ADVERTISEMENT

ಕಲಬುರಗಿ: ರಸ್ತೆ ಅತಿಕ್ರಮಿಸಿಕೊಂಡ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:44 IST
Last Updated 27 ಅಕ್ಟೋಬರ್ 2025, 5:44 IST
ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಪಿಡಿಎ ಕಾಲೇಜಿಗೆ ಹೊಗವ ರಸ್ತೆ ಗುಂಡಿಗಳು ಬಿದ್ದಿರುವುದ‌ರಿಂದ ಸಂಚಾರಕ್ಕೆ ತೊಂದರೆ ಉಂಟಾಗಿ‌ದೆ.ಪ್ರಜಾವಾಣಿ ಚಿತ್ರ
ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಪಿಡಿಎ ಕಾಲೇಜಿಗೆ ಹೊಗವ ರಸ್ತೆ ಗುಂಡಿಗಳು ಬಿದ್ದಿರುವುದ‌ರಿಂದ ಸಂಚಾರಕ್ಕೆ ತೊಂದರೆ ಉಂಟಾಗಿ‌ದೆ.ಪ್ರಜಾವಾಣಿ ಚಿತ್ರ   

ಕಲಬುರಗಿ: ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪಿಡಿಎ ಎಂಜಿನಿಯರಿಂಗ್ ಕಾಲೇಜಿಗೆ ತೆರಳುವ ರಸ್ತೆಯಲ್ಲಿನ ಚರಂಡಿಗಳು ತುಂಬಿಕೊಂಡಿವೆ. ಹೀಗಾಗಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ.

ಈ ರಸ್ತೆಯಲ್ಲಿ ಹಲವು ಕಾಲೇಜು, ಜಿಲ್ಲಾ ಕ್ರಿಡಾಂಗಣ, ಅನೇಕ ಸರ್ಕಾರಿ ಕಚೇರಿಗಳಿವೆ. ಅಲ್ಲದೆ ಕೋರಂಟಿ ಹನುಮಾನ್ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದೆ. ಚರಂಡಿಗಳನ್ನು ನಿಯಮಿತವಾಗಿ ಮಹಾನಗರ ಪಾಲಿಕೆ ಸ್ವಚ್ಛಗೊಳಿಸದ ಪರಿಣಾಮ, ಘನ ಮತ್ತು ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿ ಚರಂಡಿ ನೀರು ಮುಂದೆ ಸಾಗಲು ಆಗದೆ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಚರಂಡಿ ನೀರಿನಲ್ಲಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. 

ಜನನಿಬಿಡವಾದ ಈ ರಸ್ತೆಯು ಕಿರಿದಾಗಿದ್ದು, ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿರುತ್ತಾರೆ. ಹೀಗಾಗಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಕಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ವಯಸ್ಸಾದವರು ಮತ್ತು ಮಹಿಳೆಯರು ರಸ್ತೆಯಲ್ಲಿ ಸಾಗುವುದು ಸಾಹಸವಾಗಿದೆ.

ADVERTISEMENT

‘ಮಳೆ ಸುರಿದ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಈ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿರುವುದರ ಜೊತೆಗೆ ಸೊಳ್ಳೆಯ ಕಾಟ ಹೆಚ್ಚಾಗಿದೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ’ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

‘ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣ ವಾಹನಗಳ ಓಡಾಟದಿಂದ ಪಾದಚಾರಿಗಳಿಗೆ ನೀರು ಸಿಡಿದು ವಿದ್ಯಾರ್ಥಿಗಳ ಮಧ್ಯೆ ಹಲವಾರು ಬಾರಿ ಜಗಳಗಳಾಗಿವೆ’ ಎನ್ನುತ್ತಾರೆ ವ್ಯಾಪಾರಿ ಅತಿಫ್.

ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಪಿಡಿಎ ಕಾಲೇಜಿಗೆ ಹೊಗವ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದು

‘ಕಳೆದ ಮೂರು ನಾಲ್ಕು ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಇದೆ. ಕಸ ವಿಲೇವಾರಿ ಹಾಗೂ ಚರಂಡಿ ಸಮಸ್ಯೆ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ದೂರುಗಳನ್ನು ಸಹ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸಾಯಿಕುಮಾರ್ ರುಸ್ತಂಪುರ.

ವ್ಯಾಪಾರಕ್ಕೆ ಅಡ್ಡಿ: ರಸ್ತೆಗೆ ಹೊಂದಿಕೊಂಡಿರುವ ‘ಲಬೈಕ್‌ ಟವರ್‌’ನ ನೆಲಮಹಡಿಯ ವಾಣಿಜ್ಯ ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದೆ. ಇದರಿಂದ ಆ ಅಂಗಡಿಗಳನ್ನು ಬಂದ್‌ ಮಾಡುವ ಅನಿವಾರ್ಯತೆ ಎದುರಾಗಿದೆ.

ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಪಿಡಿಎ ಕಾಲೇಜಿಗೆ ಹೊಗವ ರಸ್ತೆ ಗುಂಡಿಗಳು ಬಿದ್ದಿರುವುದ‌ರಿಂದ ಸಂಚಾರಕ್ಕೆ ತೊಂದರೆ ಉಂಟಾಗಿ‌ದೆ.ಪ್ರಜಾವಾಣಿ ಚಿತ್ರ
ಲ್‌ ಬದರ್‌ ಮಹಿಳಾ ವಸತಿ ನಿಲಯದಿಂದ ಖರ್ಗೆ ಅವರ ನಿವಾಸದ ಮಾರ್ಗವಾಗಿ ಪಿಡಿಎ ಕಾಲೇಜುವರೆಗೆ ಯುಜಿಡಿ ನಿರ್ಮಾಣಕ್ಕೆ ₹ 44 ಕೋಟಿ ಅನುದಾನ ಬಿಡುಗಡೆಯಾಗಿದ್ದು ಶಿಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ
ಲತಾ ರಾಠೋಡ ಮಹಾನಗರ ಪಾಲಿಕೆ ಸದಸ್ಯೆ
ಮೂರು ತಿಂಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಹೀಗಾಗಿ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು
ಗೋವಿಂದ ಪುರೋಹಿತ ಸ್ಥಳೀಯ ನಿವಾಸಿ
ನೂತನ ಚರಂಡಿ ಕಾಮಗಾರಿಗೆ ಟೆಂಡರ್‌ ಆಗಿದ್ದು ಒಂದು ವಾರದಲ್ಲಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ
ವಿಶಾಲ ದರ್ಗಿ ಮಹಾನಗರ ಪಾಲಿಕೆ ಸದಸ್ಯ

ಸಮಸ್ಯೆಗಳ ಆಗರವಾದ ಐವಾನ್‌ ಇ ಶಾಹಿ ಕಾಲೊನಿ

ನಗರದ ಪ್ರತಿಷ್ಠಿತ ಬಡವಾಣೆಗಳಲ್ಲಿ ಒಂದಾಗಿರುವ ಐವಾನ್‌ ಇ ಶಾಹಿ ಕಾಲೊನಿಯ ರಸ್ತೆಗಳು ಹದಗೆಟ್ಟಿದ್ದು ವಾಹನ ಸವಾರರಿಗೆ ಸಂಕಷ್ಟವಾಗಿದೆ. ಅಲ್ಲದೆ ಒಳಚರಂಡಿ (ಯುಜಿಡಿ) ನೀರು ಬೀದಿಗಳ ತುಂಬಾ ಹರಿಯುತ್ತಿದೆ.  ನೀರಿನ ಪೈಪ್‌ಲೈನ್ ಅಳವಡಿಕೆ ಯುಜಿಡಿ ಕಾಮಗಾರಿಗಳಿಗಾಗಿ ತೆಗೆದ ತಗ್ಗುಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಹೀಗಾಗಿ ವಾಹನ ಚಾಲಕರು ಮತ್ತು ಬೈಕ್ ಸವಾರರು ಸರ್ಕಸ್‌ ಮಾಡುವಂತಾಗಿದೆ.

ಕೂಡಲೇ ರಸ್ತೆಗಳನ್ನು ಸರಿಪಡಿಸಿ ಸರಾಗ ಸಂಚಾರಕ್ಕೆ ಅನುವು ಮಾಡಿಕೊಡಬೇಕಯ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಕಸದ ಸಮಸ್ಯೆ: ಕಸದ ಡಬ್ಬಿಗಳು ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಆದರೆ ಸೂಕ್ತ ವಿಲೇವಾರಿಯಿಲ್ಲದ ಕಾರಣ ಕಸದ ರಾಶಿ ಎಲ್ಲೆಡೆ ಕಾಣ ಸಿಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.