
ಕಲಬುರಗಿ: ‘ಕಲಬುರಗಿ ನಾಟಕೋತ್ಸವದಿಂದ ಕಲೆ, ಸಾಹಿತ್ಯ ಜೊತೆಗೆ ಕಲಾವಿದರಿಗೆ ಪ್ರೋತ್ಸಾಹ ಸಿಕ್ಕಂತಾಗಿದೆ. ಕಲಾವಿದರ ಪ್ರತಿಭಾಪ್ರದರ್ಶನ ಮತ್ತು ಜನರ ಮನರಂಜನೆಗೆ ನಾಟಕೋತ್ಸವ ವೇದಿಕೆ ಕಲ್ಪಿಸಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ ಅಧೀನದ ಕಲಬುರಗಿ ನೆಕ್ಸ್ಟ್ ಪ್ರತಿಷ್ಠಾನವು ಬೆಂಗಳೂರಿನ ರಂಗಶಂಕರ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಕಲಬುರಗಿ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಚಿವ ಪ್ರಿಯಾಂಕ್ ಖರ್ಗೆ, ನಾನು ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಉತ್ಸವಗಳನ್ನು ಮಾಡಬೇಕು ಎಂದು ಆಲೋಚಿಸಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಗುಣಮಟ್ಟದ ನಾಟಕಗಳು ಪ್ರದರ್ಶನ ಕಂಡಿವೆ ಮತ್ತು ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ, ಪ್ರೋತ್ಸಾಹ ದೊರೆತಿದೆ. 5 ವರ್ಷ ಇದೇ ರೀತಿಯ ರಂಗಚಟುವಟಿಕೆ ನಡೆಯಲಿದ್ದು, ಈಗಿನ ನಾಟಕೋತ್ಸವ ಬುನಾದಿ ಆಗಲಿದೆ’ ಎಂದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಎಂಟು ದಿನಗಳ ಕಾಲ ಜೀವನ ಬದಲಾವಣೆಗೆ ಪ್ರೇರಣೆಯಾಗುವಂತಹ ಅದ್ಭುತ ನಾಟಕಗಳನ್ನು ರಂಗ ಶಂಕರ, ರಂಗಾಯಣ ಸೇರಿ ಎಲ್ಲಾ ತಂಡಗಳ ಕಲಾವಿದರು ಪ್ರದರ್ಶನ ಮಾಡಿದ್ದಾರೆ. ವಿಶೇಷವಾಗಿ ದೇಶದ ವಿವಿಧ ಭಾಗಗಳ ಕಲಾ ತಂಡಗಳನ್ನು ಕಲಬುರಗಿಗೆ ಕರೆತಂದ ರಂಗ ಶಂಕರ ಸಂಸ್ಥೆಯ ಅರುಂಧತಿ ನಾಗ್ ಅವರಿಗೆ ಧನ್ಯವಾದ. ಮುಂದಿನ ವರ್ಷ ಶಾಲಾ–ಕಾಲೇಜು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರಿಯಾಗಿಸಿ ನಾಟಕಗಳ ಪ್ರದರ್ಶನಕ್ಕೆ ಯೋಜಿಸಲಾಗಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಾಟಕೋತ್ಸವದಲ್ಲಿ ಪ್ರತಿದಿನ ರಂಗಮಂದಿರದಲ್ಲಿ ವಯಸ್ಕರಿಗೆ ಮತ್ತು ರಂಗಾಯಣದಲ್ಲಿ ಮಕ್ಕಳಿಗೆ ನಾಟಕಗಳು ಪ್ರದರ್ಶನಗೊಂಡವು. ಕಲಬುರಗಿ ಜನರಿಗೆ ಅದ್ಭುತ ನಾಟಕಗಳನ್ನು ನೋಡಲು ಅವಕಾಶ ಸಿಕ್ಕಿತು. ಮುಖ್ಯಮಂತ್ರಿ ನಾಟಕ ವೀಕ್ಷಣೆಗೆ ಹೆಚ್ಚಿನ ಜನ ಬಂದಿದ್ದರು. ಪ್ರತಿದಿನ 500–600 ಜನ ನಾಟಕ ವೀಕ್ಷಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ರಂಗಾಸಕ್ತರಿಗಾಗಿ ಸಂವಾದ ಕೂಡ ಏರ್ಪಡಿಲಾಗಿತ್ತು’ ಎಂದು ತಿಳಿಸಿದರು.
ಶಾಸಕ ಎಂ.ವೈ.ಪಾಟೀಲ, ಉಪವಿಭಾಗಾಧಿಕಾರಿ ಸಾಹಿತ್ಯ ಆಲದಕಟ್ಟಿ, ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಆಡಳಿತಾಧಿಕಾರಿ ಸಿದ್ರಾಮ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ, ತಹಶೀಲ್ದಾರ್ ಕೆ.ಆನಂದಶೀಲ ಇದ್ದರು. ಶಿವಾನಂದ ಅಣಜಗಿ ನಿರೂಪಿಸಿದರು.
ಬಳಿಕ ಲಕ್ಷ್ಮಣ್ ಕೆ.ಪಿ. ನಿರ್ದೇಶನದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ ಪ್ರದರ್ಶನ ಕಂಡಿತು.
ರಂಗ ಶಿಕ್ಷಕರ ನೇಮಕಾತಿಗೆ ಮನವಿ ‘
2008ರಲ್ಲಿ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 50 ಜನ ರಂಗ ಪದವೀಧರರನ್ನು ರಂಗ ಶಿಕ್ಷಕರನ್ನಾಗಿ ನೇಮಕಾತಿ ಮಾಡಿಕೊಂಡಿದ್ದು ತದನಂತರ ನೇಮಕಾತಿ ಆಗಿಲ್ಲ. ಕಲಬುರಗಿ ವಿಭಾಗದಲ್ಲಿಯೇ ಸುಮಾರು 500 ಜನ ರಂಗ ತರಬೇತಿ ಪಡೆದ ಅಭ್ಯರ್ಥಿಗಳಿದ್ದಾರೆ. ಶಿಕ್ಷಣದಲ್ಲಿ ರಂಗಭೂಮಿ ಅಳವಡಿಸಿ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ರಂಗ ಶಿಕ್ಷಕರನ್ನು ಸರ್ಕಾರ ನೇಮಿಸಿಕೊಳ್ಳಬೇಕು’ ಎಂದು ಹಿರಿಯ ರಂಗಕರ್ಮಿ ಶಂಕ್ರಯ್ಯ ಘಂಟಿ ಮತ್ತು ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ನೇತೃತ್ವದಲ್ಲಿ ರಂಗ ಶಿಕ್ಷಕರ ನಿಯೋಗವು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.