗೆ ಬರಲೇ ಬಾರದು ಎನಿಸುತ್ತದೆ, ಆದರೆ, ಹೊಟ್ಟೆಪಾಡು ನಡೆಯಬೇಕಲ್ಲ’ ಎಂಬುದು ಇಂಡಿಯಾ ಸ್ಟೇಷನರಿ ಮತ್ತು ಜನರಲ್ ಸ್ಟೋರ್ ನಡೆಸುತ್ತಿರುವ ಖಾಜಾಸಲಾವುದ್ದೀನ್ ಸಾಜಿದ್ ಖಾದ್ರಿ ಅಳಲು.
‘ಶೀಘ್ರವೇ ಸಮಸ್ಯೆ ಪರಿಹಾರ’
‘ರಸ್ತೆ ಗುಂಡಿಗಳಿಗೂ ಒಳಚರಂಡಿ ಉಕ್ಕೇರುವುದಕ್ಕೂ ಸಂಬಂಧವಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಬಳಿಕ ಒಳಚರಂಡಿ ಉಕ್ಕೇರಿ ಅಲ್ಲಿ ಗಲೀಜು ನೀರು ಜಮಾಯಿಸುತ್ತಿದೆ. ಬರೀ ರಸ್ತೆ ದುರಸ್ತಿ ಮಾಡಿದರೆ ಅದು ಸರಿಯಾಗಲ್ಲ. ಚರಂಡಿ ಕಾಮಗಾರಿ ಬಳಿಕ ರಸ್ತೆ ದುರಸ್ತಿ ಮಾಡಬೇಕಿದೆ. ಒಳಚರಂಡಿ ಪೈಪ್‌ಲೈನ್ ಕಾಮಗಾರಿ ಒಂದಿಷ್ಟು ಮಾಡಲಾಗಿದೆ. ಇನ್ನುಳಿದ ಕಾಮಗಾರಿ ವಿದ್ಯುತ್ ಪರಿವರ್ತಕದ ನಡುವೆ ನಡೆಸಬೇಕಿದ್ದು ಅದಕ್ಕೆ ಜೆಸ್ಕಾಂ ಅನುಮತಿ ಪಡೆದು ಕಾಮಗಾರಿ ನಡೆಸಬೇಕಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಒಳಚರಂಡಿ ಸಮಸ್ಯೆ ರಸ್ತೆ ಗುಂಡಿ ಸಮಸ್ಯೆ ಪರಿಹಾರವಾಗಲಿದೆ’ ಎಂದು ಮಹಾನಗರ ಪಾಲಿಕೆಯ ವಾರ್ಡ್ ಸದಸ್ಯ ಯಲ್ಲಪ್ಪ ನಾಯಕೊಡಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.